ADVERTISEMENT

ಸಮಸ್ಯೆಗಳಿಗೆ ಸಾಂಸ್ಕೃತಿಕ ಪರಂಪರೆಯಲ್ಲಿ ಪರಿಹಾರ: ಅತುಲ್ ಜೈನ್

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2020, 5:42 IST
Last Updated 5 ನವೆಂಬರ್ 2020, 5:42 IST
ಬೆಳಗಾವಿಯ ಎಸಿಪಿಆರ್‌ ಗುರುದೇವ ರಾನಡೆ  ಮಂದಿರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ‘ಪಂ.ದೀನದಯಾಳ್ ಉಪಾಧ್ಯಾಯರ ಚಿಂತನೆಗಳ ಮೇಲೆ ನಡೆದ ವಿಚಾರ ಸಂಕಿರಣಗಳ ಲೇಖನಗಳ ಪುಸ್ತಕ’ವನ್ನು ದೆಹಲಿಯ ದೀನದಯಾಳ್‌ ಉಪಾಧ್ಯಾಯ ಸಂಶೋಧನಾ ಸಂಸ್ಥೆಯ ಮಹಾಕಾರ್ಯದರ್ಶಿ ಅತುಲ್ ಜೈನ್ ಬಿಡುಗಡೆ ಮಾಡಿದರು
ಬೆಳಗಾವಿಯ ಎಸಿಪಿಆರ್‌ ಗುರುದೇವ ರಾನಡೆ  ಮಂದಿರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ‘ಪಂ.ದೀನದಯಾಳ್ ಉಪಾಧ್ಯಾಯರ ಚಿಂತನೆಗಳ ಮೇಲೆ ನಡೆದ ವಿಚಾರ ಸಂಕಿರಣಗಳ ಲೇಖನಗಳ ಪುಸ್ತಕ’ವನ್ನು ದೆಹಲಿಯ ದೀನದಯಾಳ್‌ ಉಪಾಧ್ಯಾಯ ಸಂಶೋಧನಾ ಸಂಸ್ಥೆಯ ಮಹಾಕಾರ್ಯದರ್ಶಿ ಅತುಲ್ ಜೈನ್ ಬಿಡುಗಡೆ ಮಾಡಿದರು   

ಬೆಳಗಾವಿ: ‘ನಿಸರ್ಗ ಮಾನವತೆ ಹಾಗೂ ಸಹಜೀವನದ ನಮ್ಮ ಸಾಂಸ್ಕೃತಿಕ ಪರಂಪರೆಯು ಎಲ್ಲ ಆಧುನಿಕ ಸಮಸ್ಯೆಗಳಿಗೂ ಪರಿಹಾರವಾಗಿದೆ’ ಎಂದು ದೆಹಲಿಯ ದೀನದಯಾಳ್‌ ಉಪಾಧ್ಯಾಯ ಸಂಶೋಧನಾ ಸಂಸ್ಥೆಯ ಮಹಾಕಾರ್ಯದರ್ಶಿ ಅತುಲ್ ಜೈನ್ ಪ್ರತಿಪಾದಿಸಿದರು.

ಇಲ್ಲಿನ ಹಿಂದವಾಡಿಯ ಧರ್ಮದರ್ಶನಗಳ ತೌಲನಿಕ ಅಧ್ಯಯನ ಸಂಸ್ಥೆ (ಎಸಿಪಿಆರ್‌)ಯ ಗುರುದೇವ ರಾನಡೆ ಮಂದಿರದಲ್ಲಿ ಬುಧವಾರ ನಡೆದ ಕಾರ್ಯಕ್ರಮದಲ್ಲಿ ‘ಪಂ.ದೀನದಯಾಳ್ ಉಪಾಧ್ಯಾಯರ ಚಿಂತನೆಗಳ ಮೇಲೆ ನಡೆದ ವಿಚಾರ ಸಂಕಿರಣಗಳ ಲೇಖನಗಳ ಪುಸ್ತಕ’ವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

‘ಭಾರತದ ಜೀವನ ಪದ್ಧತಿಯೇ ಸಮರಸದ ಬದುಕಿಗೆ ಅಡಿಪಾಯವಾಗಿದೆ. ಸಾಂಸ್ಕೃತಿಕ ಪರಂಪರೆಯನ್ನು ಇಷ್ಟು ದಿನ ಉಪೇಕ್ಷೆ ಮಾಡಿದ್ದೇವೆ. ಅದರ ಪುನರುತ್ಥಾನವೆ ನಿಜವಾದ ಅಭಿವೃದ್ಧಿ ಎನ್ನುವುದನ್ನು ಮನಗಾಣಬೇಕು. ನವೀನ ತಾಂತ್ರಿಕತೆ ಅಳವಡಿಸಿಕೊಳ್ಳಬೇಕು ಎಂದರೆ ಪಾಶ್ಚಾತ್ಯ ತಾಂತ್ರಿಕತೆಯ ಮೊರೆ ಹೋಗಬೇಕು ಎನ್ನುವುದಲ್ಲ. ನಾವು ಆತ್ಮನಿರ್ಭರ ಭಾರತದ ಮೂಲಕ ಅದನ್ನು ಸಾಧಿಸಬಹುದು. ಇದೇ ಚಿಂತನೆ ದೀನದಯಾಳ್ ಅವರದ್ದೂ ಆಗಿತ್ತು’ ಎಂದರು.

ADVERTISEMENT

ಆರ್‌ಎಸ್‌ಎಸ್‌ ಸ್ವಯಂ ಸೇವಕ ಸು. ರಾಮಣ್ಣ ಮಾತನಾಡಿ, ‘ವ್ಯಕ್ತಿ ಮತ್ತು ಸಮಾಜದ ಸಮತೋಲನದ ಚಿಂತನೆಯನ್ನು ಭಾರತೀಯ ಪರಂಪರೆಯ ಮೂಲದಿಂದ ಇಡೀ ಜಗತ್ತು ಕಲಿಯಬೇಕು ಎನ್ನುವುದು ಉಪಾಧ್ಯಾಯರ ಚಿಂತನೆಯಾಗಿತ್ತು’ ಎಂದು ಸ್ಮರಿಸಿದರು.

ಪುಸ್ತಕದ ಸಂಪಾದಕರಾದ ಪ್ರೊ.ಮಧುಮತಿ ಕುಲಕರ್ಣಿ ಹಾಗೂ ಪ್ರೊ.ಐ.ಎಸ್. ಕುಂಬಾರ್ ಅವರನ್ನು ಸನ್ಮಾನಿಸಲಾಯಿತು.

ಪ್ರೊ.ಸಂದೀಪ್ ನಾಯರ್ ಪುಸ್ತಕ ಪರಿಚಯಿಸಿದರು. ಕಿಶೋರ ಕಾಕಡೆ ಪ್ರಾರ್ಥಿಸಿದರು. ಸಂಸ್ಥೆಯ ಕಾರ್ಯದರ್ಶಿ ಮಾರುತಿ ಬಿ. ಝಿರಲಿ ಸ್ವಾಗತಿಸಿದರು. ಅಧ್ಯಕ್ಷ ಅಶೋಕ ಪೋದ್ದಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.