ADVERTISEMENT

ಚುನಾವಣೆಗೆ ಹೆದರುವ ಜನ ನಾವಲ್ಲ; ಈಶ್ವರಪ್ಪ

​ಪ್ರಜಾವಾಣಿ ವಾರ್ತೆ
Published 26 ಮೇ 2020, 16:30 IST
Last Updated 26 ಮೇ 2020, 16:30 IST

ಬೆಳಗಾವಿ: ‘ಗ್ರಾಮ ಮಟ್ಟದಲ್ಲಿ ಬಿಜೆಪಿ ಬಲಿಷ್ಠವಾಗಿದೆ. ಚುನಾವಣಾ ಆಯೋಗವು ಗ್ರಾಮ ಪಂಚಾಯ್ತಿ ಚುನಾವಣೆ ನಡೆಸಲು ತೀರ್ಮಾನಿಸಿದರೆ ಎದುರಿಸಲು ಪಕ್ಷ ಸಿದ್ಧವಿದೆ. ಚುನಾವಣೆಗೆ ಹೆದರುವ ಜನ ನಾವಲ್ಲ’ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌. ಈಶ್ವರಪ್ಪ ಹೇಳಿದರು.

ನಗರದಲ್ಲಿ ಮಂಗಳವಾರ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಅವರು, ‘ಕೋವಿಡ್‌–19 ಮಾರಕ ರೋಗದ ಭೀತಿಯ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯ್ತಿಗಳ ಚುನಾವಣೆ ಮುಂದೂಡುವಂತೆ ಆಯೋಗಕ್ಕೆ ಪತ್ರ ಬರೆದಿದ್ದೇವೆ. ಈ ಸಂಬಂಧ ಆಯೋಗವು ಎಲ್ಲ ಜಿಲ್ಲಾಧಿಕಾರಿಗಳಿಗೆ ಪತ್ರ ಬರೆದು ಅಭಿಪ್ರಾಯ ಕೇಳಿದೆ. ಚುನಾವಣೆ ನಡೆಸಲು ಆಯೋಗ ನಿರ್ಧಾರ ಮಾಡಿದರೆ, ನಾವು ಚುನಾವಣೆ ಎದುರಿಸಲು ಸಿದ್ಧ’ ಎಂದು ಹೇಳಿದರು.

‘ಅವಧಿ ಮುಗಿದ ಮೇಲೂ 6 ತಿಂಗಳು ಚುನಾವಣೆಗೆ ಸಮಯಾವಕಾಶವಿದೆ, ಆಡಳಿತಾಧಿಕಾರಿ ನೇಮಿಸಬೇಕೋ ಅಥವಾ ಈಗಿರುವ ಸಮಿತಿಯನ್ನೇ ಮುಂದುವರಿಸಬೇಕೋ ಎನ್ನುವ ಬಗ್ಗೆ ಚರ್ಚೆ ನಡೆದಿವೆ’ ಎಂದರು.

ADVERTISEMENT

ಬಿಎಸ್‌ವೈ ನಮ್ಮ ನಾಯಕರು:‘ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರೇ ನಮ್ಮ ನಾಯಕರು. ಅವರ ಜೊತೆ ಯಾವುದೇ ಭಿನ್ನಾಭಿಪ್ರಾಯವಿಲ್ಲ’ ಎಂದು ಪುನರುಚ್ಚರಿಸಿದರು.

‘ಬೆಂಗಳೂರಿನಲ್ಲಿ ನಡೆದ ಪಕ್ಷದ ನಾಯಕರ ಸಭೆಯಲ್ಲಿ ಯಡಿಯೂರಪ್ಪ ಅವರ ಜೊತೆ ಯಾವುದೇ ರೀತಿಯ ವಾಗ್ವಾದ ನಡೆದಿಲ್ಲ. ಸಭೆಯ ಬಗ್ಗೆ ತಪ್ಪಾಗಿ ವರದಿಗಳು ಪ್ರಕಟವಾಗಿವೆ. ಬಿಜೆಪಿ ವಿರುದ್ಧ ಆರೋಪ ಮಾಡದಿದ್ರೆ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ನಾಯಕರಿಗೆ ತಿಂದದ್ದು ಕರಗುವುದಿಲ್ಲ’ ಎಂದು ವ್ಯಂಗ್ಯವಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.