ADVERTISEMENT

ಪುಸ್ತಕಗಳಿಗಿದೆ ಬದುಕು ಶ್ರೀಮಂತಗೊಳಿಸುವ ಶಕ್ತಿ

ಡಾ.ಅಲ್ಲಮಪ್ರಭು ಸ್ವಾಮೀಜಿ ಅಭಿಮತ

​ಪ್ರಜಾವಾಣಿ ವಾರ್ತೆ
Published 22 ಫೆಬ್ರುವರಿ 2021, 13:20 IST
Last Updated 22 ಫೆಬ್ರುವರಿ 2021, 13:20 IST
ಬೆಳಗಾವಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮಲ್ಲಿ ಗಂದಿಗವಾಡದ ಮೃತ್ಯುಂಜಯಸ್ವಾಮಿ ಹಿರೇಮಠ ರಚಿಸಿದ ‘ಸದ್ಯೋನ್ಮುಕ್ತೆ’ ನಾಟಕ ಕೃತಿಯನ್ನು ಸಾಹಿತಿ ಪ್ರೊ.ಬಸವರಾಜ ಜಗಜಂಪಿ, ಶ್ರೀಗಳು ಮತ್ತು ಗಣ್ಯರು ಬಿಡುಗಡೆ ಮಾಡಿದರು
ಬೆಳಗಾವಿಯಲ್ಲಿ ಭಾನುವಾರ ನಡೆದ ಕಾರ್ಯಕ್ರಮಲ್ಲಿ ಗಂದಿಗವಾಡದ ಮೃತ್ಯುಂಜಯಸ್ವಾಮಿ ಹಿರೇಮಠ ರಚಿಸಿದ ‘ಸದ್ಯೋನ್ಮುಕ್ತೆ’ ನಾಟಕ ಕೃತಿಯನ್ನು ಸಾಹಿತಿ ಪ್ರೊ.ಬಸವರಾಜ ಜಗಜಂಪಿ, ಶ್ರೀಗಳು ಮತ್ತು ಗಣ್ಯರು ಬಿಡುಗಡೆ ಮಾಡಿದರು   

ಬೆಳಗಾವಿ: ‘ಗ್ರಂಥಗಳಲ್ಲಿ ಮಾನವನ ವಿಕಾಸಕ್ಕೆ ಬೇಕಾಗುವ ಎಲ್ಲ ಧನಾತ್ಮಕ ಮಾರ್ಗದರ್ಶನಗಳಿರುತ್ತವೆ. ಬದುಕನ್ನು ಶ್ರೀಮಂತಗೊಳಿಸುವ ಶಕ್ತಿ ಅವುಗಳಿಗೆ ಇದೆ’ ಎಂದು ನಾಗನೂರು ರುದ್ರಾಕ್ಷಿಮಠದ ಡಾ.ಅಲ್ಲಮಪ್ರಭು ಸ್ವಾಮೀಜಿ ಹೇಳಿದರು.

ನಗರದ ಎಸ್.ಜಿ. ಬಾಳೇಕುಂದ್ರಿ ತಾಂತ್ರಿಕ ಕಾಲೇಜಿನ ಸಭಾಂಗಣದಲ್ಲಿ ಭಾನುವಾರ ಗಂದಿಗವಾಡದ ಮೃತ್ಯುಂಜಯಸ್ವಾಮಿ ಹಿರೇಮಠ ರಚಿಸಿದ ‘ಸದ್ಯೋನ್ಮುಕ್ತೆ’ ಎಂಬ ನಾಟಕ ಕೃತಿ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ಇಂದು ನಾಟಕ ಕಲೆಯು ನಶಿಸಿ ಹೋಗುತ್ತಿರುವುದು ವಿಷಾದನೀಯಾಗಿದೆ. ಬಹುತೇಕರು ಆ ಕಲೆಗಳಿಂದ ವಿಮುಖರಾಗುತ್ತಿದ್ದಾರೆ. ನಾಟಕ ರಚಿಸುವವರ ಸಂಖ್ಯೆಯೂ ವಿರಳವಾಗುತ್ತಿದೆ. ಆದರೆ, ಪ್ರವಚನಕಾರ ಮೃತ್ಯುಂಜಯಸ್ವಾಮಿ ಅವರು ಭಕ್ತಿಪ್ರಧಾನ ನಾಟಕ ರಚಿಸುವ ಮೂಲಕ ಸಮಾಜಕ್ಕೆ ಉಪಕಾರ ಮಾಡಿದ್ದಾರೆ’ ಎಂದರು.

ADVERTISEMENT

ಸಾನ್ನಿಧ್ಯ ವಹಿಸಿದ್ದ ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ, ‘ನಾಟಕಗಳು ಮನರಂಜನೆ ಜೊತೆಗೆ ಸಮುದಾಯವನ್ನು ತಿದ್ದುವ ಕಾರ್ಯವನ್ನೂ ಮಾಡುತ್ತವೆ. ರಂಗಭೂಮಿಯು ಎಲ್ಲ ಕಲೆಗಳ ತವರು ಮನೆಯಾಗಿದೆ. ಅದನ್ನು ಉಳಿಸಿ–ಬೆಳೆಸಲು ನಾವೆಲ್ಲರೂ ಪ್ರಯತ್ನಿಸಬೇಕು’ ಎಂದು ತಿಳಿಸಿದರು.

ಅಧ್ಯಕ್ಷತೆ ವಹಿಸಿದ್ದ ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷೆ ರತ್ನಪ್ರಭಾ ಬೆಲ್ಲದ ಮಾತನಾಡಿದರು.

ಪುಸ್ತಕ ಬಿಡುಗಡೆ ಮಾಡಿದ ಸಾಹಿತಿ ಪ್ರೊ.ಬಸವರಾಜ ಜಗಜಂಪಿ, ‘14ನೇ ಶತಮಾನದಲ್ಲಿ ಮೂಡಿ ಬಂದ ಶೂನ್ಯ ಸಂಪಾದನೆಯ ಮೊದಲ ಭಾಗವನ್ನು ನಾಟಕದ ರೂಪದಲ್ಲಿ ತಂದಿರುವುದು ಹೆಮ್ಮೆಯ ವಿಷಯ. ಅಧ್ಯಾತ್ಮವನ್ನು ನಾಟಕದ ಪಾತ್ರದಾರಿಗಳ ಮೂಲಕ ಸಮುದಾಯಕ್ಕೆ ತಲುಪಿಸುವ ಸಾಹಸವನ್ನು ಮೃತ್ಯುಂಜಯಸ್ವಾಮಿ ಮಾಡಿದ್ದಾರೆ’ ಎಂದು ಶ್ಲಾಘಿಸಿದರು.

ಕೃತಿಯನ್ನು ಸಾಹಿತಿ ರಾಮಕೃಷ್ಣ ಮರಾಠೆ ಪರಿಚಯಿಸಿದರು.

ಪ್ರೊ.ಶ್ರೀಕಾಂತ ಶಾನವಾಡ ಮಾತನಾಡಿದರು.

ಯರಗಟ್ಟಿಯ ಪೃಥ್ವಿ ಇಂಟರ್‌ನ್ಯಾಷನಲ್ ಶಾಲೆಯ ಮಕ್ಕಳು ಪ್ರಾರ್ಥನಾ ಗೀತೆ ಹಾಡಿದರು. ಮನೋಜ ಹೊಸವಾಳ ಹಾಗೂ ಬಸವರಾಜ ಗಜೇಂದ್ರಗಡ
ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. ಸಾಹಿತಿ ಸುನಂದಾ ಯಮ್ಮಿ ಹಾಗೂ ಪ್ರತಿಭಾ ಕಳ್ಳಿಮಠ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.