ADVERTISEMENT

47 ಗುಂಟೆಯಲ್ಲಿ 136 ಟನ್‌ ಕಬ್ಬು

ಕಾರದಗಾ ಗ್ರಾಮದ ಲಕ್ಷ್ಮಣ, ಬಾವುಸಾಹೇಬ ಸಾಧನೆ

ಸುಧಾಕರ ಎಸ್.ತಳವಾರ, ಬೆಂಗಳೂರು
Published 27 ಜನವರಿ 2020, 11:31 IST
Last Updated 27 ಜನವರಿ 2020, 11:31 IST
ಕಾರದಗಾ ಗ್ರಾಮದ ಕೃಷಿಕ ಲಕ್ಷ್ಮಣ ಪಸಾರೆ ಮತ್ತು ಬಾವುಸಾಹೇಬ್ ಪಸಾರೆ ಸಹೋದರರು ಬೆಳೆದಿರುವ ಕಬ್ಬು ಬೆಳೆಯನ್ನು ಸ್ಥಳೀಯರೊಂದಿಗೆ ಪ್ರದರ್ಶಿಸಿದರು
ಕಾರದಗಾ ಗ್ರಾಮದ ಕೃಷಿಕ ಲಕ್ಷ್ಮಣ ಪಸಾರೆ ಮತ್ತು ಬಾವುಸಾಹೇಬ್ ಪಸಾರೆ ಸಹೋದರರು ಬೆಳೆದಿರುವ ಕಬ್ಬು ಬೆಳೆಯನ್ನು ಸ್ಥಳೀಯರೊಂದಿಗೆ ಪ್ರದರ್ಶಿಸಿದರು   

ಚಿಕ್ಕೋಡಿ: ಸಾಂಪ್ರದಾಯಿಕ ಕೃಷಿ ಪದ್ಧತಿಯನ್ನು ಬಿಟ್ಟು ಅತ್ಯಾಧುನಿಕ ತಾಂತ್ರಿಕತೆ ಮತ್ತು ಸಾವಯವ ಪದ್ಧತಿಯೊಂದಿಗೆ ಕಬ್ಬು ಕೃಷಿ ಕೈಗೊಂಡು 47 ಗುಂಟೆ ಭೂಮಿಯಲ್ಲಿ ಬರೋಬ್ಬರಿ 136 ಟನ್ ಇಳುವರಿ ಪಡೆಯುವ ಮೂಲಕ ನಿಪ್ಪಾಣಿ ತಾಲ್ಲೂಕಿನ ಕಾರದಗಾ ಗ್ರಾಮದ ರೈತ ಸಹೋದರರಿಬ್ಬರು ಕೃಷಿಕರಿಗೆ ಮಾದರಿಯಾಗಿದ್ದಾರೆ.

ಕಾರದಗಾದ ಲಕ್ಷ್ಮಣ ಪಸಾರೆ ಮತ್ತು ಬಾವುಸಾಹೇಬ್ ಪಸಾರೆ ಎಂಬುವವರೇ ಆ ಕೃಷಿ ಸಾಧಕರು.

ದಶಕದಿಂದಲೂ ಸಾವಯವ ಪದ್ಧತಿಯಲ್ಲಿ ಕೃಷಿ ಕೈಗೊಂಡಿದ್ದಾರೆ ಈ ಸಹೋದರರು. ಸತತ 11 ವರ್ಷಗಳಿಂದ ಪ್ರತಿ ಒಂದು ಎಕರೆಗೆ ಸರಾಸರಿ 115 ಟನ್ ಕಬ್ಬು ಬೆಳೆಯುವಲ್ಲಿ ಯಶಸ್ವಿಯಾಗಿದ್ದಾರೆ. ಕಡಿಮೆ ಜಮೀನು, ನೀರು ಮತ್ತು ವೆಚ್ಚದಲ್ಲಿ ಅಧಿಕ ಇಳುವರಿ ಪಡೆಯುವ ಕೃಷಿ ಕೌಶಲವನ್ನು ಕರಗತ ಮಾಡಿಕೊಂಡಿರುವ ಇವರು ಈ ಭಾಗದಲ್ಲಿ ಪ್ರಗತಿಪರ ಕೃಷಿಕರೆಂದೇ ಪರಿಚಿತರಾಗಿದ್ದಾರೆ. ಇವರ ಕೃಷಿ ಸಾಧನೆಗಾಗಿ ಹಲವು ಪ್ರಶಸ್ತಿಗಳು ಸಂದಿವೆ.

ADVERTISEMENT

ಮಹಾರಾಷ್ಟ್ರದ ಶಿರೋಳ ತಾಲ್ಲೂಕಿನ ಹುಪರಿಯ ಜವಾಹರ ಸಹಕಾರಿ ಸಕ್ಕರೆ ಕಾರ್ಖಾನೆಯ ಕೃಷಿ ವಿಭಾಗದ ಮಾರ್ಗದರ್ಶನದಲ್ಲಿ ಕಬ್ಬು ಕೃಷಿ ಕೈಗೊಂಡಿದ್ದಾರೆ. ರಾಜ್ಯ ಕೃಷಿ ಇಲಾಖೆ ಹಾಗೂ ವಿವಿಧ ಸಂಘಟನೆಗಳು ಕೈಗೊಳ್ಳುವ ಕೃಷಿ ತರಬೇತಿ ಕಾರ್ಯಾ‌ಗಾರಗಳಲ್ಲೂ ಭಾಗವಹಿಸುವ ಲಕ್ಷ್ಮಣ ಅವರು, ಕೃಷಿ ಕ್ಷೇತ್ರದಲ್ಲಿ ಉಂಟಾಗುವ ಬದಲಾವಣೆಗಳನ್ನು ತಮ್ಮ ಭೂಮಿಯಲ್ಲೂ ಪ್ರಯೋಗಾತ್ಮಕವಾಗಿ ಅಳವಡಿಸಿಕೊಂಡು ಸಾಧನೆಯತ್ತ ಸಾಗುತ್ತಿದ್ದಾರೆ. ಇದು, ಗಮನಸೆಳೆಯುತ್ತಿದೆ.

‘ಕಬ್ಬು ನಾಟಿಗೂ ಮುನ್ನ ಹಸಿರೆಲೆ ಗೊಬ್ಬರವನ್ನು ಬೆರೆಸಿ ಭೂಮಿಯನ್ನು ಹದ ಮಾಡಿಕೊಳ್ಳುತ್ತೇವೆ. ಕಳೆದ ಜುಲೈನಲ್ಲಿ 47 ಗುಂಠೆ ಭೂಮಿಯಲ್ಲಿ ‘86032’ ತಳಿಯ ಕಬ್ಬು ನಾಟಿ ಮಾಡಿದ್ದೇವೆ. ಸಾಲಿನಿಂದ ಸಾಲಿಗೆ ನಾಲ್ಕೂವರೆ ಅಡಿಗಳ ಅಂತರದಲ್ಲಿ ಹಾಗೂ ಒಂದು ಕಣ್ಣಿನ ಬೀಜದಿಂದ ಬೀಜಕ್ಕೆ 2 ಅಡಿ ಅಂತರದಲ್ಲಿ ಕಬ್ಬು ಬೀಜ ನಾಟಿ ಮಾಡಲಾಗಿತ್ತು. ಜವಾಹರ ಕಾರ್ಖಾನೆಯ ಕೃಷಿ ವಿಭಾಗದ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಪ್ರಮಾಣಕ್ಕೆ ತಕ್ಕಂತೆ ಜೈವಿಕ ಗೊಬ್ಬರ, ಸಾವಯವ ಮತ್ತು ರಸಾಯನಿಕ ಗೊಬ್ಬರವನ್ನು ಹಾಕಿದ್ದೆವು. ಉಣ್ಣೆ ಹುಳು ಮೊದಲಾದ ಕೀಟಬಾಧೆ ತಗುಲದಂತೆ ಎಚ್ಚರಿಕೆಯನ್ನೂ ವಹಿಸಿದ್ದೆವು. ಕಬ್ಬು ನಡುಮಟ್ಟ ಬೆಳೆದ ನಂತರ ಹರಗಿ, ಹನಿ ನೀರಾವರಿ ಮೂಲಕ ಅಗತ್ಯ ಪ್ರಮಾಣದಲ್ಲಿ ನೀರು ನೀಡುತ್ತಿದ್ದೆವು. ಯೋಜನಾಬದ್ಧವಾಗಿ ಕೃಷಿ ಕೈಗೊಂಡಿದ್ದರಿಂದಾಗಿ 47 ಗುಂಟೆಯಲ್ಲಿ 136 ಟನ್ ಕಬ್ಬು ಇಳುವರಿ ಬಂದಿದೆ’ ಎಂದು ಲಕ್ಷ್ಮಣ ಅನುಭವ ಹಂಚಿಕೊಂಡರು.

ಕಬ್ಬು ಕೃಷಿಯಲ್ಲಿ ಪ್ರತಿ ವರ್ಷವೂ ಸಾಧನೆ ಮಾಡುತ್ತಾ ಬಂದಿರುವ ಪಸಾರೆ ಸಹೋದರರ ಕಬ್ಬು ಬೆಳೆ ವೀಕ್ಷಣೆಗೆ ಕೃಷಿ ಇಲಾಖೆ ಹಿರಿಯ ಅಧಿಕಾರಿಗಳು, ಜವಾಹರ ಸಹಕಾರಿ ಸಕ್ಕರೆ ಕಾರ್ಖಾನೆಯ ಆಡಳಿತ ಮಂಡಳಿ ಸದಸ್ಯರು ಬಂದಿದ್ದಾರೆ. ಮೆಚ್ಚುಗೆ ಸೂಚಿಸಿದ್ದಾರೆ. ಸಂಪರ್ಕಕ್ಕೆ ಮೊ: 9740321311.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.