ADVERTISEMENT

ಬಿಜೆಪಿಯಿಂದ ‘ಗ್ರಾಮ ಸ್ವರಾಜ್ಯ’ ಸಮಾವೇಶ ಡಿ.2ರಂದು

ಕಾರ್ಯಕರ್ತರನ್ನು ಗೆಲ್ಲಿಸಿಕೊಳ್ಳಲು ತಂತ್ರ

​ಪ್ರಜಾವಾಣಿ ವಾರ್ತೆ
Published 30 ನವೆಂಬರ್ 2020, 11:31 IST
Last Updated 30 ನವೆಂಬರ್ 2020, 11:31 IST
ಸಂಜಯ ಪಾಟೀಲ
ಸಂಜಯ ಪಾಟೀಲ   

ಬೆಳಗಾವಿ: ‘ಗ್ರಾಮ ಪಂಚಾಯಿತಿ ಚುನಾವಣೆ ಅಂಗವಾಗಿ ಪಕ್ಷದಿಂದ ಡಿ. 2ರಂದು ಗ್ರಾಮ ಸ್ವರಾಜ್ಯ ಸಮಾವೇಶ ಹಮ್ಮಿಕೊಳ್ಳಲಾಗಿದೆ’ ಎಂದು ಬಿಜೆಪಿ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ‍ಪಾಟೀಲ ತಿಳಿಸಿದರು.

‘ಅಂದು ಬೆಳಿಗ್ಗೆ 10ಕ್ಕೆ ಗ್ರಾಮೀಣ ಕ್ಷೇತ್ರದ ಬಸ್ತವಾಡದಲ್ಲಿ ಗ್ರಾಮೀಣ, ಬೈಲಹೊಂಗಲ, ಖಾನಾಪುರ ಹಾಗೂ ಕಿತ್ತೂರು ಮತ್ತು ಮಧ್ಯಾಹ್ನ 2ಕ್ಕೆ ಸವದತ್ತಿಯ ಮಾಮಾನಿ ಕಲ್ಯಾಣ ಮಂಟಪದಲ್ಲಿ ಅರಭಾವಿ, ಗೋಕಾಕ, ಸವದತ್ತಿ ಮತ್ತು ರಾಮದುರ್ಗ ವಿಧಾನಸಭಾ ಕ್ಷೇತ್ರಗಳ ಪ್ರಮುಖ ಕಾರ್ಯಕರ್ತರು ಭಾಗವಹಿಸಲಿದ್ದಾರೆ’ ಎಂದು ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.

‘ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಸಚಿವರಾದ ಜಗದೀಶ ಶೆಟ್ಟರ್, ಬಸವರಾಜ ಬೊಮ್ಮಾಯಿ, ಶಶಿಕಲಾ ಜೊಲ್ಲೆ, ರಮೇಶ ಜಾರಕಿಹೊಳಿ, ಸಿ.ಸಿ. ಪಾಟೀಲ, ಬಿ.ಸಿ. ಪಾಟೀಲ, ಶಿವರಾಮ ಹೆಬ್ಬಾರ, ಸಂಸದರಾದ ಅನಂತಕುಮಾರ ಹೆಗಡೆ, ಶಿವಕುಮಾರ ಉದಾಸಿ, ಅಣ್ಣಾಸಾಹೇಬ ಜೊಲ್ಲೆ, ಈರಣ್ಣ ಕಡಾಡಿ, ರಾಜ್ಯ ಘಟಕದ ಉಪಾಧ್ಯಕ್ಷ ಎಂ. ರಾಜೇಂದ್ರ, ಪ್ರಧಾನ ಕಾರ್ಯದರ್ಶಿ ಸಿದ್ದರಾಜು, ರಾಜ್ಯ ಯುವ ಮೋರ್ಚಾ ಅಧ್ಯಕ್ಷ ಡಾ.ಸಂದೀಪ್, ಜಿಲ್ಲೆಯ ಪಕ್ಷದ ಹಾಲಿ ಮತ್ತು ಮಾಜಿ ಶಾಸಕರು, ವಿಧಾನಪರಿಷತ್ ಸದಸ್ಯರು, ಪದಾಧಿಕಾರಿಗಳು ಭಾಗವಹಿಸುವರು’ ಎಂದು ತಿಳಿಸಿದರು.

ADVERTISEMENT

‘ಪಕ್ಷದ ಕಾರ್ಯಕರ್ತರನ್ನು ಗೆಲ್ಲಿಸಿಕೊಂಡು, ಶೇ 80ರಷ್ಟು ಸ್ಥಾನಗಳನ್ನು ನಮ್ಮದಾಗಿಸಿಕೊಳ್ಳುವ ಯೋಜಿತ ಕಾರ್ಯತಂತ್ರ ರೂಪಿಸಲಾಗಿದೆ’ ಎಂದರು.

‘ಈ ಚುನಾವಣೆಯು ಮತಗಟ್ಟೆ ಮಟ್ಟದಲ್ಲಿ ಸಂಘಟನೆ ಬಲಪಡಿಸುವುದಕ್ಕೆ ಸಿಕ್ಕಿರುವ ಅವಕಾಶ ಎಂದು ಪರಿಗಣಿಸಲಾಗಿದೆ. ಪಕ್ಷದ ಸಾಮೂಹಿಕ ನಾಯಕತ್ವ ಹಾಗೂ ಕಾರ್ಯಕರ್ತರ ಪಡೆ ಮೂಲಕ ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ಗೆಲುವಿಗೆ ಈಗಾಗಲೇ ಶ್ರಮಿಸಲಾಗುತ್ತಿದೆ. ಹೆಚ್ಚಿನ ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿರುವುದು ಸಹಕಾರಿ ಆಗಲಿದೆ’ ಎಂದು ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ತಿಳಿಸಿದರು.

‘ಮುಖ್ಯಮಂತ್ರಿ ಬಿ.ಎಸ್‌. ಯಡಿಯುರಪ್ಪ ಹಾಗೂ ‍ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ನೇತೃತ್ವದಲ್ಲಿ ಗೆಲುವಿಗೆ ಕಾರ್ಯತಂತ್ರಗಳನ್ನು ಕಾರ್ಯಗತಗೊಳಿಸಲಾಗುತ್ತಿದೆ’ ಎಂದರು.

ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿಗಳಾದ ಮಹೇಶ ಮೊಹಿತೆ, ರಾಜು ಚಿಕ್ಕನಗೌಡರ, ಸುಭಾಷ ಪಾಟೀಲ, ಮಾಧ್ಯಮ ಪ್ರಮುಖ ಎಫ್.ಎಸ್. ಸಿದ್ದನಗೌಡರ, ಖಜಾಂಚಿ ಮಲ್ಲಿಕಾರ್ಜುನ ಮಾದಮ್ಮನವರ, ಜಿಲ್ಲಾ ವಕ್ತಾರ ಸಂಜಯ ಕಂಚಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.