ADVERTISEMENT

ಉದ್ಯಮಶೀಲತೆ ಪ್ರೋತ್ಸಾಹಿಸಲು ತರಬೇತಿ

ವಿದ್ಯಾರ್ಥಿಗಳಿಗೆ ಬೂಟ್‌ಕ್ಯಾಂಪ್‌ ಆಯೋಜನೆ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 12:58 IST
Last Updated 5 ಸೆಪ್ಟೆಂಬರ್ 2019, 12:58 IST
ಬೆಳಗಾವಿಯಲ್ಲಿ ನಡೆದ ಬೂಟ್‌ಕ್ಯಾಂಪ್‌ನಲ್ಲಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು
ಬೆಳಗಾವಿಯಲ್ಲಿ ನಡೆದ ಬೂಟ್‌ಕ್ಯಾಂಪ್‌ನಲ್ಲಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು   

ಬೆಳಗಾವಿ: ವಿದ್ಯಾರ್ಥಿಗಳಲ್ಲಿ ಉದ್ಯಮಶೀಲತೆ ಪ್ರೋತ್ಸಾಹಿಸಲು ಐಟಿ, ಬಿಟಿ ಮತ್ತು ಎಸ್‌ ಅಂಡ್‌ ಟಿ ಇಲಾಖೆಯು ಕರ್ನಾಟಕ ಇನ್ನೋವೇಷನ್ ಅಂಡ್ ಟೆಕ್ನಾಲಜಿ ಸೊಸೈಟಿ (ಕೆಐಟಿಎಸ್-ಕಿಟ್ಸ್) ಮೂಲಕ ಆರಂಭಿಸಿರುವ ‘ಎ–ಸ್ಟೆಪ್‌’ ಉಪಕ್ರಮದಲ್ಲಿ ಇಲ್ಲಿನ ಕೆಎಲ್‌ಎಸ್‌ ಗೋಗಟೆ ಹಾಗೂ ಕೆಎಲ್‌ಇ ಡಾ.ಎಂ.ಎಸ್. ಶೇಷಗಿರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ಹಮ್ಮಿಕೊಂಡಿರುವ ಮೂರು ದಿನಗಳ ತರಬೇತಿ ಗುರುವಾರ ಆರಂಭಗೊಂಡಿತು.

‘ಸರ್ಕಾರವು ಉದ್ಯಮಶೀಲತೆಯ ಚೈತನ್ಯ ನೀಡಲು ಆಸಕ್ತಿ ಹೊಂದಿದೆ. ಈ ನಿಟ್ಟಿನಲ್ಲಿ ಇ-ಸ್ಟೆಪ್ ಮತ್ತೊಂದು ಉಪಕ್ರಮವಾಗಿದೆ. ಇದರಲ್ಲಿ ಯುವ ಪ್ರತಿಭೆಗಳನ್ನು ಗುರುತಿಸಿ ಪೋಷಿಸಲಾಗುವುದು. ಪ್ರತಿ ದಿನ 400ಕ್ಕೂ ಹೆಚ್ಚಿನ ನೋಂದಣಿಗಳ ಜೊತೆಗೆ ರಾಜ್ಯದ ವಿವಿಧಡೆ ನಡೆದ ಕ್ಯಾಂಪ್‌ಗಳಿಗೆ ಉತ್ತಮ ಪ್ರತಿಕ್ರಿಯೆ ಬಂದಿದೆ. ಇದುವರೆಗೆ 18ರಿಂದ 26 ವರ್ಷ ವಯಸ್ಸಿನ 2,499 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದಾರೆ. ಇದರಲ್ಲಿ ಸುಮಾರು ಶೇ. 50ರಷ್ಟು ಮಹಿಳಾ ಅಭ್ಯರ್ಥಿಗಳಾಗಿದ್ದಾರೆ’ ಎಂದು ಸರ್ಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣಾರೆಡ್ಡಿ ತಿಳಿಸಿದ್ದಾರೆ.

‘ಇ-ಸ್ಟೆಪ್ ಎಲ್ಲರನ್ನೂ ಒಳಗೊಂಡ ಬೆಳವಣಿಗೆಯಲ್ಲಿ ನೆರವಾಗುತ್ತದೆ. ದೇಶದ ಸ್ಟಾರ್ಟ್ ಅಪ್ ರಾಜಧಾನಿಯಾಗಿ ಕರ್ನಾಟಕದ ಸ್ಥಾನವನ್ನು ಮತ್ತಷ್ಟು ದೃಢಪಡಿಸುವಲ್ಲಿ ಇಲ್ಲಿನ ಪ್ರತಿಭೆಗಳನ್ನು ಬಳಸಿಕೊಳ್ಳುವುದು ನಮ್ಮ ಉದ್ದೇಶವಾಗಿದೆ’ ಎಂದು ಹೇಳಿದ್ದಾರೆ.

ADVERTISEMENT

‘ಕರ್ನಾಟಕ ಸ್ಟಾರ್ಟ್‌ಅಪ್‌ ಸೆಲ್‌ನ ಈ ಉಪಕ್ರಮವನ್ನು ರಾಜ್ಯದಲ್ಲಿನ ವಿದ್ಯಾರ್ಥಿ ಸ್ಟಾರ್ಟ್‌ಅಪ್‌ಗಳನ್ನು ಉದ್ಯಮಶೀಲತೆಯ ಕಡೆಗೆ ಸಬಲೀಕರಿಸುವ ಉದ್ದೇಶದೊಂದಿಗೆ ಆರಂಭಿಸಲಾಗಿದೆ. ಬೂಟ್‌ ಕ್ಯಾಂಪ್‌ಗಳು, ಮಾರ್ಗದರ್ಶನ ಮತ್ತು ನಿರ್ದಿಷ್ಟ ತರಬೇತಿ ಕಾರ್ಯಕ್ರಮಗಳನ್ನು ನಡೆಸಲಾಗುವುದು. ಬೂಟ್‌ಕ್ಯಾಂಪ್‌ಗಳನ್ನು ನ್ಯೂ ಏಜ್ ಇನ್‌ಕ್ಯುಬೇಷನ್ ನೆಟ್‌ವರ್ಕ್(ಎನ್‌ಎಐಎನ್)ಗಳಲ್ಲಿ ಸಂಘಟಿಸಲು ಯೋಜಿಸಲಾಗಿದೆ’ ಎಂದು ಮಾಹಿತಿ ನೀಡಿದ್ದಾರೆ.

‘ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡುವತ್ತ ಬೂಟ್‌ಕ್ಯಾಂಪ್ ಉತ್ತಮ ಹೆಜ್ಜೆಯಾಗಿದೆ. ಈ ಉಪಕ್ರಮದ ನಂತರ 2ನೇ ಮತ್ತು 3ನೇ ಹಂತದ ನಗರಗಳ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಉದ್ಯಮಶೀಲತೆಯ ಕಾರ್ಯಗಳನ್ನು ವೃತ್ತಿಜೀವನಗಳಾಗಿ ಆರಿಸಿಕೊಳ್ಳಲು ವಿಶ್ವಾಸ ಹೊಂದಲಿದ್ದಾರೆ’ ಎಂದು ಐಟಿ, ಬಿಟಿ ಇಲಾಖೆ, ಕಿಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಪ್ರಶಾಂತ್‌ಕುಮಾರ್‌ ಮಿಶ್ರಾ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.