ADVERTISEMENT

ಲೋಕಸಭಾ ಚುನಾವಣೆಗೆ ‘ಗ್ಯಾರಂಟಿ’ ಶ್ರೀರಕ್ಷೆ- ಸತೀಶ್ ಜಾರಕಿಹೊಳಿ

ಕಾಂಗ್ರೆಸ್‌ ಕಾರ್ಯಕರ್ತರ ಸಮಾವೇಶ: ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 28 ಮಾರ್ಚ್ 2024, 15:35 IST
Last Updated 28 ಮಾರ್ಚ್ 2024, 15:35 IST
ಗೋಕಾಕದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಿದರು. ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಪಕ್ಷದ ಬೆಳಗಾವಿ ಕ್ಷೇತ್ರದ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ, ಮುಖಂಡ ಮಹಾಂತೇಶ ಕಡಾಡಿ ಪಾಲ್ಗೊಂಡಿದ್ದರು
ಗೋಕಾಕದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶನ್ನು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಉದ್ಘಾಟಿಸಿದರು. ಸಚಿವೆ ಲಕ್ಷ್ಮೀ ಹೆಬ್ಬಾಳಕರ, ಪಕ್ಷದ ಬೆಳಗಾವಿ ಕ್ಷೇತ್ರದ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ, ಮುಖಂಡ ಮಹಾಂತೇಶ ಕಡಾಡಿ ಪಾಲ್ಗೊಂಡಿದ್ದರು   

ಗೋಕಾಕ: ಪಕ್ಷ ಗೆಲ್ಲಬೇಕಾದರೆ ಕಾರ್ಯಕರ್ತರ ಶ್ರಮ ಬಹಳ ಮುಖ್ಯ. ಕಾಂಗ್ರೆಸ್ ಪಕ್ಷದ ಗ್ಯಾರಂಟಿಗಳು ಲೋಕಸಭಾ ಚುನಾವಣೆಗೆ ಶ್ರೀರಕ್ಷೆಯಾಗಿವೆ ಎಂದು ಲೋಕೋಪಯೋಗಿ ಹಾಗೂ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.

ಇಲ್ಲಿನ ಮಹಾಲಕ್ಷ್ಮಿ ಸಭಾಭವನದಲ್ಲಿ ಲೋಕಸಭಾ ಚುನಾವಣೆ ನಿಮಿತ್ತ ಅರಭಾವಿ ಮತ್ತು ಗೋಕಾಕ ವಿಧಾನಸಭಾ ಮತಕ್ಷೇತ್ರಗಳ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದ ಅಧ್ಯಕ್ಷತೆ ವಹಿಸಿ ಗುರುವಾರ ಮಾತನಾಡಿದ ಅವರು, ‘ದೇಶಕ್ಕೆ ಹೆಚ್ಚು ನೀರಾವರಿ ಸೌಲಭ್ಯಗಳನ್ನು ಕಲ್ಪಿಸಿದ ಪಕ್ಷ ಕಾಂಗ್ರೆಸ್‌. ಬಿಜೆಪಿಗೆ ಇಲ್ಲಿಯವರೆಗೆ ಒಂದೇ ಒಂದು ಡ್ಯಾಂ ಮತ್ತು ವಿಶ್ವವಿದ್ಯಾಲಯ ಕಟ್ಟಲು ಸಾಧ್ಯವಾಗಿಲ್ಲ. ದೇಶದ ಅಭಿವೃದ್ಧಿಗೆ ಕಾಂಗ್ರೆಸ್ ನೀಡಿದ ಶಿಕ್ಷಣ ನೀತಿ ಇಂದಿಗೂ ಸಹಕಾರಿಯಾಗಿದೆ’ ಎಂದರು.

‘ಬಿಜೆಪಿಯವರು ಮೋದಿಯೇ ಗ್ಯಾರಂಟಿ ಎಂದು ಪ್ರಚಾರ ಮಾಡುತ್ತಿದ್ದಾರೆ. ಕಾಂಗ್ರೆಸ್ ಪಕ್ಷ ಕೊಟ್ಟ ಗ್ಯಾರಂಟಿಗಳನ್ನು ಅನುಷ್ಠಾನ ಮಾಡಿದೆ’ ಎಂದ ಅವರು, ಗೋಕಾಕದಲ್ಲಿ ಜನ ಸೇರಿಸುವುದು ದೊಡ್ಡ ಕೆಲಸವಲ್ಲ. ನಾವು ಹಣಕೊಟ್ಟು ಜನರನ್ನು ಕರೆಸಿಲ್ಲ, ಆದರೂ ಇಷ್ಟು ಜನ ಸೇರಿದ್ದಾರೆ. ಮುಂದೆ ಹತ್ತು ಸಾವಿರ ಜನರನ್ನು ಸೇರಿಸಿ ಸಮಾವೇಶ ಮಾಡೋಣ’ ಎಂದರು.

ADVERTISEMENT

ಗೋಕಾಕ ಮತ್ತು ಅರಭಾವಿಯಲ್ಲಿ ಲೋಕೋಪಯೋಗಿ ಇಲಾಖೆಯಿಂದ ಸಾಕಷ್ಟು ಕೆಲಸ ಮಾಡಿದ್ದೇನೆ ಮುಂದೆಯೂ ಮಾಡಲು ಕಾಂಗ್ರೆಸ್ ಬೆಂಬಲಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಲಕ್ಷ್ಮೀ ಹೆಬ್ಬಾಳಕರ ಮಾತನಾಡಿ, ಕಾಂಗ್ರೆಸ್ ಪಕ್ಷ 23ರ ವಿಧಾನಸಭಾ ಚುನಾವಣೆಯಲ್ಲಿ 135 ಅಭ್ಯರ್ಥಿಗಳು ಗೆಲ್ಲುವ ಮೂಲಕ ದೇಶದಲ್ಲಿ ಇತಿಹಾಸ ಸೃಷ್ಟಿಸಿದೆ. ಕೊರೊನಾ ಸಂದರ್ಭದಲ್ಲಿ ಹೆಣದ ಮೇಲೆ ರಾಜಕೀಯ ಮಾಡಿದ ಬಿಜೆಪಿಯನ್ನು ಸೋಲಿಸಬೇಕು. ಬೆಳಗಾವಿ ಮತ್ತು ಚಿಕ್ಕೋಡಿ ಲೋಕಸಭಾ ಕ್ಷೇತ್ರಗಳನ್ನು ಇಡೀ ರಾಜ್ಯ ಎದುರು ನೋಡುತ್ತಿದೆ. ಹಿಂದೆ ಈ ಭಾಗದ ಸಂಸದರನ್ನು ತಾವು ಐದು ಬಾರಿ ಆರಿಸಿ ಕಳಿಸಿದ್ದರೂ ಯಾವುದೇ ಅಭಿವೃದ್ಧಿಯಾಗಿಲ್ಲ. ಇಂದು ಅವರನ್ನು ಬದಲಿಸುವ ಕಾಲ ಬಂದಿದೆ ಎಂದರು.

ಲೋಕಸಭಾ ಅಭ್ಯರ್ಥಿ ಮೃಣಾಲ ಹೆಬ್ಬಾಳಕರ ಮಾತನಾಡಿ, 2014ರ ಲೋಕಸಭಾ ಚುನಾವಣೆಯಲ್ಲಿ ಗೋಕಾಕ ಮತ್ತು ಅರಭಾವಿ ಕ್ಷೇತ್ರದಲ್ಲಿ ತಾಯಿಗೆ ಬೆಂಬಲ ನೀಡಿದ ಹಾಗೆ ನನಗೂ ನೀಡಬೇಕು. ಸತೀಶ ಜಾರಕಿಹೊಳಿ ಅವರ ನೇತೃತ್ವದಲ್ಲಿ ಪಕ್ಷವು ಬಲಿಷ್ಠವಾಗಿದ್ದು, ಕಾಂಗ್ರೆಸ್ ಪಕ್ಷ ಕೊಟ್ಟ ಭರವಸೆ ಈಡೇರಿಸಿದೆ ಎಂದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಸಿದ್ಲಿಂಗಪ್ಪ ದಳವಾಯಿ, ಚಂದ್ರಶೇಖರ್ ಕೊಣ್ಣೂರ, ವಿವೇಕ ಜತ್ತಿ, ಡಾ.ಮಹಾಂತೇಶ ಕಡಾಡಿ, ಅನಿಲ ದಳವಾಯಿ, ಶಂಕರ ಗಿಡನ್ನವರ, ಜಾಕೀರ ನದಾಪ, ಪ್ರಕಾಶ ಡಾಂಗೆ, ಬಸನಗೌಡ ಹೊಳೆಯಾಚೆ, ಲಕ್ಕಪ್ಟ ಲಕ್ಕೊರಿ ಭ್ರಮಣ್ಣ ಉಪ್ಪಾರ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಕಲ್ಪನಾ ಜೋಶಿ, ರಮೇಶ್ ಉಟಗಿ, ಎಂ,ಆರ್.ಬೋವಿ, ಬಾಳಪ್ಪ ಬೇಳಕೂಡ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು ಇದ್ದರು.

ಚಿತ್ರ: 28ಜಿಕೆಕೆ2 ಗೋಕಾಕದಲ್ಲಿ ಗುರುವಾರ ನಡೆದ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಬೃಹತ್ ಸಮಾವೇಶವನ್ನು ಉದ್ದೇಶಿಸಿ ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಮಾತನಾಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.