ADVERTISEMENT

ಬೆಳಗಾವಿ: ಕಾರು ಅಪಘಾತದಲ್ಲಿ ಇಬ್ಬರು ಮಹಿಳೆಯರ ಸಾವು

​ಪ್ರಜಾವಾಣಿ ವಾರ್ತೆ
Published 25 ಮೇ 2020, 8:16 IST
Last Updated 25 ಮೇ 2020, 8:16 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಳಗಾವಿ: ತಾಲ್ಲೂಕಿನ ಮುತಗಾ- ನಿಲಜಿ ನಡುವಿನ ಬಾಚಿ- ರಾಯಚೂರು ರಾಜ್ಯ ಹೆದ್ದಾರಿ ಬದಿಯಲ್ಲಿ ಭಾನುವಾರ ರಾತ್ರಿ ವಾಯುವಿಹಾರ ಮಾಡುತ್ತಿದ್ದ ಮಹಿಳೆಯರಿಬ್ಬರು ಕಾರು ಡಿಕ್ಕಿಯಾಗಿ ಮೃತಪಟ್ಟರು. ಇನ್ನೊಬ್ಬ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ‌.

ಮುತಗಾ ಗ್ರಾಮದ ಪ್ರಭಾವತಿ ಕಾಲೊನಿಯ ಸವಿತಾ ಬಾಲಕೃಷ್ಣ ಪಾಟೀಲ (44) ಹಾಗೂ ವಿದ್ಯಾ ಬಾವು ಪಾಟೀಲ (48) ಮೃತರು. ಗಾಯಗೊಂಡಿರುವ ಶಾಂತಾ ಕೃಷ್ಣ ಚೌಗುಲೆ (55) ಎನ್ನುವವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಕಾರಿನ ಚಾಲಕ ಕೂಡ ಗಾಯಗೊಂಡಿದ್ದಾರೆ.

ಅಪಘಾತ ಮಾಡುತ್ತಿದ್ದವರನ್ನು ಬೆಳಗಾವಿಯಿಂದ ಸಾಂಬ್ರಾ ಕಡೆಗೆ ಹೋಗುತ್ತಿದ್ದ ಬಿಜೆಪಿ ಯುವ ಮೋರ್ಚಾದ ಮುಖಂಡ ಯುವರಾಜ‌ ಜಾಧವ ಎಂದು ಗುರುತಿಸಲಾಗಿದೆ. ಕಾರು ವಾಕ್ ಮಾಡುತ್ತಿದ್ದವರಿಗೆ ಡಿಕ್ಕಿಯಾಗಿ ಮುಂದೆ ಹೋಗಿ ಮನೆಗೆ ಗುದ್ದಿ ನಿಂತಿದೆ ಎಂದು ಸ್ಥಳಕ್ಕೆ ಭೇಟಿ ನೀಡಿದ್ದ ಯಶೋದಾ ವಂಟಗೋಡಿ ತಿಳಿಸಿದರು.

ADVERTISEMENT

ವಿದ್ಯಾ ಪಾಟೀಲ ಅವರ ಪತಿ ಕೇರಳದ ಕೊಚ್ಚಿಯಲ್ಲಿ ಭಾರತೀಯ ಸೇನೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮೃತ ಸವಿತಾ ಪತಿ ಹಾಗೂ ಗಾಯಗೊಂಡಿರುವ ಶಾಂತಾ ಪತಿ ನಿವೃತ್ತ ಸೈನಿಕರು ಎಂದು ತಿಳಿದುಬಂದಿದೆ.

ಸ್ಥಳಕ್ಕೆ ಗ್ರಾಮೀಣ ಎಸಿಪಿ ಶಿವಾರೆಡ್ಡಿ, ಇನ್‌ಸ್ಪೆಕ್ಟರ್ ವಿಜಯಕುಮಾರ ಶಿನ್ನೂರ ಭೇಟಿ ನೀಡಿ ಪರಿಶೀಲಿಸಿದರು. ಮಾರಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.