ADVERTISEMENT

ನಿವೃತ್ತ ಪಿಎಸ್‍ಐ ಮನೆಗೆ ನುಗ್ಗಿದ ಕಳ್ಳರು: ಗೃಹಿಣಿ ಕೊಲೆ, ಚಿನ್ನಾಭರಣ ದರೋಡೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2022, 9:09 IST
Last Updated 15 ಜೂನ್ 2022, 9:09 IST

ಯಮಕನಮರಡಿ (ಬೆಳಗಾವಿ ಜಿಲ್ಲೆ): ಹುಕ್ಕೇರಿ ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ ಮಂಗಳವಾರ ರಾತ್ರಿ, ನಿವೃತ್ತ ಪಿಎಸ್‍ಐ ಒಬ್ಬರ ಮನೆಗೆ ನುಗ್ಗಿದ ಕಳ್ಳರು, ಗೃಹಿಣಿಯನ್ನು ಕೊಲೆಗೈದು ಚಿನ್ನಾಭರಣ ದರೋಡೆ ಮಾಡಿದ್ದಾರೆ.

ನಿವೃತ್ತ ಪಿಎಸ್‍ಐ ಭೀಮರಾಯಿ ಅಕ್ಕತಂಗೇಹಾಳ ಅವರ ಪತ್ನಿ ಮಾಲವ್ವ (60) ಕೊಲೆಯಾದವರು. ರಾತ್ರಿ 9.30ರ ಸಮಾರಿಗೆ ಕಳ್ಳರು ಮನೆಗೆ ನುಗ್ಗಿದಾಗ, ಮಾಲವ್ವ ಸಹಾಯಕ್ಕಾಗಿ ಕಿರುಚಾಡಿದರು. ಇವರ ಮನೆ ಊರ ಹೊರಗೆ ಇರುವ ಕಾರಣ ಯಾರೂ ಸಹಾಯಕ್ಕೆ ಬರಲಿಲ್ಲ. ಮಾಲವ್ವ ಅವರ ಬಾಯಿಗೆ ಬಟ್ಟೆ ತುರುಕಿದ ದುಷ್ಕರ್ಮಿಗಳು, ಅವರ ಚಿನ್ನಾಭರಣ ಕಿತ್ತುಕೊಂಡರು. ಮನೆಯ ಟ್ರಜರಿಯಲ್ಲಿದ್ದ ಹಣ ಹಾಗೂ ಇತರ ಆಭರಣಗಳನ್ನೂ ದೋಚಿದರು. ಬಳಿಕ ಮಾಲವ್ವ ಅವರ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಭೀಮರಾಯಿ ಅವರು ಆರು ತಿಂಗಳಿನಿಂದ ದೂರದ ಊರಿನಲ್ಲಿ ಬೇರೊಂದು ಮನೆಯಲ್ಲಿ ವಾಸವಾಗಿದ್ದಾರೆ, ಈ ದಂಪತಿಗೆ ಇಬ್ಬರು ಹೆಣ್ಣುಮಕ್ಕಳಿದ್ದು, ಇಬ್ಬರೂ ಬೆಂಗಳೂರಿನಲ್ಲಿ ಎಂಜಿನಿಯರ್ ಆಗಿದ್ದಾರೆ. ಇದರಿಂದ ಮಾಲವ್ವ ಒಬ್ಬರೇ ಮನೆಯಲ್ಲಿದ್ದರು. ಇದನ್ನು ಖಾತ್ರಿ ಮಾಡಿಕೊಂಡ ಕಳ್ಳರು, ಸಮಯ ಸಾಧಿಸಿ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ADVERTISEMENT

ಘಟನೆ ತಿಳಿದು ಸ್ಥಳಕ್ಕೆ ಧಾವಿಸಿದ ಗೋಕಾಕ ಡಿಎಸ್‍ಪಿ ರಮೇಶಕುಮಾರ ನಾಯಿಕ, ಯಮಕನಮರಡಿ ಸಿಪಿಐ ರಮೇಶ ಛಾಯಾಗೋಳ, ಪಿಎಸ್‍ಐ ಬಿ.ವಿ.ನಾಮಗೌಡರ ಪರಿಶೀಲನೆ ನಡೆಸಿದರು. ಶ್ವಾನದಳವನ್ನು ಕರೆಯಿಸಿ ತಪಾಸಣೆ ಮಾಡಿದರು. ಯಮಕನಮರಡಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪದೇಪದೇ ಕಳವು, ಕೊಲೆ: ಬೆಚ್ಚಿಬಿದ್ದ ಗ್ರಾಮದ ಜನ

ಹೊಸೂರ ಗ್ರಾಮದಲ್ಲಿ ಈ ರೀತಿಯ ಕಳವು, ದರೋಡೆ ಪ್ರಕರಣಗಳು ನಡೆಯುತ್ತಲೇ ಇವೆ. ಆದರೂ ಪೊಲೀಸರು ಕಟ್ಟುನಿಟ್ಟಿನ ಕ್ರಮ ವಹಿಸಿಲ್ಲ ಎನ್ನುವುದು ಗ್ರಾಮಸ್ಥರ ಆರೋಪ. ಮಂಗಳವಾರ ಒಂಟಿ ಮಹಿಳೆಯನ್ನು ಕೊಲೆಗೈದ ಘಟನೆಯಿಂದ ಇಡೀ ಗ್ರಾಮದ ಜನ ಬೆಚ್ಚಿಬಿದ್ದಿದ್ದಾರೆ.

ಇದೇ ಗ್ರಾಮದಲ್ಲಿ ಮಾಜಿ ಸಚಿವ ಶಶಿಕಾಂತ ಅವರ ಮನೆಯಲ್ಲಿ ಕೂಡ 2019ರಲ್ಲಿ ಕಳ್ಳತನವಾಗಿತ್ತು. ಆರು ತಿಂಗಳ ಹಿಂದೆ ಗ್ರಾಮದೇವತೆ ಲಕ್ಷಿ ದೇವಸ್ಥಾನ ಹಾಗೂ ಇತರ ದೇವಾಲಯಗಳ ದೇಣಿಗೆ ಪೆಟ್ಟಿಗೆ ಕಳ್ಳತನ ಮಾಡಲಾಗಿತ್ತು. ತಿಂಗಳ ಹಿಂದಷ್ಟೇ ಊರಿಗೆ ಹೊಂದಿಕೊಂಡಿರುವ ಕುರುಬ ಸಮಾಜದವರ ಮೂರು ಮನೆಗಳ ಸರಣಿ ಕಳವು ನಡೆದಿದೆ. ಇಷ್ಟೆಲ್ಲ ಆದರೂ ಪೊಲೀಸರು ಕಳ್ಳರನ್ನು ಬಂಧಿಸುವಲ್ಲಿ ಗಂಭೀರ ಪ್ರಯತ್ನ ಮಾಡಿಲ್ಲ ಎಂದೂ ಹೊಸೂರು ಜನ ಕಿಡಿ ಕಾರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.