ADVERTISEMENT

ಚುನಾವಣೆಗಳಿಗೆ ಬಿಜೆಪಿ ರಣಕಹಳೆ

ನೆರೆದಿದ್ದವರ ಕೈ ಎತ್ತಿಸಿ ವಚನ ಪಡೆದ ನಾಯಕರು

​ಪ್ರಜಾವಾಣಿ ವಾರ್ತೆ
Published 17 ಜನವರಿ 2021, 15:29 IST
Last Updated 17 ಜನವರಿ 2021, 15:29 IST

ಬೆಳಗಾವಿ: ಮುಂಬರುವ ವಿವಿಧ ಚುನಾವಣೆಗಳಿಗೆ ಬಿಜೆಪಿ ಇಲ್ಲಿ ರಣಕಹಳೆ ಮೊಳಗಿಸಿತು.

ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ ಜನಸೇವಕ ಸಮಾವೇಶ ಸಮಾರೋಪದಲ್ಲಿ ಮಾತನಾಡಿದ ಎಲ್ಲ ನಾಯಕರೂ, ಬೆಳಗಾವಿ ಲೋಕಸಭಾ ಕ್ಷೇತ್ರ ಸೇರಿದಂತೆ ವಿವಿಧ ಉಪ ಚುನಾವಣೆಗಳು ಹಾಗೂ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿಗಳ ಚುನಾವಣೆಯನ್ನು ಪ್ರಸ್ತಾಪಿಸಿದರು. ಗೆಲುವಿನ ಸಂಕಲ್ಪ ಮಾಡುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು. ಈ ಮೂಲಕ ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಗೆ ಬಹುಮತ ತಂದುಕೊಡಬೇಕು ಎಂಬ ಕನಸನ್ನು ಬಿತ್ತಿದರು.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ‘ಇಡೀ ರಾಜ್ಯವೇ ಬೆಚ್ಚಿ ಬೀಳುವ ರೀತಿಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ನೆಲಸಮವಾಗಿದೆ. ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ನಮ್ಮ ಕಾರ್ಯಕರ್ತರು ಅಭೂತಪೂರ್ವ ಗೆಲುವು ಸಾಧಿಸಿದ್ದಾರೆ. ಈ ಭಾಗದಲ್ಲಿ ಯುವ,‌ ಮಹಿಳಾ, ಎಸ್‌ಸಿ, ಎಸ್ಟಿ ಮೋರ್ಚಾಗಳು ಸಂಘಟನೆ ಬಲಪಡಿಸಲು ಶಕ್ತಿ ಮೀರಿ ಶ್ರಮಿಸಬೇಕು. ಪಕ್ಷದ‌ ಚಿಹ್ನೆಯಲ್ಲಿ ನಡೆಯುವ ತಾಲ್ಲೂಕು ಹಾಗೂ ಜಿಲ್ಲಾ ಪಂಚಾಯ್ತಿಗಳ ಅಧಿಕಾರವನ್ನು ದೊಡ್ಡ ಪ್ರಮಾಣದಲ್ಲಿ ಹಿಡಿಯಬೇಕು. ಇದಕ್ಕಾಗಿ ಈಗಿನಿಂದಲೇ ಸಿದ್ಧವಾಗಬೇಕು’ ಎಂದು ತಿಳಿಸಿದರು.

ADVERTISEMENT

150 ಸ್ಥಾನ ಗೆಲ್ಲಬೇಕು

‘ಮುಂದಿನ ವಿಧಾನಸಭೆ ಚುನಾವಣೆಯಲ್ಲಿ 150 ಕ್ಷೇತ್ರವನ್ನು ಗೆಲ್ಲಬೇಕು. ಇದಕ್ಕಾಗಿ ಗ್ರಾಮ ಪಂಚಾಯ್ತಿ ಸದಸ್ಯರು, ನಾಳೆಯಿಂದಲೇ ಗ್ರಾಮದ ಮುಖಂಡರನ್ನು ಜಾತ್ಯತೀತವಾಗಿ ಭೇಟಿಯಾಗಿ ಆಶೀರ್ವಾದ ಪಡೆಯಬೇಕು. ಅವರ ಅಭಿಪ್ರಾಯ ಆಲಿಸಬೇಕು. ಪ್ರಧಾನಿ ಬಹಳ ಹಣ ಕೊಡುತ್ತಿದ್ದಾರೆ. ಅದನ್ನು ಬಳಸಿಕೊಂಡು ಗ್ರಾಮಗಳನ್ನು ಕಟ್ಟಬೇಕು. ರಾಮ ರಾಜ್ಯದ ಕನಸು ನನಸು ಮಾಡಬೇಕು’ ಎಂದು ಸೂಚಿಸಿದರು.

‘ಶ್ರೀರಾಮ ಮಂದಿರ ನಿರ್ಮಾಣಕ್ಕೆ ‍ಪ್ರಧಾನಿ ನರೇಂದ್ರ ಮೋದಿ ಚಾಲನೆ ‌ನೀಡಲಾಗಿದ್ದು, ಆ ಮೂಲಕ ನಮ್ಮೆಲ್ಲರ ಕನಸು ನನಸಾಗಿದೆ’ ಎಂದು ಸಂತಸ ವ್ಯಕ್ತ‍ಪಡಿಸಿದರು.

‘ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ದಿ.ಸುರೇಶ ಅಂಗಡಿ ಅವರ ಋಣ ತೀರಿಸಲು, ಎರಡೂವರೆ ಲಕ್ಷ ಅಂತರದಿಂದ ಅಭ್ಯರ್ಥಿಯನ್ನು ಗೆಲ್ಲಿಸುತ್ತೇವೆ ಎಂದು ಸಂಕಲ್ಪ‌ ಮಾಡುತ್ತೇವೆ’ ಎಂದು ಕಾರ್ಯಕರ್ತರ ಕೈಎತ್ತಿಸಿ ಪ್ರಮಾಣ ಪಡೆದರು. ‘ಅಭ್ಯರ್ಥಿ ಯಾರೇ ಆದರೂ ಪಕ್ಷ ಗೆಲ್ಲುವಂತೆ ನೋಡಿಕೊಳ್ಳಬೇಕು’ ಎಂದು ತಾಕೀತು ಮಾಡಿದರು.

‘ನಳಿನ್ ಕುಮಾರ್ ಕಟೀಲ್ ರಾಜ್ಯದಾದ್ಯಂತ ಸುತ್ತಿ, ಗ್ರಾ.ಪಂ. ಚುನಾವಣೆಯಲ್ಲಿ ಪಕ್ಷದವರು ಅಭೂತಪೂರ್ವ ಗೆಲುವು ಗಳಿಸಲು ಕಾರಣವಾಗಿದ್ದಾರೆ. ಹೀಗಾಗಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ’ ಎಂದು ರಾಜ್ಯ ಘಟಕದ ಅಧ್ಯಕ್ಷರ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ಸೂಚಿಸಿದರು.

ನಳಿನ್‌ಕುಮಾರ್ ಕಟೀಲ್ ಮಾತನಾಡಿ, ‘ರಾಜ್ಯದಲ್ಲಿ 45ಸಾವಿರ ಬಿಜೆಪಿ ಬೆಂಬಲಿತರು ಗ್ರಾಮ ಪಂಚಾಯ್ತಿ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರ ರಹಿತ ಆಡಳಿತ ನಡೆಸುತ್ತಿರುವುದು ಹಾಗೂ ಯಡಿಯೂರಪ್ಪ ನೇತೃತ್ವದ ಸರ್ಕಾರದ ಜನಪರ ಕಾರ್ಯದಿಂದ ಈ ಫಲಿತಾಂಶ ಬಂದಿದೆ’ ಎಂದರು.

‘ಹಳ್ಳಿ ಹಳ್ಳಿಗಳಲ್ಲಿ ಕಾಂಗ್ರೆಸ್ ಮುಕ್ತ ವಾತಾವರಣ ನಿರ್ಮಾಣವಾಗಿದೆ. ಬಿಜೆಪಿಯು ನಗರಗಳಿಗೆ ಮಾತ್ರ ಸೀಮಿತವಾಗಿದೆ ಎಂಬ ಮಾತು ಈಗಿಲ್ಲ. ಹಳ್ಳಿಗಳಿಗೂ ನಮ್ಮ ಬೇರು ಹರಡಿರುವುದು ಸಾಬೀತಾಗಿದೆ’ ಎಂದು ಹೇಳಿದರು.

***

ವಿಜಯ ಪತಾಕೆ ಹಾರಿಸಬೇಕು

ಮುಂಬರುವ ಎಲ್ಲ ಉಪ ಚುನಾವಣೆಗಳನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಪಕ್ಷದ ವಿಜಯ ಪತಾಕೆ ಹಾರಿಸಲು ಕಾರ್ಯಕರ್ತರೆಲ್ಲರೂ ಶ್ರಮಿಸಬೇಕು. ಮುಂದೆಯೂ ಕೇಂದ್ರ ಹಾಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ತರಲು ನಾವೆಲ್ಲರೂ ಕೆಲಸ ಮಾಡಬೇಕು.

- ರಮೇಶ ಜಾರಕಿಹೊಳಿ,ಜಿಲ್ಲಾ ಉಸ್ತುವಾರಿ ಸಚಿವ

ದೇಶ ವನವಾಸದಿಂದ ಮುಕ್ತವಾಗಿದೆ

ಬಿಜೆಪಿ ಸರ್ಕಾರ ಬಂದ ಮೇಲೆ ದೇಶವು ವನವಾಸದಿಂದ ಮುಕ್ತವಾಗಿ ರಾಮ ರಾಜ್ಯವಾಗುವತ್ತ ಹೆಜ್ಜೆ ಹಾಕುತ್ತಿದೆ. ಹಲವು ಜನಪರ ಯೋಜನೆಗಳ ಮೂಲಕ ಪ್ರಧಾನಿ ಎಲ್ಲ ವರ್ಗದ ಜನರಿಗೂ ಅನುಕೂಲ ಮಾಡಿಕೊಡುತ್ತಿದ್ದಾರೆ.

- ಶಶಿಕಲಾ ಜೊಲ್ಲೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ

ಅನುದಾನ ಸದ್ಬಳಕೆ ಮಾಡಿಕೊಳ್ಳಿ

ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯ್ತಿ ಚುನಾವಣೆಯಲ್ಲೂ ಹೆಚ್ಚಿನ ಕಡೆಗಳಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ. ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅನುದಾನ ಪಡೆಯಲು ಮಿತಿಯೇ ಇಲ್ಲ. ನೂತನ ಗ್ರಾಮ ಪಂಚಾಯ್ತಿ ಸದಸ್ಯರು ಅದನ್ನು ಸದ್ಬಳಕೆ ಮಾಡಿಕೊಂಡು ಗ್ರಾಮಗಳ ಅಭಿವೃದ್ಧಿಗೆ ಶ್ರಮಿಸಬೇಕು.

- ಉಮೇಶ ಕತ್ತಿ, ಸಚಿವ

ಬಹುಮತ ಸಿಗುವಂತೆ ಮಾಡಿ

ರಾಜ್ಯದಲ್ಲಿ ಬಿಜೆಪಿ ಸರ್ಕಾರ ರಚನೆಗೆ ಪಟ್ಟ ಕಷ್ಟ ನಿಮಗೆ ಗೊತ್ತಿದೆ. ಮುಂದೆ ಹೀಗಾಗದಂತೆ ನೋಡಿಕೊಳ್ಳಬೇಕು. ಬಹುಮತ ಸಿಗುವಂತೆ ಕಾರ್ಯಕರ್ತರು ನೋಡಿಕೊಳ್ಳಬೇಕು.

- ಈರಣ್ಣ ಕಡಾಡಿ, ರಾಜ್ಯಸಭಾ ಸದಸ್ಯ

ಗ್ರಾ.ಪಂ. ಸದಸ್ಯರು ಕಾರಣ

ಇಡೀ ರಾಜ್ಯದಲ್ಲಿಯೇ ಅತಿ ಹೆಚ್ಚು ಗ್ರಾಮ ಪಂಚಾಯ್ತಿ ಸದಸ್ಯರು ಬಿಜೆಪಿ ಬೆಂಬಲಿತರಾಗಿದ್ದಾರೆ. ಅದರಲ್ಲೂ ಜಿಲ್ಲೆಯವರು ಹೆಚ್ಚಿದ್ದಾರೆ. ಹೀಗಾಗಿ ಅಭಿನಂದಿಸಲು ಕೇಂದ್ರ ಗೃಹ ಸಚಿವ ಅಮಿತ್ ಶಾ ಬಂದಿದ್ದಾರೆ. ಅವರು ಇಲ್ಲಿಗೆ ಬರಲು ಗ್ರಾಮ ಪಂಚಾಯ್ತಿ ಸದಸ್ಯರು ಕಾರಣವಾಗಿದ್ದೀರಿ. ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿಗೆ ನಮ್ಮ ಜಯ ಘೋಷ ಮುಟ್ಟಬೇಕು.

- ಲಕ್ಷ್ಮಣ ಸವದಿ, ಉ‍ಪ ಮುಖ್ಯಮಂತ್ರಿ

ಸರ್ಕಾರದ ನೆರವು

ಕೊರೊನಾದಿಂದಾಗಿ ದೇಶ ಆರ್ಥಿಕವಾಗಿ ತೊಂದರೆಯಲ್ಲಿದ್ದಾಗ ನಮ್ಮ ಸರ್ಕಾರ ದುಡಿಯುವ ಕೈಗಳಿಗೆ ಕೆಲಸ ಕೊಟ್ಟಿದೆ. ಉಚಿತವಾಗಿ ಪಡಿತರ ಹಾಗೂ ಅಡುಗೆ ಅನಿಲ‌ ನೀಡಿ ಜನರಿಗೆ ನೆರವಾಗಿದೆ.

- ಆನಂದ ಮಾಮನಿ, ವಿಧಾನಸಭೆ ಉಪಸಭಾಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.