ADVERTISEMENT

ಕೊರೊನಾ ಭೀತಿ; ಬೀದಿ ಬದಿ ವ್ಯಾಪಾರಸ್ಥರ ಬದುಕು ಮೂರಾಬಟ್ಟೆ!

ಶ್ರೀಕಾಂತ ಕಲ್ಲಮ್ಮನವರ
Published 23 ಮಾರ್ಚ್ 2020, 19:30 IST
Last Updated 23 ಮಾರ್ಚ್ 2020, 19:30 IST
ಬಂದ್‌ ಆಗಿರುವ ಡಬ್ಬಾ ಅಂಗಡಿಗಳು
ಬಂದ್‌ ಆಗಿರುವ ಡಬ್ಬಾ ಅಂಗಡಿಗಳು   

ಬೆಳಗಾವಿ: ‘ಕೊರೊನಾ ಸೋಂಕು ಭೀತಿಯ ಹಿನ್ನೆಲೆಯಲ್ಲಿ ಕಳೆದ ಎಂಟು ದಿನಗಳಿಂದ ವ್ಯಾಪಾರ ಬಂದ್‌ ಮಾಡಿ ಕುಂತೀವಿ. ಒಂದು ರೂಪಾಯಿ ದುಡಿಮೆ ಆಗುತ್ತಿಲ್ಲ. ಇನ್ನೂ ಎಂಟು ದಿನ ಹಿಂಗ್‌ ಬಂದ್‌ ಮಾಡಿ ಅಂತಾ ಕಾರ್ಪೊರೇಷನ್‌ನವರು ಹೇಳ್ಯಾರ. ಅಲ್ಲಿಯವರೆಗೆ ನಮ್ಮ ಪರಿಸ್ಥಿತಿ ಏನಾಗಬಾರದು...?’ ಎಂದು ಬೀದಿ ಬದಿಯ ವ್ಯಾಪಾರಸ್ಥರು ಅಳಲು ತೋಡಿಕೊಂಡಿದ್ದಾರೆ.

ಕೊರೊನಾ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸಲು ಮಹಾನಗರ ಪಾಲಿಕೆಯು ರಸ್ತೆ ಬದಿಯ ವ್ಯಾಪಾರಿಗಳಿಗೆ ನಿರ್ಬಂಧ ವಿಧಿಸಿದೆ. ಬಜ್ಜಿ, ಪೂರಿ, ಇಡ್ಲಿ– ವಡಾ, ದೋಸೆ, ಎಗ್‌ ರೈಸ್‌, ಗೋಬಿ ಮಂಚೂರಿ, ಪಾನಿ ಪುರಿ ಸೇರಿದಂತೆ ಕುರುಕುಲು ತಿಂಡಿ ಮಾಡುತ್ತಿದ್ದ ಹಾಗೂ ಚಹಾ ಮಾಡುತ್ತಿದ್ದ ಸುಮಾರು 1,200 ಡಬ್ಬಾ ಅಂಗಡಿಗಳನ್ನು ಬಂದ್‌ ಮಾಡಿದೆ.

ನಗರದ ಕೇಂದ್ರೀಯ ಬಸ್‌ ನಿಲ್ದಾಣದ ಸುತ್ತಮುತ್ತ, ಕಾಲೇಜು ರಸ್ತೆ, ಬೋಗರ್‌ವೇಸ್‌, ನೆಹರು ನಗರ, ಆರ್‌ಪಿಡಿ ಕಾಲೇಜು ಬಳಿ, ಖಾನಾಪುರ ರಸ್ತೆ, ಶಹಾಪುರ, ವಡಗಾಂವ, ಹಳೇ ಪಿ.ಬಿ. ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿದ್ದ ಡಬ್ಬಾ ಅಂಗಡಿಗಳನ್ನು ಬಂದ್‌ ಮಾಡಲಾಗಿದೆ.

ADVERTISEMENT

ಇದೇ ವ್ಯಾಪಾರವನ್ನು ನಂಬಿದ ಸಾವಿರಾರು ಜನರು ಈಗ ಕಷ್ಟದ ದಿನಗಳನ್ನು ಕಳೆಯುತ್ತಿದ್ದಾರೆ. ಪ್ರತಿದಿನ ಬರುವ ಆದಾಯದಲ್ಲಿಯೇ ಇವರ ಉಪಜೀವನ ನಡೆಯುವಂತಹದ್ದು. ಇಷ್ಟು ದಿನಗಳವರೆಗೆ ಕೂಡಿಟ್ಟುಕೊಂಡಿದ್ದ ಒಂದಿಷ್ಟು ಹಣದಿಂದ ಇಲ್ಲಿಯವರೆಗೆ ಬದುಕು ಸಾಗಿಬಂತು. ಇನ್ನು ಮುಂದೆಯೂ ಇದೇ ಸ್ಥಿತಿ ಮುಂದುವರಿದರೆ ತಮ್ಮ ಬದುಕು ಕಷ್ಟವಾಗುತ್ತದೆ ಎಂದು ಅಳಲು ತೋಡಿಕೊಂಡರು.

‘ಕಳೆದ ವಾರ ಪಾಲಿಕೆಯ ಸಿಬ್ಬಂದಿಗಳು ಖುದ್ದಾಗಿ ಬಂದು ಅಂಗಡಿಗಳನ್ನು ಬಂದ್‌ ಮಾಡಿಸಿ ಹೋದರು. ನಾವು ಕೂಡ ಒಪ್ಪಿಕೊಂಡೇವು. ಕೊರೊನಾ ಸೋಂಕು ನಿಯಂತ್ರಿಸಲು ಇದು ಅನಿವಾರ್ಯ ಎನ್ನುವುದನ್ನು ನಾವು ಒಪ್ಪಿಕೊಳ್ಳುತ್ತೇವೆ. ಒಂದೆರಡು ದಿನಗಳಾದರೆ ಪರವಾಗಿಲ್ಲ ನಾವು ಸಂಭಾಳಿಸುತ್ತೇವೆ. ಆದರೆ, 15– 20 ದಿನಗಳವರೆಗೆ ಅಂಗಡಿ ಬಂದ್‌ ಮಾಡಿದರೆ ನಾವು ಹೇಗೆ ಬದುಕುವುದು’ ಎಂದು ಚಹಾ ವ್ಯಾಪಾರಿ ಮಂಜುನಾಥ ಹೇಳಿದರು.

‘ನಮಗೆ ಇದೊಂದೇ ಬದುಕಿಗೆ ಆಸರೆ, ಇದನ್ನೇ ಬಂದ್‌ ಮಾಡಿಬಿಟ್ಟರೆ ನಾವು ಹೇಗಿರಬೇಕು. ಇಷ್ಟು ದಿನಗಳವರೆಗೆ ಆಗಿರುವ ನಷ್ಟವನ್ನು ಸರ್ಕಾರ ಭರಿಸಿಕೊಡಲು ಮುಂದಾಗಬೇಕು’ ಎಂದು ಕೋರಿದರು.

ಮುನ್ನೆಚ್ಚರಿಕೆ ಕ್ರಮ

‘ರಸ್ತೆ ಬದಿ ತೆರೆದ ವಾತಾವರಣದಲ್ಲಿ ತಿಂಡಿ ತಿನಿಸು ಸಿದ್ಧಪಡಿಸುತ್ತಿದ್ದ ಡಬ್ಬಾ ಅಂಗಡಿಗಳನ್ನು ಬಂದ್‌ ಮಾಡಿದ್ದೇವೆ. ದೊಡ್ಡ ಹೋಟೆಲ್‌, ರೆಸ್ಟೋರೆಂಟ್‌ಗಳನ್ನು ಬಂದ್ ಮಾಡಿಲ್ಲ. ಅಲ್ಲಿಂದ ಜನರು ಊಟವನ್ನು ಪಾರ್ಸೆಲ್‌ ತೆಗೆದುಕೊಂಡು ಹೋಗಬಹುದು’ ಎಂದು ಮಹಾನಗರ ಪಾಲಿಕೆಯ ಆಯುಕ್ತ ಕೆ.ಎಚ್‌. ಜಗದೀಶ ಹೇಳಿದರು.

‘ಹಣ್ಣು, ತರಕಾರಿ ಮಾರಾಟ ಮಾಡುವವರ ಮೇಲೆ ನಿರ್ಬಂಧ ವಿಧಿಸಿಲ್ಲ. ಆದರೂ ವ್ಯಾಪಾರಸ್ಥರು, ಜನರು ಮುಂಜಾಗ್ರತೆ ವಹಿಸುವುದು ಉತ್ತಮ. ಮುಂದಿನ ಪರಿಸ್ಥಿತಿ ನೋಡಿಕೊಂಡು ನಿರ್ಬಂಧ ತೆರೆಯಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.