ADVERTISEMENT

ತಾಪಮಾನ ಅರಿವಿಗೆ ‘ಆಟೋಟ’

ಯುವ ಕ್ರೀಡಾಪಟುವಿಂದ ವಿನೂತನ ಪ್ರಯತ್ನ

​ಪ್ರಜಾವಾಣಿ ವಾರ್ತೆ
Published 5 ಜೂನ್ 2019, 15:36 IST
Last Updated 5 ಜೂನ್ 2019, 15:36 IST
ಜಾಗತಿಕ ತಾಪಮಾನ ಅರಿವು ಮೂಡಿಸುವುದಕ್ಕಾಗಿ ಬೆಳಗಾವಿಯಲ್ಲಿ ಬುಧವಾರ ವಿವಿಧ ಕ್ರೀಡೆಗಳ ಪ್ರದರ್ಶನ ನೀಡಿದ ಭರತ್ ಪಾಟೀಲ ಅವರನ್ನು ರಾಜು ಮಾಲವದೆ ಗೌರವಿಸಿದರು
ಜಾಗತಿಕ ತಾಪಮಾನ ಅರಿವು ಮೂಡಿಸುವುದಕ್ಕಾಗಿ ಬೆಳಗಾವಿಯಲ್ಲಿ ಬುಧವಾರ ವಿವಿಧ ಕ್ರೀಡೆಗಳ ಪ್ರದರ್ಶನ ನೀಡಿದ ಭರತ್ ಪಾಟೀಲ ಅವರನ್ನು ರಾಜು ಮಾಲವದೆ ಗೌರವಿಸಿದರು   

ಬೆಳಗಾವಿ: ವಿಶ್ವ ಪರಿಸರ ದಿನವಾದ ಬುಧವಾರ ಜಾಗತಿಕ ತಾಪಮಾನದ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದಕ್ಕಾಗಿ ಇಲ್ಲಿನ ಕ್ರೀಡಾಪಟು ಭರತ್ ಪಾಟೀಲ ವಿವಿಧ 20 ಕ್ರೀಡಾ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿದರು. ವಿನೂತನ ಪ್ರಯತ್ನದ ಮೂಲಕ ಗಮನಸೆಳೆದರು.

ಬೆಳಿಗ್ಗೆ 5ಕ್ಕೆ ಕೆಎಲ್‌ಇ ಆಸ್ಪತ್ರೆ ಬಳಿಯ ಜೆಎನ್‌ಎಂಸಿ ಈಜುಕೊಳದಿಂದ ಪ್ರದರ್ಶನ ಆರಂಭಿಸಿದ ಅವರು, ಮಧ್ಯಾಹ್ನ 1ರ ವೇಳೆಗೆ ಗೋವಾವೇಸ್ ಬಸವೇಶ್ವರ ವೃತ್ತದಲ್ಲಿರುವ ರೋಟರಿ– ಪಾಲಿಕೆಯ ಸ್ಕೇಟಿಂಗ್ ರಿಂಕ್‌ನಲ್ಲಿ ಮುಕ್ತಾಯಗೊಳಿಸಿದರು. ಈಜು, ಓಟ, ನಡಿಗೆ, ಸೈಕ್ಲಿಂಗ್‌ ಸಾಹಸ, ಡೈವಿಂಗ್, ಸ್ಕೇಟಿಂಗ್, ಸ್ಕೇಟ್ ಬೋರ್ಡ್‌ ಸಾಹಸ, ಜಿಮ್ನಾಸ್ಟಿಕ್ ಸಾಹಸ, ಕೈಗಳಲ್ಲಿ ನಡೆಯುವುದು, ಕಾರ್ಟ್‌ವ್ಹೀಲ್ ಸ್ಕಿಪ್ಪಿಂಗ್, ರೋಪ್ ಕ್ಲೈಂಬಿಂಗ್, ನೃತ್ಯ ಮೊದಲಾದವುಗಳ ಪ್ರದರ್ಶನವನ್ನು 8 ಗಂಟೆಗಳ ಕಾಲ ಸತತವಾಗಿ ಒಂದಾದ ಮೇಲೊಂದರಂತೆ ಪ್ರಸ್ತುತಪಡಿಸಿದರು.

ಕೋಚ್‌ಗಳು, ಪೋಷಕರು ಹಾಗೂ ಸ್ನೇಹಿತರು ಅವರಿಗೆ ಸಹಕಾರ ನೀಡಿದರು. ‘ಜಾಗತಿಕ ತಾಪಮಾನ ನಿಲ್ಲಿಸಬೇಕು; ಹಸಿರು ಚಿಂತನೆ ಮಾಡಬೇಕು. ಪರಿಸರ ಮಾಲಿನ್ಯ ತಡೆಯಲು ಮತ್ತು ಸುಸ್ಥಿರ ಅಭಿವೃದ್ಧಿಗಾಗಿ ತಾಪಮಾನ ಏರಿಕೆಯನ್ನು ತಡೆಯಬೇಕಾಗಿದೆ’ ಎಂಬ ಸಂದೇಶ ಸಾರಿದರು.

ADVERTISEMENT

ಈಜು ಕೋಚ್ ಉಮೇಶ್ ಕಲಘಟಗಿ ಕಾರ್ಯಕ್ರಮ ಉದ್ಘಾಟಿಸಿದರು. ಕೋಚ್‌ಗಳಾದ ಸೂರ್ಯಕಾಂತ ಹಿಂಡಲಗೇಕರ, ಕೃಷ್ಣಕುಮಾರ್ ಜೋಶಿ ಇದ್ದರು.

ಮಧ್ಯಾಹ್ನ ನಡೆದ ಮುಕ್ತಾಯ ಕಾರ್ಯಕ್ರಮದಲ್ಲಿ ವಿವಿಧ ಸಂಘ–ಸಂಸ್ಥೆಗಳ ಪ್ರತಿನಿಧಿಗಳಾದ ಮಹೇಶ ಹೆಡಾ, ರಾಜು ಮಾಲವದೆ, ವಿಶ್ವನಾಥ ಯಳ್ಳೂರಕರ, ಅಶೋಕ ಗಾಗವೆ, ಸಂಜೀವ್ ಪ್ರಭು, ರಾಜೇಶ್ ಶಿಂಧೆ, ರಾಘವೇಂದ್ರ ಅಣ್ವೇಕರ, ಗಣೇಶ ದಡ್ಡಿಕರ, ಮಹೇಶ ದಡ್ಡಿಕರ, ಪ್ರಸಾದ್ ತೆಂಡುಲ್ಕರ್, ಮಧುಕರ ಬಾಗೇವಾಡಿ, ಆನಂದ ಪಾಟೀಲ ಭಾಗವಹಿಸಿದ್ದರು. ಭರತ್‌ ಹಾಗೂ ಪೋಷಕರಾದ ಕಲಪ್ಪ ಪಾಟೀಲ– ರಾಜಶ್ರೀ ಪಾಟೀಲ ಅವರನ್ನು ಸತ್ಕರಿಸಿದರು.

ಯುನಿಕ್‌ ಸ್ಪೋರ್ಟಿಂಗ್ ಅಕಾಡೆಮಿ, ಜೇಂಟ್ಸ್‌ ಗ್ರೂಪ್ ಬೆಳಗಾವಿ ಪರಿವಾರ, ರೋಟರಿ ಕ್ಲಬ್‌ ಆಫ್ ವೇಣುಗ್ರಾಮ, ಕೊಲ್ಹಾಪುರ ಕನ್ಯಾ ಮಂಡಲ, ಎಸ್‌.ಕೆ. ಇಂಟರ್‌ನ್ಯಾಷನಲ್ ಸ್ಪೋರ್ಟ್ಸ್‌ ಅಂಡ್ ಅಕಾಡೆಮಿ, ರಾಜಸ್ಥಾನಿ ಯುವಕ ಸೇವಾ ಮಂಡಲ, ಕಂಗ್ರಾಳಿ ಕೆ.ಎಚ್‌. ಗ್ರಾಮ ಪಂಚಾಯ್ತಿ, ಅಬ್ಬ ಸ್ಪೋರ್ಟ್ಸ್‌ ಕ್ಲಬ್‌, ಅಕ್ವಾ ಪಾಲ್ಸ್‌ ಗ್ರೂಪ್, ಡಾಲ್ಫಿನ್ ಗ್ರೂಪ್, ಫೀನಿಕ್ಸ್‌ ಶಾಲೆ, ಲಯನ್ಸ್‌ ಕ್ಲಬ್, ರೋಟರಿ ಮಿಡ್‌ಟೌನ್, ಸ್ವಿಮ್ಮರ್ಸ್‌ ಕ್ಲಬ್‌ ಹಾಗೂ ಅಕ್ವೇರಿಯಸ್ ಸ್ವಿಮ್ ಕ್ಲಬ್ ಸಹಯೋಗದಲ್ಲಿ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.