ADVERTISEMENT

‘ಗಡಿ ವಿವಾದ; ಹಿಂಸಾತ್ಮಕ ಮಾರ್ಗ ಕೈಬಿಡಿ’

ಎನ್‌ಸಿಪಿ ಶಾಸಕ ರಾಜೇಶ ಪಾಟೀಲ ಕೋರಿಕೆ;

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2019, 13:48 IST
Last Updated 29 ಡಿಸೆಂಬರ್ 2019, 13:48 IST

ಬೆಳಗಾವಿ:‘ಗಡಿ ವಿವಾದ ಇತ್ಯರ್ಥ ಪಡಿಸುವ ನಿಟ್ಟಿನಲ್ಲಿ ಪ್ರಜಾಸತ್ತಾತ್ಮಕ ರೀತಿಯಲ್ಲಿ ಹೋರಾಟ ಮುಂದುವರಿಸೋಣ. ಸುಪ್ರೀಂ ಕೋರ್ಟ್‌ಗೆ ಸೂಕ್ತ ದಾಖಲೆ ಕೊಡುವ ಕೆಲಸ ಮಾಡೋಣ. ಹಿಂಸಾತ್ಮಕ ಮಾರ್ಗ ಅನುಸರಿಸುವುದು ಬೇಡ’ ಎಂದು ಮಹಾರಾಷ್ಟ್ರದ ಚಂದಗಡ ಶಾಸಕ ರಾಜೇಶ ಪಾಟೀಲ ಹೇಳಿದರು.

ಇಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿಯು (ಎಂಇಎಸ್‌) ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸನ್ಮಾನ ಸ್ವೀಕರಿಸಿ ಅವರು ಮಾತನಾಡಿದರು.

‘ಬೆಳಗಾವಿ ಹಾಗೂ ಗಡಿಭಾಗದಲ್ಲಿ ಶಾಂತಿ ಕಾಪಾಡಬೇಕು. ನಿಮ್ಮ ಪರವಾಗಿ ಮಹಾರಾಷ್ಟ್ರದ ವಿಧಾನಸಭೆಯಲ್ಲಿ ನಾನು ಧ್ವನಿ ಎತ್ತುವ ಕೆಲಸ ಮಾಡುತ್ತೇನೆ. ಮುಂದೊಂದು ದಿನ ಬೆಳಗಾವಿಯ ಶಾಸಕನಾಗಿ ಮಹಾರಾಷ್ಟ್ರ ವಿಧಾನಸಭೆ ಪ್ರವೇಶಿಸುತ್ತೇನೆ’ ಎಂದು ಹೇಳಿದರು.

ADVERTISEMENT

‘ಕಾಶ್ಮೀರ, ಅಯೋಧ್ಯೆಯಂತಹ ಜಟಿಲ ಸಮಸ್ಯೆಗಳನ್ನು ಬಗೆಹರಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು ಗಡಿ ವಿವಾದವನ್ನೂ ಬಗೆಹರಿಸಬೇಕು. ಕರ್ನಾಟಕ ಹಾಗೂ ಮಹಾರಾಷ್ಟ್ರದ ಮುಖ್ಯಮಂತ್ರಿ ಅವರ ಜೊತ ಚರ್ಚಿಸಿ, ಇದಕ್ಕೊಂದು ಪರಿಹಾರ ಕಂಡುಕೊಳ್ಳಬೇಕು’ ಎಂದು ಆಗ್ರಹಿಸಿದರು.

ಪ್ರತಿಭಟನೆ: ರಾಜೇಶ ಪಾಟೀಲ ಅವರ ಸನ್ಮಾನವನ್ನು ವಿರೋಧಿಸಿ ಕರ್ನಾಟಕ ರಕ್ಷಣಾ ವೇದಿಕೆಯ ಕಾರ್ಯಕರ್ತರು ನಗರದ ರಾಣಿ ಚನ್ನಮ್ಮ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು. ಪೊಲೀಸರು ಮಧ್ಯೆಪ್ರವೇಶಿಸಿ, ಪ್ರತಿಭಟನಾಕಾರರನ್ನು ವಶಕ್ಕೆ ಪಡೆದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.