ADVERTISEMENT

‘ಗಾಂಧಿ ಭಾರತ’ ಕಾರ್ಯಕ್ರಮಕ್ಕೆ ಬೆಳಗಾವಿ ಸಜ್ಜು: ಅಂದಾಜು ₹20 ಕೋಟಿ ವೆಚ್ಚ

ಕುಂದಾನಗರಿ ಸಜ್ಜು, ಜಿಲ್ಲಾಡಳಿತದಿಂದ ದೀಪಾಲಂಕಾರ, ಪ್ರತಿಮೆ ಅನಾವರಣ

ಸಂತೋಷ ಈ.ಚಿನಗುಡಿ
Published 24 ಡಿಸೆಂಬರ್ 2024, 23:24 IST
Last Updated 24 ಡಿಸೆಂಬರ್ 2024, 23:24 IST
‘ಗಾಂಧಿ ಭಾರತ’ ಶತಮಾನೋತ್ಸವಕ್ಕಾಗಿ ಬೆಳಗಾವಿಯ ‘ಕಾಂಗ್ರೆಸ್‌ ರಸ್ತೆ’ಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ನಿರ್ಮಿಸಿದ ಸ್ವಾಗತ ಕಮಾನು
‘ಗಾಂಧಿ ಭಾರತ’ ಶತಮಾನೋತ್ಸವಕ್ಕಾಗಿ ಬೆಳಗಾವಿಯ ‘ಕಾಂಗ್ರೆಸ್‌ ರಸ್ತೆ’ಯಲ್ಲಿ ಕಾಂಗ್ರೆಸ್‌ ಪಕ್ಷದಿಂದ ನಿರ್ಮಿಸಿದ ಸ್ವಾಗತ ಕಮಾನು   

ಬೆಳಗಾವಿ: ಡಿ.26 ಹಾಗೂ 27ರಂದು ನಡೆಯುವ ‘ಗಾಂಧಿ ಭಾರತ’ ಕಾರ್ಯಕ್ರಮಕ್ಕೆ ಕುಂದಾನಗರಿ ಸಜ್ಜುಗೊಂಡಿದೆ. ಇಲ್ಲಿನ ವೀರಸೌಧ ಹಾಗೂ ಸುವರ್ಣಸೌಧ ಈ ಎರಡೂ ಕಡೆಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.  ಜಿಲ್ಲಾಡಳಿತದಿಂದ ಅಂದಾಜು ₹20 ಕೋಟಿ ವೆಚ್ಚ ಮಾಡಲಾಗುತ್ತಿದೆ.

1924ರಲ್ಲಿ ಮಹಾತ್ಮ ಗಾಂಧೀಜಿ ಅಧ್ಯಕ್ಷತೆಯಲ್ಲಿ ನಗರದ ಟಿಳಕವಾಡಿಯಲ್ಲಿ ಕಾಂಗ್ರೆಸ್ ಸ್ವಾತಂತ್ರ್ಯ ಯೋಧರ ಅಧಿವೇಶನ ನಡೆದಿತ್ತು. ಗಾಂಧೀಜಿ ಅವರು ಅಧ್ಯಕ್ಷತೆ ವಹಿಸಿದ್ದ ಏಕಮಾತ್ರ ಅಧಿವೇಶನ ಇದಾಗಿತ್ತು. ಅದಕ್ಕೆ ನೂರು ವಸಂತಗಳು ತುಂಬಿದ್ದರಿಂದ ಐತಿಹಾಸಿಕ ಮಹತ್ವ ಬಂದಿದೆ.

‘ಈ ಉತ್ಸವವನ್ನು ಕಾಂಗ್ರೆಸ್‌ ತನ್ನ ಸ್ವಾರ್ಥಕ್ಕೆ ಬಳಸಿಕೊಳ್ಳುತ್ತಿದೆ. ಸರ್ಕಾರದ ಹಣದಲ್ಲಿ ಪಕ್ಷದ ಕೆಲಸ ಮಾಡಿಕೊಳ್ಳುತ್ತಿದೆ’ ಎಂದು ಬಿಜೆಪಿ ಮುಖಂಡರು ತಕರಾರು ತೆಗೆದಿದ್ದಾರೆ.

ADVERTISEMENT

‘ಆಗಿನ ಕಾಂಗ್ರೆಸ್‌ ಈಗಿನ ಕಾಂಗ್ರೆಸ್‌ ಬೇರೆಬೇರೆ. ಗಾಂಧೀಜಿ ಕಟ್ಟಿದ ಕಾಂಗ್ರೆಸ್‌ ಸ್ವಾತಂತ್ರ್ಯ ಹೋರಾಟಕ್ಕೆ ಸೀಮಿತವಾಗಿತ್ತು. ದೇಶದ ಎಲ್ಲ ಜನರೂ ಒಂದಾಗಿ ಹೋರಾಡಿದ್ದರು. ಐತಿಹಾಸಿಕ ಅಧಿವೇಶನವು ಜನರ ಕಾರ್ಯಕ್ರಮ ಆಗಬೇಕಾಗಿತ್ತು. ಈಗಿನ ಕಾಂಗ್ರೆಸ್ಸಿಗರು ತಮ್ಮ ಸ್ವಾರ್ಥಕ್ಕೆ ಈ ಕಾರ್ಯಕ್ರಮ ಬಳಸಿಕೊಳ್ಳುತ್ತಿದ್ದಾರೆ’ ಎಂದು ಸಂಸದ ಜಗದೀಶ ಶೆಟ್ಟರ್‌ ಟೀಕಿಸಿದ್ದಾರೆ.

ಸರ್ಕಾರಿ ಕಾರ್ಯಕ್ರಮಗಳೇನು?:

ಅಧಿವೇಶನಕ್ಕಾಗಿ ನಗರವನ್ನು ಕಣ್ಮನ ಸೆಳೆಯುವಂತೆ ಅಂದಗೊಳಿಸಲಾಗಿದೆ. ಪ್ರತಿ ರಸ್ತೆ, ಗಲ್ಲಿ, ವೃತ್ತಗಳನ್ನು ವರ್ಣರಂಜಿತ ವಿದ್ಯುತ್‌ಗಳಿಂದ ಅಲಂಕರಿಸಲಾಗಿದೆ. ಡಿ.9ರಿಂದ 19ರವರೆಗೆ ನಡೆದ ಚಳಿಗಾಲದ ವಿಧಾನ ಮಂಡಲ ಅಧಿವೇಶನ ವೇಳೆಯೂ ಈ ದೀಪಾಲಂಕಾರ ಮಾಡಲಾಗಿತ್ತು. ಗಾಂಧಿ ಭಾರತ ಅಧಿವೇಶನ ಮುಗಿಯುವವರೆಗೆ ಅಂದರೆ ಡಿ.28ರವರೆಗೆ ಅಲಂಕಾರ ಇರಲಿದ್ದು ಒಟ್ಟಾರೆ ₹8 ಕೋಟಿ ಅಂದಾಜು ವೆಚ್ಚವಾಗಲಿದೆ. ಇದನ್ನು ಹೆಸ್ಕಾಂ ಭರಿಸಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸುವರ್ಣ ವಿಧಾನಸೌಧದ ಮುಂದೆ ₹8.5 ಕೋಟಿ ವೆಚ್ಚದಲ್ಲಿ ಗಾಂಧೀಜಿ ಬೃಹತ್‌ ಪ್ರತಿಮೆ ನಿರ್ಮಿಸಲಾಗಿದೆ. ₹10 ಲಕ್ಷ ವೆಚ್ಚದಲ್ಲಿ ವೀರಸೌಧ (1924ರಲ್ಲಿ ಕಾಂಗ್ರೆಸ್‌ ಅಧಿವೇಶನ ನಡೆದ ಜಾಗ) ಮುಂದೆಯೂ ಗಾಂಧಿ ಪ್ರತಿಮೆ ಸಿದ್ಧಗೊಂಡಿದೆ.

ಆಗಿನ ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಆಗಿದ್ದ ಗಂಗಾಧರರಾವ್‌ ದೇಶಪಾಂಡೆ ಅವರ ಸ್ಮರಣಾರ್ಥ ರಾಮತೀರ್ಥ ನಗರದಲ್ಲಿ ಸ್ಮಾರಕ ಭವನ ನಿರ್ಮಿಸಲಾಗಿದೆ. ಗಾಂಧೀಜಿ ಅವರನ್ನು ಬೆಳಗಾವಿಗೆ ಕರೆತಂದು, ಅಧಿವೇಶನ ಸಂಘಟಿಸಿ, ಯಶಸ್ವಿಗೊಳಿಸಿದ್ದು ಇದೇ ಗಂಗಾಧರರಾವ್ ಅವರು. ಬೆಳಗಾವಿಯವರಾದ ಅವರ ಸ್ಮರಣೆಗೆ ಭವನ ನಿರ್ಮಿಸಿ ಅಲ್ಲಿ ಫೋಟೊ ಗ್ಯಾಲರಿ ಕೂಡ ಸಿದ್ಧಗೊಳಿಸಲಾಗಿದೆ. ಇದಕ್ಕೆ ₹35 ಲಕ್ಷ ವೆಚ್ಚ ಮಾಡಲಾಗಿದೆ.

ಕಾಂಗ್ರೆಸ್‌ ಕಾರ್ಯಕ್ರಮಗಳೇನು?:

ಒಂದೆಡೆ ವೀರಸೌಧ ಇನ್ನೊಂದೆಡೆ ಸುವರ್ಣಸೌಧ; ಎರಡೂ ಕಡೆ ವೈವಿಧ್ಯಮಯ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಸುವರ್ಣಸೌಧದಲ್ಲಿ ನಡೆಯುವ ಕಾರ್ಯಕ್ರಮ ಮಾತ್ರ ಸರ್ಕಾರದ್ದು. ವೀರಸೌಧದಲ್ಲಿ ಕಾಂಗ್ರೆಸ್‌ ಪಕ್ಷದ ಚಟುವಟಿಕೆಗಳನ್ನು ಹಮ್ಮಿಕೊಳ್ಳಲಾಗಿದೆ. ‘ಆದರೆ, ವೀರಸೌಧದ ಪುನರುಜ್ಜೀವನ, ಅಲಂಕಾರ, ದೀಪಗಳ ವ್ಯವಸ್ಥೆಗೆ ಸರ್ಕಾರದ್ದೇ ಹಣ ಖರ್ಚು ಮಾಡಲಾಗಿದೆ’ ಎಂಬುದು ಬಿಜೆಪಿ ಮುಖಂಡರ ದೂರು.

ಡಿ.26ರಂದು ವೀರಸೌಧದಲ್ಲಿ ಎಐಸಿಸಿ ಕಾರ್ಯಕಾರಿಣಿ ಸಭೆ ನಡೆಯಲಿದೆ. ದೇಶದ 150 ಸಂಸದರು ಪಾಲ್ಗೊಳ್ಳಲಿದ್ದಾರೆ. ‘ಕಾಂಗ್ರೆಸ್‌ಗೆ ಹೊಸ ದಿಕ್ಕು ನೀಡುವ ಸಭೆ ಇದು’ ಎಂದೂ ಬಿಂಬಿಸಲಾಗಿದೆ. ಡಿ.27ರಂದು ಸಿ.ಪಿ.ಇಡಿ ಮೈದಾನದಲ್ಲಿ ಕಾಂಗ್ರೆಸ್‌ ಜನ ಸಮಾವೇಶ ಕೂಡ ಆಯೋಜಿಸಲಾಗಿದ್ದು, ಇದು ಕೂಡ ಸಂಪೂರ್ಣ ಪಕ್ಷದ ವೇದಿಕೆಯಾಗಿದೆ.

ಒಂದೆಡೆ, ಜಿಲ್ಲಾಡಳಿತ ಮಾಡಿದ ಸ್ವಾಗತ ಕಮಾನುಗಳು ರಾರಾಜಿಸುತ್ತಿವೆ. ಇನ್ನೊಂದೆಡೆ, ಕಾಂಗ್ರೆಸ್‌ ಪಕ್ಷದ ಸ್ವಾಗತ ಕಮಾನು, ಕಟೌಟುಗಳೂ ಎದ್ದುನಿಂತಿವೆ.

‘ಗಾಂಧಿ ಭಾರತ’ ಶತಮಾನೋತ್ಸವಕ್ಕಾಗಿ ಬೆಳಗಾವಿಯ ‘ಕಾಂಗ್ರೆಸ್‌ ರಸ್ತೆ’ಯಲ್ಲಿರುವ ವೀರಸೌಧದ ಮುಂದೆ ಹೆಸ್ಕಾಂನಿಂದ ಮಾಡಿದ ವಿದ್ಯುದ್ದೀಪಾಲಂಕಾರ
1924ರಲ್ಲಿ ಗಾಂಧೀಜಿ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದರು ಈಗ ಮಲ್ಲಿಕಾರ್ಜುನ ಖರ್ಗೆ ಅಧ್ಯಕ್ಷರಾಗಿದ್ದಾರೆ. ದೇಶಕ್ಕೆ ಸ್ವಾತಂತ್ರ್ಯ ಗಳಿಸಿಕೊಟ್ಟಿದ್ದು ಕಾಂಗ್ರೆಸ್‌ ಪಕ್ಷ. ಈ ಅಧಿವೇಶನ ಕಾಂಗ್ರೆಸ್‌ನ ಇತಿಹಾಸದ ಕನ್ನಡಿ
ಡಿ.ಕೆ.ಶಿವಕುಮಾರ್‌ ಉಪಮುಖ್ಯಮಂತ್ರಿ
ಗಾಂಧೀಜಿ ನೇತೃತ್ವದಲ್ಲಿ ನಡೆದ ಅಧಿವೇಶನದ ಐತಿಹಾಸಿಕ ಮಹತ್ವದ ಘಟನೆ. ವಿಶ್ವಮಟ್ಟದಲ್ಲಿ ಅದನ್ನು ಬಿಂಬಿಸಲು ಸರ್ಕಾರದಿಂದ ವೈಭವಯುತ ಕಾರ್ಯಕ್ರಮ ಆಯೋಜಿಸಲಾಗಿದೆ
ಮೊಹಮ್ಮದ್‌ ರೋಷನ್‌ ಜಿಲ್ಲಾಧಿಕಾರಿ ಬೆಳಗಾವಿ
ಇದು ನಕಲಿ ಗಾಂಧಿಗಳ ಕಾಂಗ್ರೆಸ್‌ ಸಮಾವೇಶ. ಆಗಿನ ಕಾಂಗ್ರೆಸ್‌ಗೂ ಈಗಿನ ಕಾಂಗ್ರೆಸ್‌ಗೂ ಸಂಬಂಧವೇ ಇಲ್ಲ. ಸರ್ಕಾರದ ಹಣ ಪಕ್ಷಕ್ಕೆ ಬಳಸಿಕೊಂಡಿದ್ದಾರೆ. ಯಾರದೋ ದುಡ್ಡು ಯಲ್ಲಮ್ಮನ ಜಾತ್ರೆ ಮಾಡಿದ್ದಾರೆ
ಜಗದೀಶ ಶೆಟ್ಟರ್‌ ಸಂಸದ ಬೆಳಗಾವಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.