ADVERTISEMENT

ಕೇಂದ್ರದ ನೀತಿಯಿಂದ ಕಾರ್ಖಾನೆಗಳು ಇಕ್ಕಟ್ಟಿಗೆ: ಸಕ್ಕರೆ ಸಚಿವ ಶಿವಾನಂದ ಪಾಟೀಲ

​ಪ್ರಜಾವಾಣಿ ವಾರ್ತೆ
Published 22 ಡಿಸೆಂಬರ್ 2023, 13:53 IST
Last Updated 22 ಡಿಸೆಂಬರ್ 2023, 13:53 IST
<div class="paragraphs"><p> ಶಿವಾನಂದ ಪಾಟೀಲ</p></div>

ಶಿವಾನಂದ ಪಾಟೀಲ

   

ಬೆಳಗಾವಿ: ‘ಎಥೆನಾಲ್ ಉತ್ಪಾದನೆಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ರೂಪಿಸಿದ ನೀತಿಗಳು ಸಕ್ಕರೆ ಕಾರ್ಖಾನೆಗಳನ್ನು ಚಿಂತೆಗೀಡು ಮಾಡಿವೆ. ಹಲವು ಕಾರ್ಖಾನೆಗಳು ₹200 ಕೋಟಿಯಿಂದ ₹500 ಕೋಟಿಯವರೆಗೆ ಹೂಡಿಕೆ ಮಾಡಿವೆ. ಆದರೆ, ಈಗ ಕೇಂದ್ರ ಸರ್ಕಾರ ಬದಲಿಸಿದ ನೀತಿಯಿಂದ ಕಾರ್ಖಾನೆಗಳು ಇಕ್ಕಟ್ಟಿಗೆ ಸಿಲುಕಿವೆ’ ಎಂದು ಸಕ್ಕರೆ ಸಚಿವ ಶಿವಾನಂದ ಪಾಟೀಲ ಅಸಮಾಧಾನ ವ್ಯಕ್ತಪಡಿಸಿದರು.

ಇಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಈ ಹಿಂದೆ ಕೇಂದ್ರ ಸರ್ಕಾರವು ಎಥೆನಾಲ್ ಉತ್ಪಾದನೆಯನ್ನು ಪ್ರೋತ್ಸಾಹಿಸಿತ್ತು. ಈಗ ನೇರವಾಗಿ ಎಥೆನಾಲ್ ಉತ್ಪಾದಿಸದಂತೆ ನಿರ್ದೇಶಿಸಿದೆ. ಎಥೆನಾಲ್ ಉತ್ಪಾದನೆಗೆ ಸಂಬಂಧಿಸಿ ಹೊಸ ಮಾರ್ಗಸೂಚಿಗಳು ಇನ್ನೂ ಬಂದಿಲ್ಲ’ ಎಂದರು.

ADVERTISEMENT

‘ಸಕ್ಕರೆ ರಫ್ತು ನಿಷೇಧಿಸಲಾಗಿದೆ. ಒಂದು ವೇಳೆ ರಫ್ತಿಗೆ ಅವಕಾಶ ಕೊಟ್ಟರೆ, ಕಾರ್ಖಾನೆಗಳಿಗೆ ಅನುಕೂಲ ಆಗುತ್ತದೆ. ಅಕ್ಕಿ ಮತ್ತು ಈರುಳ್ಳಿ ರಫ್ತು ನಿಷೇಧಿಸಲಾಗಿದೆ. ಆದರೆ, ತಾಳೆಎಣ್ಣೆ ಆಮದು ಮಾಡಿಕೊಳ್ಳುತ್ತಿರುವ ಕಾರಣ ಕೊಬ್ಬರಿ ಧಾರಣೆ ಕುಸಿದಿದೆ’ ಎಂದು ಹೇಳಿದರು.

‘ಕಾರ್ಖಾನೆಗಳಲ್ಲಿ ರೈತರಿಗೆ ತೂಕದಲ್ಲಿ ಆಗುತ್ತಿರುವ ಮೋಸ ತಪ್ಪಿಸಲು, ಮುಂದಿನ ವರ್ಷದೊಳಗೆ ಎಲ್ಲ ಸಕ್ಕರೆ ಕಾರ್ಖಾನೆಗಳಲ್ಲಿ ಸರ್ಕಾರದಿಂದಲೇ ತೂಕದ ಮಾಪಕ ಅಳವಡಿಸಲಾಗುವುದು. ಎಲ್ಲ ಕಾರ್ಖಾನೆಗಳು ತೂಕದ ವ್ಯವಸ್ಥೆಯನ್ನು ಅನ್‌ಲಾಗ್‌ ಮೋಡ್‌ನಿಂದ ಡಿಜಿಟಲ್‌ ಮೋಡ್‌ಗೆ ಪರಿವರ್ತಿಸುವಂತೆ ತಿಳಿಸಲಾಗಿದೆ’ ಎಂದರು.

‘ರೈತರು ತಮ್ಮ ಉತ್ಪನ್ನಗಳನ್ನು ಕಾರ್ಖಾನೆಗಳಲ್ಲಿ ತೂಕ ಮಾಡಿಸುವ ಮುನ್ನ ರಾಜ್ಯದಾದ್ಯಂತ ಎಪಿಎಂಸಿಗಳಲ್ಲಿ ಇರುವ ಮಾಪಕಗಳಲ್ಲಿ ಉಚಿತವಾಗಿ ತೂಕ ಮಾಡಿಸಬೇಕು. ಆಗ ತೂಕದಲ್ಲಿ ವ್ಯತ್ಯಾಸ ಕಂಡುಬಂದರೆ ಆಯಾ ಸಕ್ಕರೆ ಕಾರ್ಖಾನೆ ವಿರುದ್ಧ ದೂರು ಸಲ್ಲಿಸಬಹುದು’ ಎಂದರು.

ಬರದಿಂದ ರಾಜ್ಯದಲ್ಲಿ ಕಬ್ಬಿನ ಬಿತ್ತನೆ ಕ್ಷೇತ್ರ ಕಡಿಮೆಯಾಗಿದೆ. ಸಾಮಾನ್ಯ ವರ್ಷಗಳಲ್ಲಿ 7 ಲಕ್ಷ ಮೆಟ್ರಿಕ್ ಟನ್‌ ಸ‌ಕ್ಕರೆ ಉತ್ಪಾದನೆಯಾಗುತ್ತಿತ್ತು. ಈ ವರ್ಷ 1.5 ಲಕ್ಷ ಮೆಟ್ರಿಕ್ ಟನ್ ಇಳಿಕೆಯಾಗಲಿದೆ.
–ಶಿವಾನಂದ ಪಾಟೀಲ, ಸಕ್ಕರೆ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.