ಬೆಳಗಾವಿ: ‘ಕೇಂದ್ರ ಸರ್ಕಾರ ಸಮರ್ಪಕವಾಗಿ ನೀಡಿರುವ ರಸಗೊಬ್ಬರವನ್ನು ರಾಜ್ಯ ಸರ್ಕಾರ ರೈತರಿಗೆ ಸರಿಯಾಗಿ ಹಂಚಿಕೆ ಮಾಡಿಲ್ಲ’ ಎಂದು ಆರೋಪಿಸಿ ಬಿಜೆಪಿ ಕಾರ್ಯಕರ್ತರು ನಗರದಲ್ಲಿ ಬುಧವಾರ ಬೃಹತ್ ಪ್ರತಿಭಟನೆ ನಡೆಸಿದರು.
ಇಲ್ಲಿನ ರಾಣಿ ಚನ್ನಮ್ಮನ ವೃತ್ತದಲ್ಲಿ ಸಮಾವೇಶಗೊಂಡ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
‘ರಾಜ್ಯದಲ್ಲಿ ರೈತರಿಗೆ ಬೇಡಿಕೆಯಷ್ಟು ಯೂರಿಯಾ ಗೊಬ್ಬರ ಒದಗಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿದೆ. ಕಾಳಸಂತೆಯಲ್ಲಿ ಅದನ್ನು ಮಾರಲಾಗುತ್ತಿದೆ’ ಎಂದು ದೂರಿದರು.
ನಂತರ ಚಕ್ಕಡಿ ಮತ್ತು ಟ್ರ್ಯಾಕ್ಟರ್‌ನೊಂದಿಗೆ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿ, ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.
ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ಪಾಟೀಲ ನಡಹಳ್ಳಿ ಮಾತನಾಡಿ, ‘ಕಳೆದೆರಡು ವರ್ಷಗಳಲ್ಲಿ ರಾಜ್ಯದ ವಿವಿಧೆಡೆ ಶೇ 30ರಿಂದ 40ರಷ್ಟು ಮಳೆ ಕೊರತೆಯಾಗಿತ್ತು. ಹಾಗಾಗಿ ಯೂರಿಯಾ ಗೊಬ್ಬರಕ್ಕೆ ಬೇಡಿಕೆಯೂ ಕಡಿಮೆ ಇತ್ತು. ಈ ವರ್ಷ ಮುಂಗಾರು ಪೂರ್ವ ಮತ್ತು ಮುಂಗಾರು ಹಂಗಾಮಿನಲ್ಲಿ ಉತ್ತಮ ಮಳೆಯಾಗಿದ್ದು, ರೈತರು ಕೃಷಿ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಆದರೆ, ಯೂರಿಯಾ ದುರುಪಯೋಗ ಪಡಿಸಿಕೊಂಡು ಕಾಳಸಂತೆಯಲ್ಲಿ ಮಾರುತ್ತಿರುವುದು ಬಹಿರಂಗವಾಗಿದೆ’ ಎಂದು ಆಪಾದಿಸಿದರು.
‘ರಾಜ್ಯದಲ್ಲಿ ಕಳೆದ ಎರಡು ವರ್ಷಗಳಿಂದ ಸರಬರಾಜು ಆಗುತ್ತಿರುವ ಬಿತ್ತನೆ ಬೀಜ ಕಳಪೆಯಾಗಿದ್ದು, ಇಳುವರಿ ಮೇಲೆ ಪೆಟ್ಟು ಬಿದ್ದಿದೆ. ರಾಜ್ಯದಲ್ಲಿ ನಕಲಿ ರಸಗೊಬ್ಬರ ಕಂಪನಿಗಳು ತಲೆ ಎತ್ತಿದ್ದು, ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ಕೊಟ್ಟು ಬೆಳೆ ಮತ್ತು ಬಿತ್ತನೆ ಮಾದರಿ ಪರಿಶೀಲಿಸಬೇಕಿದ್ದ ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಬೆಂಗಳೂರು ಮತ್ತು ಮಂಡ್ಯ ಜಿಲ್ಲೆಗೆ ಸೀಮಿತಗೊಂಡಿದ್ದಾರೆ’ ಎಂದು ಆರೋಪಿಸಿದರು.
‘ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಿನಿಂದಲೂ ರೈತರಿಗೆ ಅನ್ಯಾಯವಾಗುತ್ತಿದೆ. ರೈತರ ಕಲ್ಯಾಣಕ್ಕಾಗಿ ಹಿಂದಿನ ಬಿಜೆಪಿ ಸರ್ಕಾರ ರೂಪಿಸಿದ್ದ ರೈತ ವಿದ್ಯಾನಿಧಿ ಯೋಜನೆ, ಕೃಷಿ ಉಪಕರಣಗಳಿಗೆ ಸಬ್ಸಿಡಿ ಮತ್ತು ರಾಗಿ ಕೃಷಿಗೆ ಬೆಂಬಲ ಬೆಲೆ ಮತ್ತಿತರ ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದ್ದಾರೆ. ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಗೆ ರಾಜ್ಯ ಸರ್ಕಾರ ತನ್ನ ಪಾಲು ಕೊಡುತ್ತಿಲ್ಲ’ ಎಂದು ದೂರಿದರು.
ಮಾಜಿ ಶಾಸಕರಾದ ಸಂಜಯ ಪಾಟೀಲ, ಡಾ.ವಿ.ಐ.ಪಾಟೀಲ, ಮಹಾಂತೇಶ ದೊಡ್ಡಗೌಡರ, ಪಕ್ಷದ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ಸುಭಾಷ ಪಾಟೀಲ, ಮಹಾನಗರ ಘಟಕದ ಅಧ್ಯಕ್ಷೆ ಗೀತಾ ಸುತಾರ, ಮುಖಂಡರಾದ ಎಂ.ಬಿ.ಝಿರಲಿ, ಮುರುಘೇಂದ್ರಗೌಡ ಪಾಟೀಲ, ಮಹಾಂತೇಶ ವಕ್ಕುಂದ ಇತರರಿದ್ದರು.
‘2 ಲಕ್ಷ ಮೆಟ್ರಿಕ್ ಟನ್ ಗೊಬ್ಬರ ಗುಳುಂ’
‘ಮುಂಗಾರು ಹಂಗಾಮಿನಲ್ಲಿ ರಾಜ್ಯಕ್ಕೆ ಅಗತ್ಯವಿರುವ ಪ್ರಮಾಣದಷ್ಟು ಯೂರಿಯಾ ಗೊಬ್ಬರವನ್ನು ಕೇಂದ್ರ ಒದಗಿಸಿದೆ. ಆದರೆ 2 ಲಕ್ಷ ಮೆಟ್ರಿಕ್ ಟನ್‌ಗಿಂತ ಹೆಚ್ಚಿನ ಪ್ರಮಾಣದ ಗೊಬ್ಬರವನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲಾಗುತ್ತಿದೆ. ಇದರಿಂದಾಗಿ ಬೆಳೆ ಉಳಿಸಿಕೊಳ್ಳಲು ರೈತರು ಪರದಾಡುವಂತಾಗಿದೆ’ ಎಂದು ಎ.ಎಸ್.ಪಾಟೀಲ ನಡಹಳ್ಳಿ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ‘ಈ ಮುಂಗಾರು ಹಂಗಾಮಿನಲ್ಲಿ ರೈತರು ಯೂರಿಯಾ ಗೊಬ್ಬರದ ಕೊರತೆ ಎದುರಿಸುತ್ತಿದ್ದಾರೆ. ರಾಜ್ಯಕ್ಕೆ ಮುಂಗಾರು ಹಂಗಾಮಿನಲ್ಲಿ 12.88 ಲಕ್ಷ ಮೆಟ್ರಿಕ್ ಯೂರಿಯಾ ಗೊಬ್ಬರದ ಅಗತ್ಯವಿತ್ತು. ಈ ಪೈಕಿ ಲಭ್ಯವಿರುವ ದಾಸ್ತಾನು ಆಧರಿಸಿ ಕೇಂದ್ರ 11.73 ಲಕ್ಷ ಮೆಟ್ರಿಕ್ ಟನ್ ಹಂಚಿಕೆ ಮಾಡಿತ್ತು. ಅದರಲ್ಲಿ 8.73 ಲಕ್ಷ ಮೆಟ್ರಿಕ್ ಟನ್ ಸರಬರಾಜು ಮಾಡಿದೆ. ಅದರಲ್ಲಿ 5.27 ಲಕ್ಷ ಮೆಟ್ರಿಕ್ ಟನ್ ರೈತರಿಗೆ ತಲುಪಿದೆ. ಉಳಿದದ್ದೆಲ್ಲ ಕಾಳಸಂತೆಕೋರರ ಪಾಲಾಗಿದೆ’ ಎಂದು ದೂರಿದರು.
‘ಸಹಕಾರಿ ಸಂಘಗಳ ಮೂಲಕ ಯೂರಿಯಾ ಗೊಬ್ಬರವನ್ನು ಪೂರೈಸಲಾಗಿದೆ ಎಂದು ದಾಖಲೆ ಹೇಳುತ್ತವೆ. ಆದರೆ ವಾಸ್ತವ ಪರಿಸ್ಥಿತಿ ಬೇರೆಯೇ ಇದೆ’ ಎಂದು ಆಪಾದಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.