ADVERTISEMENT

ಕಪ್ಪು ಶಿಲೀಂಧ್ರ: ಕೆಎಲ್‌ಇ ಆಸ್ಪತ್ರೆಯಲ್ಲಿ 120 ರೋಗಿಗಳಿಗೆ ಶಸ್ತ್ರಚಿಕಿತ್ಸೆ

​ಪ್ರಜಾವಾಣಿ ವಾರ್ತೆ
Published 26 ಜೂನ್ 2021, 11:50 IST
Last Updated 26 ಜೂನ್ 2021, 11:50 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ಬೆಳಗಾವಿ: ಇಲ್ಲಿನ ಕೆಎಲ್‌ಇ ಸಂಸ್ಥೆಯ ಪ್ರಭಾಕರ ಕೋರೆ ಆಸ್ಪತ್ರೆಯಲ್ಲಿ120 ಮಂದಿ ಕಪ್ಪು ಶಿಲೀಂಧ್ರ ರೋಗಿಗಳಿಗೆ ಯಶಸ್ವಿ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.

‘ಕೋವಿಡ್‌ನಿಂದ ಗುಣಮುಖರಾದ ನಂತರ ಕಾಣಿಸಿಕೊಂಡ ಕಪ್ಪು ಶಿಲೀಂಧ್ರ ಸಮಸ್ಯೆಯಿಂದ ಅನೇಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಮೇ 5ರಂದು ಮೊದಲ ರೋಗಿಯು ಕಂಡು ಬಂದಿದ್ದು, ಇಲ್ಲಿಯವರೆಗೆ 120 ಮಂದಿಗೆ ಶಸ್ತ್ರಚಿಕಿತ್ಸೆ ನೆರವೇರಿಸಿ ಅವರನ್ನು ಪ್ರಾಣಾಪಾಯದಿಂದ ಪಾರು ಮಾಡಲಾಗಿದೆ. ಕೋವಿಡ್ ಸೋಂಕಿಗೆ ಒಳಗಾಗಿದ್ದ 115 ಗರ್ಭಿಣಿಯರಿಗೆ ಸುರಕ್ಷಿತ ಹೆರಿಗೆ ಮಾಡುವಲ್ಲೂ ಆಸ್ಪತ್ರೆಯ ತಜ್ಞ ವೈದ್ಯರು ಯಶಸ್ವಿಯಾಗಿದ್ದಾರೆ. ಆರ್ಥಿಕವಾಗಿ ಹಿಂದುಳಿದ 72 ಸೋಂಕಿತೆಯರಿಗೆ ಉಚಿತವಾಗಿ ಹೆರಿಗೆ ಮಾಡಿಸಲಾಗಿದೆ’ ಎಂದು ಆಸ್ಪತ್ರೆ ಪ್ರಕಟಣೆ ತಿಳಿಸಿದೆ.

‘ಕಿವಿ, ಮೂಗು ಹಾಗೂ ಗಂಟಲು ತಜ್ಞ ವೈದ್ಯ ಡಾ.ಅನಿಲ ಹಾರುಗೊಪ್ಪ ಹಾಗೂ ನೇತ್ರ ತಜ್ಞ ವೈದ್ಯ ಡಾ.ಅರವಿಂದ ತೆನಗಿ ನೇತೃತ್ವದಲ್ಲಿ ಶಸ್ತ್ರಚಿಕಿತ್ಸೆ ನಡೆದಿದೆ. 35 ರೋಗಿಗಳಿಗೆ ಕಣ್ಣು, 8 ರೋಗಿಗಳ ಮಿದುಳಿಗೆ ಕಪ್ಪು ಶಿಲೀಂದ್ರ ತಗುಲಿತ್ತು. ಅದರಲ್ಲಿ ಮೂವರ ಕಣ್ಣುಗಳನ್ನು ತೆಗೆಯಲಾಗಿದೆ. 95 ಮಂದಿ ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಪ್ರತಿಯೊಂದು ರೋಗಿಗೂ ಮೂರು ಬಾರಿ ಶಸ್ತ್ರಚಿಕಿತ್ಸೆಗೆ ಒಳಪಡಿಸಲಾಗಿದೆ’ ಎಂದು ಮಾಹಿತಿ ನೀಡಲಾಗಿದೆ.

ADVERTISEMENT

‘50 ವರ್ಷದ ವ್ಯಕ್ತಿಗೆ ಕಪ್ಪು ಶಿಲೀಂಧ್ರ ಸೋಂಕು ಮಿದುಳಿಗೆ ತಗುಲಿತ್ತು. ಜೀವನ್ಮರಣದ ನಡುವೆ ಹೋರಾಡುತ್ತಿದ್ದರು. ನರಶಸ್ತ್ರಚಿಕಿತ್ಸಕ ಡಾ.ಪ್ರಕಾಶ ಮಹಾಂತಶೆಟ್ಟಿ ಅವರ ತಂಡವು ಸಿಟಿ ಸ್ಕ್ಯಾನ್‌ ಮೂಲಕ ಪರೀಕ್ಷಿಸಿದಾಗ, ಕಪ್ಪು ಶಿಲೀಂದ್ರವು ಸೈನಸ್ ಹಾಗೂ ಮಿದುಳಿಗೆ ಹರಡಿದ್ದು ಕಂಡು ಬಂತು. ಕೂಡಲೇ ಶಸ್ತ್ರಚಿಕಿತ್ಸೆಯ ಮೂಲಕ ಅವರ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ’ ಎಂದು ತಿಳಿಸಲಾಗಿದೆ.

ಡಾ.ಅನಿಲ ಹಾರುಗೊಪ್ಪ, ಡಾ.ಶಮಾ ಬೆಲ್ಲದ, ಡಾ.ಪುನೀತ ನಾಯಕ, ಡಾ.ಪ್ರೀತಿ ಹಜಾರೆ, ಡಾ.ಪ್ರೀತಿ ಶೆಟ್ಟಿ, ಡಾ.ಅರವಿಂದ ತೆನಗಿ, ಡಾ.ಪ್ರಕಾಶ ಮಹಾಂತಶೆಟ್ಟಿ, ಡಾ.ಅಭಿಷೇಕ ಪಾಟೀಲ, ಡಾ.ವಿಕ್ರಮ, ಡಾ.ಪ್ರಕಾಶ ರಾಥೋಡ ಒಳಗೊಂಡ ತಂಡಶಸ್ತ್ರಚಿಕಿತ್ಸೆ ನೆರವೇರಿಸಿದೆ. ಅವರನ್ನು ಕೆಎಲ್‍ಇ ಸಂಸ್ಥೆಯ ಕಾರ್ಯಾಧ್ಯಕ್ಷ ಪ್ರಭಾಕರ ಕೋರೆ, ಕೆಎಲ್‌ಇ ಉನ್ನತ ಶಿಕ್ಷಣ ಮತ್ತು ಸಂಶೋಧನ ಅಕಾಡೆಮಿಯ ಕುಲಪತಿ ಡಾ.ವಿವೇಕ ಸಾವೊಜಿ, ಕುಲಸಚಿವ ಡಾ.ವಿ.ಎ. ಕೋಠಿವಾಲೆ, ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ.ಎಂ.ವಿ. ಜಾಲಿ, ಜೆಎನ್ಎಂಸಿ ಪ್ರಾಚಾರ್ಯೆ ಡಾ.ಎನ್.ಎಸ್. ಮಹಾಂತಶೆಟ್ಟಿ, ಡಾ.ಆರೀಫ್‌ ಮಾಲ್ದಾರ ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.