ADVERTISEMENT

ಪಿಯುಸಿ ಫಲಿತಾಂಶ | ಕಾವೇರಿ ಪವಾಡಿ ರಾಜ್ಯಕ್ಕೆ 4ನೇ ಸ್ಥಾನ

ಮಜಲಟ್ಟಿ ಗ್ರಾಮದ ಸರ್ಕಾರಿ ಪಿಯು ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2025, 23:30 IST
Last Updated 8 ಏಪ್ರಿಲ್ 2025, 23:30 IST
ಪಿಯಸಿ ಕಲಾ ವಿಭಾಗದಲ್ಲಿ 4ನೇ ಸ್ಥಾನ ಪಡೆದ ಕಾವೇರಿ ಮಲ್ಲಾಪುರೆಗೆ ಕುಟುಂಬದ ಸದಸ್ಯರು ಸಿಹಿ ತಿನ್ನಿಸಿ, ಸನ್ಮಾನಿಸಿ ಸಂಭ್ರಮಿಸಿದರು
ಪಿಯಸಿ ಕಲಾ ವಿಭಾಗದಲ್ಲಿ 4ನೇ ಸ್ಥಾನ ಪಡೆದ ಕಾವೇರಿ ಮಲ್ಲಾಪುರೆಗೆ ಕುಟುಂಬದ ಸದಸ್ಯರು ಸಿಹಿ ತಿನ್ನಿಸಿ, ಸನ್ಮಾನಿಸಿ ಸಂಭ್ರಮಿಸಿದರು   

ಚಿಕ್ಕೋಡಿ: ತಾಲ್ಲೂಕಿನ ಮಜಲಟ್ಟಿ ಗ್ರಾಮದ ಸರ್ಕಾರಿ ಪಿಯು ಕಾಲೇಜಿನ ಕಲಾ ವಿಭಾಗದ ವಿದ್ಯಾರ್ಥಿನಿ ಕಾವೇರಿ ಪವಾಡಿ ಮಲ್ಲಾಪುರೆ ಶೇ 99 ಅಂಕಗಳನ್ನು ಪಡೆದು ರಾಜ್ಯಕ್ಕೆ 4ನೇ ಸ್ಥಾನ ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾಳೆ.

ಕನ್ನಡದಲ್ಲಿ 99, ಇಂಗ್ಲಿಷ್‌ 97, ಇತಿಹಾಸ 99, ಅರ್ಥಶಾಸ್ತ್ರ 100, ಸಮಾಜಶಾಸ್ತ್ರ 100, ರಾಜ್ಯಶಾಸ್ತ್ರದಲ್ಲಿ 99 ಅಂಕಗಳನ್ನು ಪಡೆದುಕೊಂಡಿದ್ದಾಳೆ.

ರಾಯಬಾಗ ತಾಲ್ಲೂಕಿನ ನಿಪನಾಳ ಗ್ರಾಮದ ನಿವಾಸಿ ಕಾವೇರಿ ಬಾಲ್ಯದಲ್ಲಿಯೇ ಅಪಘಾತದಲ್ಲಿ ತಂದೆ ಪವಾಡಿ ಅವರನ್ನು ಕಳೆದುಕೊಂಡಿದ್ದಾರೆ. ತಾಯಿ ಮಹಾದೇವಿ, ಅಣ್ಣಂದಿರಾದ ಈರಣ್ಣ ಮತ್ತು ಮಾಳಪ್ಪ ಕೂಲಿ ಮಾಡಿ ಕಾವೇರಿಯನ್ನು ಓದಿಸುತ್ತಿದ್ದಾರೆ. 1 ರಿಂದ 10ನೇ ತರಗತಿಯವರೆಗೆ ಸ್ವಗ್ರಾಮ ನಿಪನಾಳ ಗ್ರಾಮದ ಸರ್ಕಾರಿ ಶಾಲೆಯಲ್ಲಿ ಓದಿದ್ದ ಎಸ್ಎಸ್ಎಸ್‌ಸಿ ಪರೀಕ್ಷೆಯಲ್ಲಿ ಕಾವೇರಿ ಶೇ 97 ಅಂಕಗಳನ್ನು ಪಡೆದುಕೊಂಡಿದ್ದರು.

ADVERTISEMENT

ಪಿಯುಸಿ ಪ್ರಥಮ ವರ್ಷದಲ್ಲಿ ಮಜಲಟ್ಟಿ ಗ್ರಾಮದಲ್ಲಿ ಮುತ್ತುರಾಜ ಕಾಂಬಳೆ ಅವರಿಗೆ ಸೇರಿದ ಶ್ರೇಯಸ್ ಮೆಸ್ ನಲ್ಲಿ ಉಚಿತ ಊಟ, ವಸತಿ ಪಡೆದು ಓದು ಮುಂದುವರಿಸಿದ್ದಾಳೆ. ದ್ವಿತೀಯ ವರ್ಷದಲ್ಲಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕಿಯರ ವಸತಿ ನಿಲಯದಲ್ಲಿ ಪ್ರವೇಶ ಪಡೆದು ಸಾಧನೆ ಮಾಡಿದ್ದಾಳೆ.

ನಿಪನಾಳ ಗ್ರಾಮದಲ್ಲಿ ಪುಟ್ಟ ಮನೆಯೊಂದಿದ್ದು, ಯಾವುದೇ ಜಮೀನು ಇವರಿಗಿಲ್ಲ. ಅಣ್ಣಂದಿರ ಹಾಗೂ ತಾಯಿಯ ಆಶಯದಂತೆ ಚೆನ್ನಾಗಿ ಓದಿ ರಾಜ್ಯಕ್ಕೆ 4ನೇ ಸ್ಥಾನ ಪಡೆದ ಕಾವೇರಿಯ ಸಾಧನೆಯು ಕುಟುಂಬದವರಿಗೆ, ಗ್ರಾಮಕ್ಕೆ, ಕಾಲೇಜಿಗೆ ಹೆಮ್ಮೆ ತಂದಿದೆ. ಬಿ.ಎ ಪದವಿ ಪಡೆದು ಮುಂದಿನ ದಿನಗಳಲ್ಲಿ ಕೆಪಿಎಸ್‍ಸಿ ಪರೀಕ್ಷೆ ಕಟ್ಟಿ ಉನ್ನತ ಹುದ್ದೆಯನ್ನು ಪಡೆದು ಸಾರ್ವಜನಿಕ ಆಡಳಿತದಲ್ಲಿ ತನ್ನದೇ ಆದ ಛಾಪು ಮೂಡಿಸುವ ಗುರಿಯನ್ನು ಕಾವೇರಿ ಹೊಂದಿದ್ದಾಳೆ.

ಪ್ರತಿ ದಿನ ಬೆಳಿಗ್ಗೆ 5 ಗಂಟೆಗೆ ಏಳುವುದು, ಅಂದಿನ ಪಾಠ ಅಂದೇ ಮಾಡುವುದು, ಸಂಬಂಧಿಸಿದ ವಿಷಯ ಉಪನ್ಯಾಸಕರೊಂದಿಗೆ ಪಾಠದ ಕುರಿತು ಸಮಾಲೋಚಿಸುವುದು, ಪರೀಕ್ಷೆ ಸಮಯದಲ್ಲಿ ಹೆಚ್ಚಿನ ಸಮಯ ವಿದ್ಯಾಭ್ಯಾಸಕ್ಕೆ ವಿನಿಯೋಗ ಮಾಡಿದ್ದರಿಂದಲೇ ತಾನು ಇಂತಹದೊಂದು ಸಾಧನೆ ಮಾಡಲು ಸಾಧ್ಯವಾಗಿದೆ ಎಂದು ಕಾವೇರಿ ಮಲ್ಲಾಪುರೆ ಹೇಳುತ್ತಾರೆ.

ತಮ್ಮ ಕಾಲೇಜಿನ ವಿದ್ಯಾರ್ಥಿನಿ ಕಾವೇರಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ 4ನೇ ಸ್ಥಾನ ಪಡೆದುಕೊಳ್ಳುವ ಮೂಲಕ ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದು ತಮಗೆಲ್ಲರಿಗೂ ಹೆಮ್ಮೆಯಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಆನಂದ ಕೋಳಿ ಹೇಳುತ್ತಾರೆ.

ಕಾವೇರಿ ಫೋಟೊ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.