ADVERTISEMENT

ಬಜೆಟ್‌ ಪುಸ್ತಕದಲ್ಲೇ ಉಳಿದಿರುವ ಘೋಷಣೆಗಳು!

ಮತ್ತೊಂದು ಬಜೆಟ್‌ಗೆ ಮುಖ್ಯಮಂತ್ರಿ ಸಿದ್ಧತೆ

ಎಂ.ಮಹೇಶ
Published 25 ಫೆಬ್ರುವರಿ 2021, 13:23 IST
Last Updated 25 ಫೆಬ್ರುವರಿ 2021, 13:23 IST
ಬಿ.ಎಸ್. ಯಡಿಯೂರಪ್ಪ
ಬಿ.ಎಸ್. ಯಡಿಯೂರಪ್ಪ   

ಬೆಳಗಾವಿ: ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರು ಹೋದ ವರ್ಷ ಮಂಡಿಸಿದ್ದ 2020–21ನೇ ಸಾಲಿನ ಬಜೆಟ್‌ನಲ್ಲಿ ಪ್ರಸ್ತಾಪಿಸಲಾಗಿದ್ದ ಹಲವು ಯೋಜನೆಗಳು, ಬಜೆಟ್‌ ಪುಸ್ತಕದಲ್ಲೇ ಉಳಿದಿವೆ!

ಈ ಭಾಗದ ಬಹುದಿನಗಳ ಬೇಡಿಕೆಯಾದ ಮತ್ತು ಬಹು ನಿರೀಕ್ಷಿತ ಕಳಸಾ ಬಂಡೂರಿ ಮಹದಾಯಿ ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ₹ 500 ಕೋಟಿ ಅನುದಾನ ನೀಡಿರುವುದಾಗಿ ಘೋಷಿಸಲಾಗಿತ್ತು.

ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಿಗೆ ನ್ಯಾಯಮಂಡಳಿ ಐತೀರ್ಪಿನ ಪ್ರಕಾರ ಹಂಚಿಕೆ ಆಗಿರುವ ನೀರಿನ ಬಳಕೆ ಕುರಿತು ಕೇಂದ್ರ ಸರ್ಕಾರ ಗೆಜೆಟ್‌ನಲ್ಲಿ ಪ್ರಕಟಿಸಿರುವುದು ಬಿಟ್ಟರೆ, ಅನುದಾನ ಮಾತ್ರ ಖರ್ಚಾಗಿಲ್ಲ. ಅದನ್ನು ಬಳಸಿಕೊಳ್ಳುವ ನಿಟ್ಟಿನಲ್ಲಿ ಕೆಲಸವೇ ಆಗಿಲ್ಲ.

ADVERTISEMENT

ಜಲಸಂಪನ್ಮೂಲ ಸಚಿವರು ಜಿಲ್ಲೆಯವರೇ (ರಮೇಶ ಜಾರಕಿಹೊಳಿ) ಆಗಿದ್ದರೂ ನಮ್ಮ ಪಾಲಿನ ನೀರು ಬಳಸಿಕೊಳ್ಳುವುದಕ್ಕೆ ಇನ್ನೂ ಮುಹೂರ್ತವೇ ಕೂಡಿಬಂದಿಲ್ಲ! ‘ತಾಂತ್ರಿಕ ಕಾರಣ’ಗಳನ್ನು ಮುಂದಿಡುವ ಮೂಲಕ ದಿನದೂಡಲಾಗುತ್ತಿದೆಯೇ ಹೊರತು ವಿವಾದ ಬಗೆಹರಿಸುವ ನಿಟ್ಟಿನಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕ್ರಮ ವಹಿಸಿಲ್ಲ. ಜಿಲ್ಲಾ ಉಸ್ತುವರಿಯೂ ಆಗಿರುವ ಸಚಿವರು ‌ಹಲವು ಬಾರಿ ದೆಹಲಿ ಪ್ರವಾಸ ಮಾಡಿ ಪ್ರಯತ್ನಿದ್ದಾರೆ. ಇದು ಬಿಟ್ಟಿರೆ, ನೀರು ಬಳಕೆಯ ವಿಷಯದಲ್ಲಿ ‘ಫಲಕಾರಿ’ಯಾದ ಕ್ರಮಗಳು ಆಗಿಲ್ಲ.

ನಿರೀಕ್ಷಿಸಿದ್ದರು

ಬಜೆಟ್‌ನಲ್ಲಿ ಅನುದಾನ ನೀಡಿದ್ದರಿಂದ, ಬೆಳಗಾವಿಯೂ ಸೇರಿದಂತೆ ಉತ್ತರ ಕರ್ನಾಟಕದ ನಾಲ್ಕು ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಪೂರೈಸುವ ಮಹತ್ವದ್ದಾಗ ಈ ಯೋಜನೆ ಅನುಷ್ಠಾನ ಆಗುತ್ತದೆ ಎಂದು ಜನರು ಆಸೆಗಣ್ಣಿನಿಂದ ನೋಡುತ್ತಿದ್ದರು. ಕಾಮಗಾರಿ ಚುರುಕು ಪಡೆಯಲಿದೆ ಎಂದು ನಿರೀಕ್ಷಿಸಲಾಗಿತ್ತು. ಖಾನಾಪುರ, ಬೈಲಹೊಂಗಲ, ಸವದತ್ತಿ ಹಾಗೂ ರಾಮದುರ್ಗ ಸುತ್ತಮುತ್ತಲಿನ ಪ್ರದೇಶಗಳು ಸೇರಿದಂತೆ ವಿವಿಧ ತಾಲ್ಲೂಕುಗಳಲ್ಲಿ ಕುಡಿಯುವ ನೀರು ಪೂರೈಕೆಗೆ ಅನುಕೂಲವಾಗಲಿದೆ ಎಂದು ಆಶಿಸಲಾಗಿತ್ತು. ಅನುಷ್ಠಾನಕ್ಕೆ ಆಗ್ರಹಿಸಿ ಪ್ರತಿಭಟನೆಗಳು ನಡೆಯುವುದು ಈಗಲೂ ನಿಂತಿಲ್ಲ.

ಬೆಳಗಾವಿ–ಕಿತ್ತೂರು– ಧಾರವಾಡ ರೈಲು ಮಾರ್ಗ ನಿರ್ಮಾಣಕ್ಕೆ ಜಮೀನು ನೀಡುವುದಾಗಿ ಪ್ರಸ್ತಾಪಿಸಲಾಗಿತ್ತು. ಕೇಂದ್ರವು ₹ 50 ಕೋಟಿ ಅನುದಾನ ತೆಗೆದಿರಿಸಿದೆ. ರೈಲು ಮಾರ್ಗ ನಿರ್ಮಾಣಕ್ಕೆ 837 ಎಕರೆ ಭೂಮಿ ಅಗತ್ಯವಾಗಿದ್ದು, ಅದನ್ನು ರಾಜ್ಯ ಸರ್ಕಾರ ಭೂಸ್ವಾಧೀನಪಡಿಸಿಕೊಂಡು ರೈಲ್ವೆ ಇಲಾಖೆಗೆ ಹಸ್ತಾಂತರಿಸಬೇಕಾಗುತ್ತದೆ. ಧಾರವಾಡ ಜಿಲ್ಲೆಯಲ್ಲಿ 225 ಹಾಗೂ ಬೆಳಗಾವಿ ಜಿಲ್ಲೆಯಲ್ಲಿ 602 ಎಕರೆ ಜಮೀನು ಬೇಕಾಗಿದೆ. ಆದರೆ, ಇಲ್ಲಿಯವರೆಗೆ ಭೂಸ್ವಾಧೀನ ಪ್ರಕ್ರಿಯೆ ಆರಂಭವಾಗಿಲ್ಲ. ಹಾಗಾಗಿ, ಕಾಮಗಾರಿ ಇನ್ನೂ ಆರಂಭವಾಗಿಲ್ಲ.

ಬಹುದಿನಗಳ ಬೇಡಿಕೆಗೆ ರೈಲ್ವೆ ಖಾತೆ ರಾಜ್ಯ ಸಚಿವರಾಗಿದ್ದ ದಿವಂಗತ ಸುರೇಶ ಅಂಗಡಿ ಅವರು ಹಸಿರು ನಿಶಾನೆ ಕೊಡಿಸಿದ್ದರು. ಈ ಹಿನ್ನೆಲೆಯಲ್ಲಿ ಯೋಜನೆಗೆ ಅಗತ್ಯವಾದ ಜಮೀನನ್ನು ಉಚಿತವಾಗಿ ನೀಡಲು ಹಾಗೂ ಯೋಜನಾ ವೆಚ್ಚದ ಶೇ 50ರಷ್ಟು ಪಾಲು ಭರಿಸಲು ಮುಖ್ಯಮಂತ್ರಿ ಪ್ರಕಟಿಸಿದ್ದರು.

ಸುವರ್ಣ ವಿಧಾನಸೌಧಕ್ಕೆ ಕೆಲವು ಇಲಾಖೆಗಳ ಕಚೇರಿಗಳನ್ನು ಸ್ಥಳಾಂತರ ಮಾಡುವುದಾಗಿ ಹೇಳಿದ್ದು ಅನುಷ್ಠಾನಕ್ಕೆ ಬಂದಿಲ್ಲ. ಜಿಲ್ಲಾ ಮಟ್ಟದ ಕಚೇರಿಗಳನ್ನಷ್ಟೆ ಸ್ಥಳಾಂತರಿಸಿ, ಸುವರ್ಣ ವಿಧಾನಸೌಧವನ್ನು ಜಿಲ್ಲಾಡಳಿತ ಭವನದ ರೀತಿ ಪರಿಗಣಿಸಲಾಗಿದೆ. ಇದು ಇಲ್ಲಿನವರ ಅಸಮಾಧಾನಕ್ಕೆ ಕಾರಣವಾಗಿದೆ.

ಬೆಳಗಾವಿಯಲ್ಲಿ ಸರ್ಕಾರಿ ಉಪಕರಣಾಗಾರ ಹಾಗೂ ತರಬೇತಿ ಕೇಂದ್ರ (ಜಿಟಿಟಿಸಿ) ಸ್ಥಾಪಿಸುವುದಾಗಿ ಹೇಳಲಾಗಿತ್ತು. ಆದರೆ, ಈ ಹಿಂದಿನಿಂದಲೂ ನಗರದ ಉದ್ಯಮಬಾಗ್‌ನಲ್ಲಿ ಜಿಟಿಟಿಸಿ ಇದೆ. ಚಿಕ್ಕೋಡಿ ಮತ್ತ ಅರಭಾವಿಯಲ್ಲೂ ಈ ಕೇಂದ್ರಗಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.