ADVERTISEMENT

ಜಮೀನಿನ ಹಕ್ಕು ಬದಲಾವಣೆಗೆ ಲಂಚ: ವಿಎಗೆ ಒಂದೂವರೆ ವರ್ಷ ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2018, 12:21 IST
Last Updated 6 ಸೆಪ್ಟೆಂಬರ್ 2018, 12:21 IST

ಬೆಳಗಾವಿ: ಜಮೀನಿನ ಹಕ್ಕು ಬದಲಾವಣೆ ಮಾಡಿಕೊಡಲು ಲಂಚ ಪಡೆದದ್ದು ಸಾಬೀತಾದ್ದರಿಂದ, ಅಥಣಿ ತಾಲ್ಲೂಕಿನ ಜುಂಜರವಾಡ ಗ್ರಾಮ ಪ‍ಂಚಾಯ್ತಿಯ ಗ್ರಾಮ ಲೆಕ್ಕಾಧಿಕಾರಿ ಅ‍ಪ್ಪಾಸಾಹೇಬ ಬುಜಬಲಿ ನೇಮನ್ನವರ ಅವರಿಗೆ 4ನೇ ಹೆಚ್ಚುವರಿ ಜಿಲ್ಲಾ ಸೆಷನ್ಸ್‌ ಮತ್ತು ವಿಶೇಷ ನ್ಯಾಯಾಲಯ ಒಂದೂವರೆ ವರ್ಷ ಕಠಿಣ ಕಾರಾಗೃಹ ಶಿಕ್ಷೆ ಮತ್ತು ₹ 12ಸಾವಿರ ದಂಡ ವಿಧಿಸಿ ಗುರುವಾರ ತೀರ್ಪು ನೀಡಿದೆ.‌

ಜಮೀನಿನ ಹಕ್ಕು ಬದಲಾಯಿಸಲು ಗ್ರಾಮ ಲೆಕ್ಕಾಧಿಕಾರಿಯು ₹ 40ಸಾವಿರ ಲಂಚದ ಬೇಡಿಕೆ ಇಟ್ಟಿದ್ದಾರೆ ಎಂದು ಅದೇ ಗ್ರಾಮದ ಪ್ರಕಾಶ ಚಂದ್ರಪ್ಪ ಶಿಂಗ್ಯಾಗೋಳ, ಲೋಕಾಯುಕ್ತ ಠಾಣೆಗೆ 2011ರ ಜುಲೈ 1ರಂದು ದೂರು ನೀಡಿದ್ದರು. ಅದೇ ದಿನ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ, ಆರೋಪಿ ಬಂಧಿಸಿದ್ದರು. ಲಂಚದ ಹಣ ₹ 40ಸಾವಿರ ವಶಪಡಿಸಿಕೊಂಡಿದ್ದರು.

ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶ ಶಶಿಧರ ಶೆಟ್ಟಿ ಶಿಕ್ಷೆ ವಿಧಿಸಿದ್ದಾರೆ. ಲೋಕಾಯುಕ್ತ ಠಾಣೆಯ ಅಂದಿನ ಇನ್‌ಸ್ಪೆಕ್ಟರ್‌, ಪ್ರಸ್ತುತ ಪೊಲೀಸ್‌ ಅಧೀಕ್ಷಕರಾಗಿರುವ ಆರ್.ಕೆ. ಪಾಟೀಲ ತನಿಖೆ ನಡೆಸಿದ್ದರು.

ADVERTISEMENT

ಸರ್ಕಾರದ ಪರ ವಿಶೇಷ ಸರ್ಕಾರಿ ಅಭಿಯೋಜಕ ಕೆ.ಆರ್. ಎಕ್ಸಂಬಿ ವಾದ ಮಂಡಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.