ADVERTISEMENT

ಸಿದ್ದರಾಮಯ್ಯ ವಿರುದ್ಧ ಬಿಜೆಪಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 3 ನವೆಂಬರ್ 2021, 12:05 IST
Last Updated 3 ನವೆಂಬರ್ 2021, 12:05 IST
ಬೆಳಗಾವಿಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಬುಧವಾರ ಪ್ರತಿಭಟನೆ ನಡೆಸಿದರು
ಬೆಳಗಾವಿಯಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ವಿರುದ್ಧ ಬುಧವಾರ ಪ್ರತಿಭಟನೆ ನಡೆಸಿದರು   

ಬೆಳಗಾವಿ: ‘ದಲಿತರು ಹೊಟ್ಟೆಪಾಡಿಗಾಗಿ ಬಿಜೆಪಿಗೆ ಹೋಗಿದ್ದಾರೆ ಎಂಬ ಹೇಳಿಕೆ ನೀಡುವ ಮೂಲಕ ವಿಧಾನಸಭೆ ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರು ಸಮಾಜವನ್ನು ಅವಹೇಳನ ಮಾಡಿದ್ದಾರೆ’ ಎಂದು ಆರೋಪಿಸಿ ಮತ್ತು ಬಹಿರಂಗ ಕ್ಷಮೆ ಯಾಚಿಸುವಂತೆ ಆಗ್ರಹಿಸಿ ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ, ಮಹಾನಗರ ಜಿಲ್ಲಾ ಮತ್ತು ಗ್ರಾಮಾಂತರ ಜಿಲ್ಲಾ ಘಟಕದ ಕಾರ್ಯಕರ್ತರು ಬುಧವಾರ ಪ್ರತಿಭಟನೆ ನಡೆಸಿದರು.

ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಸಿದ್ದರಾಮಯ್ಯ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.

‘ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ ಅವರನ್ನು ಗೌರವಿಸಿದ ಪಕ್ಷ ಕಾಂಗ್ರೆಸ್. ಡಾ.ಜಿ. ಪರಮೇಶ್ವರ್, ಮಲ್ಲಿಕಾರ್ಜುನ ಖರ್ಗೆ ಅವರನ್ನು ತುಳಿದು ಅಧಿಕಾರ ಪಡೆದಿದ್ದ ಸಿದ್ದರಾಮಯ್ಯ ಅವರು ದಲಿತರ ವಿರುದ್ಧ ಮತ್ತೆ ತಮ್ಮ ಹೀನ ಮನಸ್ಥಿತಿಯನ್ನು ಪ್ರದರ್ಶಿಸಿದ್ದಾರೆ. ಅವರ ಹೇಳಿಕೆ ಹಾಗೂ ದಲಿತ ವಿರೋಧಿ ನಡೆಯನ್ನು ‍ಪಕ್ಷ ತೀವ್ರವಾಗಿ ಖಂಡಿಸುತ್ತದೆ’ ಎಂದು ತಿಳಿಸಿದರು.

ADVERTISEMENT

ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ ಮಾತನಾಡಿ, ‘ಅಹಂಕಾರಕ್ಕೆ ಮತ್ತೊಂದು ಹೆಸರೇ ಸಿದ್ದರಾಮಯ್ಯ. ಐದು ವರ್ಷಗಳವರೆಗೆ ಮುಖ್ಯಮಂತ್ರಿ ಆಗಿದ್ದೆ ಎನ್ನುವುದು ಅವರ ತಲೆಗೇರಿದೆ. ಪ್ರತಿಯೊಬ್ಬರಿಗೂ ಅಪಮಾನ ಆಗುವಂತೆ ಅವರು ಮಾತನಾಡುತ್ತಿದ್ದಾರೆ. ದಲಿತರ ಬಗ್ಗೆ ಅವಮಾನಕರ ರೀತಿಯಲ್ಲಿ ಹೇಳಿಕೆ ನೀಡಿದ್ದಾರೆ’ ಎಂದು ಆರೋಪಿಸಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ‘ಸಿದ್ದರಾಮಯ್ಯ ಅವರಿಗೆ 60ಕ್ಕೆ ಅರಳೋ–ಮರುಳೋ ಎನ್ನುವಂತಾಗಿದೆ. ಅಧಿಕಾರ ಪಡೆದುಕೊಳ್ಳುವುದಕ್ಕಾಗಿ ಜಾತಿ–ಜಾತಿಗಳ ನಡುವೆ ವಿಷಬೀಜವನ್ನು ಬಿತ್ತುವ ಕೆಲಸ ಮಾಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಅತಿ ಹೆಚ್ಚು ದಲಿತ ಶಾಸಕರು ಮಂತ್ರಿಯಾಗಿದ್ದು ಬಿಜೆಪಿ ಸರ್ಕಾರದ ಅವಧಿಯಲ್ಲೇ ಎನ್ನುವುದನ್ನು ಅವರು ನೆನಪಿಡಬೇಕು. ದಲಿತರಿಗೆ ರಾಜಕೀಯ ನಾಯಕತ್ವ ಸಿಕ್ಕಿದ್ದೇ ಬಿಜೆಪಿಯಿಂದ’ ಎಂದು ಸಮರ್ಥಿಸಿಕೊಂಡರು.

‘ಹಾನಗಲ್ ಹಾಗೂ ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆ ವೇಳೆ ರಾಷ್ಟ್ರೀಯ ವ್ಯಕ್ತಿಗಳನ್ನು ಜಾತಿಗೆ ಸೀಮಿತಗೊಳಿಸಿದರು. ಪ್ರಾಣಿಗಳನ್ನೂ ಜಾತಿಗೆ ಸೀಮಿತಗೊಳಿಸಿ ಮಾತನಾಡಿದರು’ ಎಂದು ಟೀಕಿಸಿದರು.

ಎಸ್.ಸಿ. ಮೋರ್ಚಾ ಮಹಾನಗರ ಜಿಲ್ಲಾ ಅಧ್ಯಕ್ಷ ಮಂಜುನಾಥ ಪಮ್ಮಾರ, ಗ್ರಾಮಾಂತರ ಎಸ್.ಸಿ. ಮೋರ್ಚಾ ಅಧ್ಯಕ್ಷ ಜಿತೇಂದ್ರ ಮಾದರ, ಮಹಾನಗರ ಜಿಲ್ಲಾ ಘಟಕದ ಅಧ್ಯಕ್ಷ ಶಶಿಕಾಂತ ಪಾಟೀಲ, ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದಾದಾಗೌಡ ಬಿರಾದಾರ, ಕಾರ್ಯದರ್ಶಿ ಮಹಾಂತೇಶ ವಕ್ಕುಂದ, ಎಸ್‌.ಸಿ. ಮೋರ್ಚಾ ರಾಜ್ಯ ಕಾರ್ಯದರ್ಶಿ ರಾವ್‌ಬಹದ್ದೂರ್‌ ಕದಂ, ರಾಜ್ಯ ಕಾರ್ಯಕಾರಿಣಿ ಸದಸ್ಯ ಪೃಥ್ವಿ ಸಿಂಗ್ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.