ADVERTISEMENT

ಬೆಳಗಾವಿ ಪಾಲಿಕೆ ಆಸ್ತಿ: ಮಾಹಿತಿ ನೀಡುವಲ್ಲಿ ವಿಳಂಬ ಎಂದು ಸದಸ್ಯರ ಅಸಮಾಧಾನ

ಪಾಲಿಕೆ ಪರಿಷತ್‌ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಹರಿಹಾಯ್ದ ಸದಸ್ಯರು

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 3:02 IST
Last Updated 13 ಜನವರಿ 2026, 3:02 IST
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸೋಮವಾರ ನಡೆದ ಪರಿಷತ್‌ ಸಭೆಯಲ್ಲಿ ಶಾಸಕರಾದ ಅಭಯ ಪಾಟೀಲ, ಆಸಿಫ್‌ ಸೇಠ್‌ ಮಾತನಾಡಿದರು ಪ್ರಜಾವಾಣಿ ಚಿತ್ರ
ಬೆಳಗಾವಿ ಮಹಾನಗರ ಪಾಲಿಕೆಯಲ್ಲಿ ಸೋಮವಾರ ನಡೆದ ಪರಿಷತ್‌ ಸಭೆಯಲ್ಲಿ ಶಾಸಕರಾದ ಅಭಯ ಪಾಟೀಲ, ಆಸಿಫ್‌ ಸೇಠ್‌ ಮಾತನಾಡಿದರು ಪ್ರಜಾವಾಣಿ ಚಿತ್ರ   

ಬೆಳಗಾವಿ: ‘ಪಾಲಿಕೆಗೆ ಸೇರಿದ ಕೆಲವು ಆಸ್ತಿಗಳ ಗುತ್ತಿಗೆ ಅವಧಿ ಮುಗಿದಿದ್ದರೂ, ಅವುಗಳನ್ನು ಅಧಿಕಾರಿಗಳು ಸ್ವಾಧೀನ ಪಡಿಸಿಕೊಂಡಿಲ್ಲ. ಇನ್ನೂ ಪಾಲಿಕೆ ಆಸ್ತಿಗಳ ಕುರಿತಾಗಿ ಯಾವುದೇ ಮಾಹಿತಿ ಕೇಳಿದರೂ, ಸಕಾಲಕ್ಕೆ ಒದಗಿಸುತ್ತಿಲ್ಲ’ ಎಂದು ಸದಸ್ಯರು ಮತ್ತು ಶಾಸಕರು ತರಾಟೆಗೆ ತೆಗೆದುಕೊಂಡಿದರು.

ಇಲ್ಲಿನ ಮಹಾನಗರ ಪಾಲಿಕೆಯಲ್ಲಿ ಮೇಯರ್‌ ಮಂಗೇಶ ಪವಾರ ಅಧ್ಯಕ್ಷತೆಯಲ್ಲಿ ಸೋಮವಾರ ಪರಿಷತ್‌ ಸಭೆ ನಡೆಯಿತು.

ಆರಂಭದಲ್ಲೇ ಆಡಳಿತ ಪಕ್ಷದ ಸದಸ್ಯ ಶಂಕರ ಪಾಟೀಲ, ಪಾಲಿಕೆಗೆ ಸೇರಿದ ಆಸ್ತಿ ಮತ್ತು ಸ್ಥಿತಿಗತಿ ಕುರಿತ ಮಾಹಿತಿ ಒದಗಿಸುವಲ್ಲಿ ಅಧಿಕಾರಿಗಳು ವಿಳಂಬ ಮಾಡುತ್ತಿರುವ ವಿಷಯ ಪ್ರಸ್ತಾಪಿಸಿದರು. 

ADVERTISEMENT

‘ಪಾಲಿಕೆ ಈಗ ಆರ್ಥಿಕ ಸಮಸ್ಯೆ ಎದುರಿಸುತ್ತಿದೆ. ಪಾಲಿಕೆ ಆಸ್ತಿಗಳ ಕುರಿತಾಗಿ ಮಾಹಿತಿ  ಕೋರಿ, ಆಯುಕ್ತರಿಗೆ ಪತ್ರ ನೀಡಿ ಒಂದು ತಿಂಗಳಿಗಿಂತ ಹೆಚ್ಚಿನ ಸಮಯವಾಗಿದೆ. ಸದಸ್ಯರು ಕೇಳಿದ ಯಾವುದೇ ಮಾಹಿತಿಯನ್ನು 10 ದಿನಗಳಲ್ಲಿ ತಲುಪಿಸಬೇಕು ಎಂಬ ನಿರ್ಣಯ ಸಹ ಅಂಗೀಕರಿಸಲಾಗಿದೆ. ಆದರೆ, ಸಕಾಲಕ್ಕೆ ಯಾವ ಮಾಹಿತಿಯೂ ಸಿಗುತ್ತಿಲ್ಲ’ ಎಂದು ಆಪಾದಿಸಿದರು.

ಸದಸ್ಯರು ಕೇಳಿದ ಮಾಹಿತಿ ಸಕಾಲಕ್ಕೆ ತಲುಪಿಸದ ಅಧಿಕಾರಿಗಳ ವಿರುದ್ಧ ಶಾಸಕ ಅಭಯ ಪಾಟೀಲ ಕೂಡ ಆಕ್ರೋಶ ವ್ಯಕ್ತಪಡಿಸಿದರು.

‘ವಿಭಾಗದ ಮುಖ್ಯಸ್ಥರು ಹೊಸಬರೇ ಇರಲಿ ಅಥವಾ ಹಳಬರಿರಲಿ. ಸದಸ್ಯರು ಕೇಳಿದ ಮಾಹಿತಿಯನ್ನು ಕಾಲಮಿತಿಯಲ್ಲಿ ನೀಡಬೇಕು. ನೆಪ ಹೇಳಿ ವಿಳಂಬ ಮಾಡಬಾರದು. ಪಾಲಿಕೆ ಆಸ್ತಿಗಳ ಮಾಹಿತಿ ಒಂದು ವಾರದೊಳಗೆ ನೀಡದಿದ್ದರೆ, ಸಂಬಂಧಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಎಚ್ಚರಿಕೆ ಕೊಟ್ಟರು.

ಉಪ ಆಯುಕ್ತ(ಕಂದಾಯ) ಸಿದ್ದು ಹುಲ್ಲೋಳ್ಳಿ, ‘ನಾನು ಹೊಸದಾಗಿ ಜವಾಬ್ದಾರಿ ವಹಿಸಿಕೊಂಡಿದ್ದು, ಸದಸ್ಯರು ಕೇಳಿದ ಮಾಹಿತಿ ಸಂಗ್ರಹಿಸುತ್ತೇನೆ. ಇದಕ್ಕಾಗಿ 15 ದಿನಗಳ ಸಮಯ ಬೇಕಾಗುತ್ತದೆ’ ಎಂದರು.

ಆಡಳಿತ ಗುಂಪಿನ ಸದಸ್ಯ ರವಿ ಧೋತ್ರೆ, ‘ಹೂವಿನ ಮಾರುಕಟ್ಟೆ ಪಾಲಿಕೆ ಆಸ್ತಿಯಾಗಿದ್ದು, ಅದರಲ್ಲಿ ಕೋಟ್ಯಂತರ ರೂಪಾಯಿ ಹೂಡಿಕೆ ಮಾಡಲಾಗಿದೆ. ಅದರಿಂದ ಯಾರು ಆದಾಯ ಸಂಗ್ರಹಿಸುತ್ತಿದ್ದಾರೆ ಎಂಬ ಮಾಹಿತಿ ಕಂದಾಯ ವಿಭಾಗದ ಅಧಿಕಾರಿಗಳಿಗೆ ಇಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಸಂಬಂಧಿತ ಅಧಿಕಾರಿಗಳು ಮಾಹಿತಿ ನೀಡದಿದ್ದರೆ, ನಾವು ಅವರ ವಿರುದ್ಧ ನಿರ್ಣಯ ಅಂಗೀಕರಿಸಬೇಕು. ಅಗತ್ಯ ಕ್ರಮಕ್ಕಾಗಿ ನಗರಾಭಿವೃದ್ಧಿ ಇಲಾಖೆ ಮತ್ತು ಡಿಪಿಎಆರ್‌ಗೆ ವರದಿ ಕಳುಹಿಸಬೇಕು’ ಎಂದು ಆಗ್ರಹಿಸಿದರು.

ವಿರೋಧ ಪಕ್ಷದ ಸದಸ್ಯ ರಿಯಾಜ್ ಕಿಲ್ಲೇದಾರ, ‘ಚಾವಿ ಮಾರುಕಟ್ಟೆಯಲ್ಲಿ ಇರುವ ಆಸ್ತಿಗಳು ಸೇರಿ ಪಾಲಿಕೆಯ ಹಲವು ಆಸ್ತಿಗಳ ಗುತ್ತಿಗೆ ಅವಧಿ 12 ವರ್ಷಗಳ ಹಿಂದೆಯೇ ಮುಗಿದಿದೆ.  ಆದರೆ, ಆಸ್ತಿಗಳನ್ನು ಸ್ವಾಧೀನಪಡಿಸಿಕೊಂಡಿಲ್ಲ. ಅವುಗಳಿಂದ ಬಾಡಿಗೆ ಕೂಡ ಸಂಗ್ರಹಿಸಲಾಗಿಲ್ಲ. ಇದರಿಂದ ಪಾಲಿಕೆಗೆ ಕೋಟಿಗಟ್ಟಲೆ ಆದಾಯ ನಷ್ಟವಾಗಿದೆ’ ಎಂದು ಹೇಳಿದರು.

ವಿರೋಧ ಪಕ್ಷದ ಸದಸ್ಯ ರಮೇಶ ಸೊಂಟಕ್ಕಿ, ‘ಮೇಯರ್ ಪವಾರ ಅವರಿಗೆ ಅಧಿಕಾರಿಗಳ ಮೇಲೆ ನಿಯಂತ್ರಣವಿಲ್ಲ. ಹಾಗಾಗಿ ಸದಸ್ಯರು ಕೇಳಿದ ಮಾಹಿತಿಯನ್ನು ಕೊಡಲು ಅಧಿಕಾರಿಗಳು ವಿಳಂಬ ಮಾಡುತ್ತಿದ್ದಾರೆ ಮತ್ತು ನಿರಾಕರಿಸುತ್ತಿದ್ದಾರೆ’ ಎಂದು ಆಪಾದಿಸಿದರು.

‘ಒಳಚರಂಡಿ ವ್ಯವಸ್ಥೆ ಮತ್ತಿತರ ಕಾಮಗಾರಿಗಾಗಿ ಬೆಳಗಾವಿ ದಕ್ಷಿಣ ಮತ್ತು ಬೆಳಗಾವಿ ಉತ್ತರ ಕ್ಷೇತ್ರಗಳಿಗೆ ಅನುದಾನ ಹಂಚಿಕೆ ಮಾಡುವಲ್ಲಿ ಪಾಲಿಕೆ ಅಧಿಕಾರಿಗಳು ತಾರತಮ್ಯ ಮಾಡುತ್ತಿದ್ದಾರೆ’ ಎಂದು ಅಭಯ ಪಾಟೀಲ ದೂರಿದರು 

ಇದಕ್ಕೆ ಪ್ರತಿಕ್ರಿಯಿಸಿದ ಸೇಠ್‌, ‘ಇಬ್ಬರೂ ಮಾತನಾಡಿ, ಸಮಸ್ಯೆ ಬಗೆಹರಿಸಿಕೊಳ್ಳೋಣ’ ಎಂದರು.

ತಡವಾಗಿ ಆರಂಭವಾದ ಸಭೆ

ಎಂದಿನಂತೆ ಈ ಬಾರಿಯೂ ಪಾಲಿಕೆ ಪರಿಷತ್‌ ಸಭೆ ತಡವಾಗಿ ಆರಂಭವಾಯಿತು. ನಿಗದಿಯಂತೆ ಬೆಳಿಗ್ಗೆ 11ಕ್ಕೆ ಆರಂಭವಾಗಬೇಕಿತ್ತು. ಆದರೆ ಮಧ್ಯಾಹ್ನ 12.40ರ ನಂತರ ಆರಂಭಗೊಂಡಿತು. ವಿರೋಧ ಪಕ್ಷದ ಸದಸ್ಯ ರಮೇಶ ಸೊಂಟಕ್ಕಿ ‘ಯಾವುದೇ ಸಭೆಯಲ್ಲಿ ಸಮಯ ಶಿಸ್ತು ಪಾಲಿಸಬೇಕು. ಮೇಯರ್ ಅದನ್ನು ಖಚಿತಪಡಿಸಿಕೊಳ್ಳಬೇಕು’ ಎಂದು ಹೇಳಿದರು. ‘ಮುಂದಿನ ಬಾರಿ ನಿಗದಿಯಂತೆ ಸಭೆ ಆರಂಭವಾಗುತ್ತದೆ. ಎಲ್ಲರೂ ಸಮಯ ಶಿಸ್ತು ಪಾಲಿಸುತ್ತಾರೆ’ ಎಂದು ಪವಾರ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.