ಚನ್ನಮ್ಮನ ಕಿತ್ತೂರು: ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯಿತಿಗಳಿಗೆ ಗುರುವಾರ ಭೇಟಿ ನೀಡಿದ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ರಾಹುಲ್ ಶಿಂಧೆ ಅಂಗನವಾಡಿ, ಶಾಲೆ ಹಾಗೂ ಜಲ ಜೀವನ ಮಿಷನ್ ಯೋಜನೆಯ ಕಾಮಗಾರಿಗಳಯನ್ನು ಪರಿಶೀಲನೆ ಮಾಡಿದರು.
ದೇವರಶೀಗಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರ್ಗನಕೊಪ್ಪ, ತಿಗಡೊಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೇಗೂರು, ನಿಚ್ಚಣಕಿ ಗ್ರಾಮ ಪಂಚಾಯಿತಿಯ ಡೊಂಬರಕೊಪ್ಪ ಮತ್ತು ದೇಗಾಂವ ಗ್ರಾಮಗಳಿಗೆ ಭೇಟಿ ನೀಡಿ ಜಲ ಜೀವನ್ ಮಿಷನ್ ಯೋಜನೆಯಡಿ ಕಾರ್ಯಾತ್ಮಕ ನಳ ಸಂಪರ್ಕ ಸ್ಥಳ ಪರಿಶೀಲನೆ ಮಾಡಿದರು. ಡಂಬರಕೊಪ್ಪ ಹಾಗೂ ದಾಸ್ತಿಕೊಪ್ಪದ ಡಿಜಿಟಲ್ ಗ್ರಂಥಾಲಯದ ಮಾಹಿತಿ ಪಡೆದರು.
ಮನೆಗೆ ಅಳವಡಿಸಲಾಗಿರುವ ನಳ ಸಂಪರ್ಕದ ಬಗ್ಗೆ ಸ್ಥಳೀಯ ಫಲಾನುಭವಿಗಳು, ಗ್ರಾಮ– ಪಂಚಾಯಿತಿ ಅಧ್ಯಕ್ಷ ಹಾಗೂ ಸದಸ್ಯರೊಂದಿಗೆ ಚರ್ಚೆ ಮಾಡಿದರು.
‘ಗ್ರಾಮದಲ್ಲಿನ ಕುಡಿಯುವ ನೀರಿನ ಮೂಲಗಳ ಸ್ವಚ್ಛತೆಗೆ ಹೆಚ್ಚಿನ ಗಮನ ನೀಡಬೇಕು. ನೀರಿನ ಟ್ಯಾಂಕುಗಳ ಸ್ವಚ್ಛತೆ ಬಗ್ಗೆ ಹೆಚ್ಚು ಗಮನ ವಹಿಸಿ ಹಾಗೂ ಜಲ ಜೀವನ ಮಿಷನ್ ಯೋಜನೆಯಡಿ ಬಾಕಿ ಉಳಿದ ಗ್ರಾಮಗಳ ಕಾಮಗಾರಿಗಳನ್ನು ಅತೀ ಶೀಘ್ರದಲ್ಲಿ ಪೂರ್ಣಗೊಳಿಸಬೇಕು’ ಎಂದು ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು.
ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (NRLM) ಯೋಜನೆಯ ಬಗ್ಗೆ ಚರ್ಚಿಸಿದರು. ಸಂಘದ ಮಹಿಳೆಯರು ಕೋಳಿ ಶೆಡ್ ಮಾಡಿಕೊಳ್ಳಲು ಅವಕಾಶ ಇರುವ ಬಗ್ಗೆ ಚರ್ಚಿಸಿ ಕಾಮಗಾರಿಗೆ ಸ್ಥಳ ನಿಗದಿ ಪಡಿಸಲು ತಿಳಿಸಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಕಾರ್ಯನಿರ್ವಾಹಕ ಎಂಜಿನಿಯರ್ ಕಿರಣ್ ಘೋರ್ಪಡೆ, ಕಾರ್ಯನಿರ್ವಾಹಕ ಅಧಿಕಾರಿ ಮಹೇಶ ಹೂಲಿ, ಸಹಾಯಕ ನಿರ್ದೇಶಕ ಮಹಮ್ಮದ್ ಗೌಸ್ ರಿಸಲ್ದಾರ್ ಇತರರು ಇದ್ದರು.
ಬೆಳಗಾವಿ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅನುದಾನಿತ ಮಹಿಳಾ ಕಲ್ಯಾಣ ಸಂಸ್ಥೆಯ ಮೂಲಕ ನಿರ್ವಹಿಸುತ್ತಿರುವ ‘ತೊಟ್ಟಿಲು ಮನೆ’ಗೆ ಜಿಲ್ಲಾ ಪಂಚಾಯಿತಿಯಿಂದ ನೀಡಲಾದ ಹೊಸ ಆಟಿಕೆ ಸಾಮಾನುಗಳು ಹಾಗೂ ಶೈಕ್ಷಣಿಕ ಸಲಕರಣೆಗಳನ್ನು ಸಿಇಒ ರಾಹುಲ್ ಶಿಂಧೆ ಗುರುವಾರ ಮಕ್ಕಳಿಗೆ ನೀಡಿದರು. ಜಿಲ್ಲಾ ಪಂಚಾಯಿತಿ ಕಚೇರಿ ಆವರಣದ ಶಿಶು ಪಾಲನಾ ಕೇಂದ್ರಕ್ಕೆ ಭೇಟಿ ನೀಡಿ ಮಾತನಾಡಿದ ಅವರು ‘ಮಕ್ಕಳಿಗಾಗಿ ಕಲಿಕೆ ಹಾಗೂ ಆಟದ ಸಹಾಯದಿಂದ ಗುಣಮಟ್ಟದ ಬೆಳವಣಿಗೆ ಸಾಧ್ಯ. ಈ ರೀತಿಯ ಉತ್ತಮ ಯೋಜನೆಗಳಿಗೆ ನಮ್ಮ ಸಂಪೂರ್ಣ ಬೆಂಬಲ ಸದಾ ಇರುತ್ತದೆ’ ಎಂದರು. ಅಕೌಂಟ್ ಆಫೀಸರ್ ಗಂಗಾ ಹಿರೇಮಠ ಉಪಕಾರ್ಯದರ್ಶಿ–1 ಬಸವರಾಜ ಹೆಗ್ಗನಾಯಕ ಮ್ಯಾನೇಜರ್ ಬಸವರಾಜ ಮುರಗಾಮಠ ಎಫ್.ಡಿ.ಎ ವಿಕ್ರಮ್ ಜಾಧವ್ ಮಹಿಳಾ ಕಲ್ಯಾಣ ಸಂಸ್ಥೆಯ ಶಾಹಿನ್ ಹೊಂಬಳ ಶಿಶು ಪಾಲನಾ ಕೇಂದ್ರದ ಶಿಕ್ಷಕಿ ಭಾರತಿ ಪಾಟೀಲ ಸಹಾಯಕ ಸಿಬ್ಬಂದಿ ಸುಮಿತ್ರಾ ಇಂಗನಳ್ಳಿ ಹಾಗೂ ಜ್ಯೋತಿ ಗಂಜಿ ಇತರರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.