ADVERTISEMENT

ಕಪ್ಪು ಶಿಲೀಂಧ್ರ: 26 ದಿನಗಳಲ್ಲಿ 100 ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 16:04 IST
Last Updated 21 ಜೂನ್ 2021, 16:04 IST

ಬೆಳಗಾವಿ: ‘ಇಲ್ಲಿನ ಬಿಮ್ಸ್ ಸಂಸ್ಥೆ (ಜಿಲ್ಲಾಸ್ಪತ್ರೆ)ಯಲ್ಲಿ 26 ದಿನಗಳಲ್ಲಿ 100 ಕಪ್ಪು ಶಿಲೀಂದ್ರ ರೋಗಿಗಳಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿದೆ’ ಎಂದು ‍ಪ್ರಭಾರ ನಿರ್ದೇಶಕ ಡಾ.ಉಮೇಶ ಕುಲಕರ್ಣಿ ತಿಳಿಸಿದ್ದಾರೆ.

ಈ ಬಗ್ಗೆ ಸೋಮವಾರ ಪ್ರಕಟಣೆ ನೀಡಿರುವ ಅವರು, ‘ಸಂಸ್ಥೆಯಲ್ಲಿ ಮೇ 26ರಂದು ಮೊದಲ ಪ್ರಕರಣ ವರದಿಯಾಗಿತ್ತು. ಮೇ 28ರಂದು ಮೊದಲ ಶಸ್ತ್ರಚಿಕಿತ್ಸೆ ನಿರ್ವಹಿಸಲಾಗಿತ್ತು. ಮೊದಲು ಸಿಬ್ಬಂದಿ ಕೊರತೆಯಿಂದ ದಿನಕ್ಕೆ 2ರಿಂದ 3 ಶಸ್ತ್ರಚಿಕಿತ್ಸೆ ನಡೆಸಲಾಗುತ್ತಿತ್ತು’ ಎಂದಿದ್ದಾರೆ.

‘ನಂತರ ಪ್ರಾದೇಶಿಕ ಆಯುಕ್ತರು ಹಾಗೂ ಆಡಳಿತಾತ್ಮಕ ವ್ಯವಸ್ಥೆಯ ಮೇಲ್ತುವಾರಿ ಅಧಿಕಾರಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರು ಬೇರೆ ಸಂಸ್ಥೆಗಳಿಂದ ಇ.ಎನ್.ಟಿ. ವೈದ್ಯರನ್ನು, ಸ್ನಾತಕೋತ್ತರ ವಿದ್ಯಾರ್ಥಿಗಳನ್ನು ನಿಯೋಜನೆ ಮಾಡಿಸಿ ಸಹಕರಿಸಿದ್ದಾರೆ. ಇದರಿಂದ ಸದ್ಯ ನಿತ್ಯ ಸರಾಸರಿ 6 ಶಸ್ತ್ರಚಿಕಿತ್ಸೆಯನ್ನು ನಿರ್ವಹಿಸುತ್ತಿದ್ದೇವೆ’ ಎಂದು ಮಾಹಿತಿ ನೀಡಿದ್ದಾರೆ.

ADVERTISEMENT

‘ಸದ್ಯ 95 ರೋಗಿಗಳು ದಾಖಲಾಗಿದ್ದು, 60 ರೋಗಿಗಳಿಗೆ ಕಣ್ಣಿನ ಬಳಿ ಸಮಸ್ಯೆ (ಐ ಇನ್‌ವಾಲ್ವ್‌ಮೆಂಟ್) ಕಂಡುಬಂದಿದೆ. 35 ರೋಗಿಗಳಿಗೆ ಕಣ್ಣಿನ ಬಳಿ ಚುಚ್ಚುಮದ್ದು ನೀಡಿದ್ದು, ಅವರೆಲ್ಲರ ದೃಷ್ಟಿಯಲ್ಲಿ ಸುಧಾರಣೆ ಕಂಡುಬಂದಿದೆ. ಸಂಸ್ಥೆಯ ಎಲ್ಲರ ಸಹಕಾರದಿಂದ ಯಶಸ್ವಿಯಾಗಿ ನಿರ್ವಹಿಸಲಾಗಿದೆ’ ಎಂದು ತಿಳಿಸಿದ್ದಾರೆ.

‘ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಸರ್ಕಾರಿ ಶುಶ್ರೂಷಾ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಕೋವಿಡ್ ರೋಗಿಗಳಿಗೆ ಯೋಗಾಭ್ಯಾಸ ಮಾಡಿಸಲಾಯಿತು’ ಎಂದು ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.