ADVERTISEMENT

ಬೆಳಗಾವಿ | ಬೆಲೆ ಹೆಚ್ಚಿಸುತ್ತಲೇ ಇರುವ ಮಾರಾಟಗಾರರು: ₹ 250 ದಾಟಿದ ಚಿಕನ್ ರೇಟ್!

ಎಂ.ಮಹೇಶ
Published 16 ಮೇ 2020, 20:15 IST
Last Updated 16 ಮೇ 2020, 20:15 IST
ಬೆ‌ಳಗಾವಿಯ ಅಂಗಡಿಯೊಂದರಲ್ಲಿ ಕೋಳಿಗಳನ್ನು ಮಾರಾಟಕ್ಕೆ ಇಟ್ಟಿರುವುದು
ಬೆ‌ಳಗಾವಿಯ ಅಂಗಡಿಯೊಂದರಲ್ಲಿ ಕೋಳಿಗಳನ್ನು ಮಾರಾಟಕ್ಕೆ ಇಟ್ಟಿರುವುದು   

ಬೆಳಗಾವಿ: ನಗರವೂ ಸೇರಿದಂತೆ ಜಿಲ್ಲೆಯಾದ್ಯಂತ ಕೆ.ಜಿ. ಕೋಳಿ ಮಾಂಸದ ಬೆಲೆ ಸರಾಸರಿ ₹ 250ರಿಂದ ₹ 260ಕ್ಕೆ ಏರಿಕೆಯಾಗಿರುವುದು ಗ್ರಾಹಕರ ಹುಬ್ಬೇರುವಂತೆ ಮಾಡಿದೆ. ದರ ದುಪ್ಪಟ್ಟಾಗಿರುವುದು ಕೋಳಿ ಮಾಂಸ ಪ್ರಿಯರಿಗೆ ಹೊರೆಯಾಗಿ ಪರಿಣಮಿಸಿದೆ.

ಮಾರ್ಚ್ ಹಾಗೂ ಏಪ್ರಿಲ್‌ ತಿಂಗಳಲ್ಲಿ ಕೋಳಿ ಮಾಂಸಕ್ಕೆ ಬೇಡಿಕೆ ಕುಸಿದಿತ್ತು. ಇದರಿಂದಾಗಿ ಬೆಲೆಯೂ ಪಾತಾಳಕ್ಕೆ ಇಳಿದಿತ್ತು. ಆದರೆ, ಇದಾದ ಕೆಲವೇ ದಿನಗಳಲ್ಲಿ ಬೆಲೆಯು ಗಗನಕ್ಕೇರಿದೆ.

ಕೊರೊನಾ ವೈರಸ್ ಹರಡುವ ಭೀತಿ ಹಾಗೂ ಕೆಲವೆಡೆ ಕಾಣಿಸಿಕೊಂಡಿದ್ದ ಹಕ್ಕಿ ಜ್ವರದ ಕಾರಣದಿಂದಾಗಿ ಮಾರ್ಚ್‌ ಹಾಗೂ ಏಪ್ರಿಲ್‌ನಲ್ಲಿ ಕೋಳಿ ಮಾಂಸ ಕೇಳುವವರು ಅಪರೂಪ ಎನ್ನುವಂತಾಗಿತ್ತು. ಇದರಿಂದಾಗಿ ಕೋಳಿ ಮಾಂಸ ಮಾರುವವರು ಹಾಗೂ ಕೋಳಿ ಫಾರಂನವರು ತೀವ್ರ ನಷ್ಟ ಅನುಭವಿಸಿದ್ದರು.

ADVERTISEMENT

ಸಮಾಧಿ ಮಾಡಿದ್ದರು!
ಬೇಡಿಕೆ ಇಲ್ಲದೆ ಬೆಲೆ ಕುಸಿತವಾಗಿದೆ ಹಾಗೂ ಖರೀದಿಸುವವರು ಇಲ್ಲ ಎನ್ನುವ ಕಾರಣಕ್ಕೆ ಜಿಲ್ಲೆಯಲ್ಲಿ ಗೋಕಾಕ, ರಾಯಬಾಗ ಮೊದಲಾದ ಕಡೆಗಳಲ್ಲಿ ಕೆಲವು ಕೋಳಿ ಫಾರಂಗಳ ಮಾಲೀಕರು ಗುಂಡಿ ತೆಗೆದು ಸಾವಿರಾರು ಕೋಳಿಮರಿಗಳನ್ನು ಜೀವಂತವಾಗಿ ಸಮಾಧಿ ಮಾಡಿದ್ದರು. ಕೆಲವರು ಜನರಿಗೆ ಉಚಿತವಾಗಿ ಹಂಚಿದ್ದರು. ಕೆ.ಜಿ.ಗೆ ಸರಾಸರಿ ₹ 30ರಿಂದ ₹ 40ಕ್ಕೆ ಬೆಲೆ ಇಳಿದಿದ್ದರೂ ಗ್ರಾಹಕರು ಖರೀದಿಸುತ್ತಿರಲಿಲ್ಲ. ಹಕ್ಕಿ ಜ್ವರದ ಭೀತಿ ಬಹುತೇಕರನ್ನು ಆವರಿಸಿತ್ತು.

ಕೊರೊನಾ ಹರಡುವುದನ್ನು ತಡೆಯುವ ಉದ್ದೇಶದಿಂದ ಜಾರಿಗೊಳಿಸಲಾದ ಲಾಕ್‌ಡೌನ್‌ನಿಂದಾಗಿ ಹಲವು ದಿನಗಳವರೆಗೆ ಮಾಂಸದ ಅಂಗಡಿಗಳನ್ನು ಬಂದ್ ಮಾಡಿಸಲಾಗಿತ್ತು.

ಸೇವಿಸಲು ತೊಂದರೆ ಇಲ್ಲ:
‘ಕೋಳಿ ಮಾಂಸಕ್ಕೂ ಕೊರೊನಾಕ್ಕೂ ಸಂಬಂಧವಿಲ್ಲ. ನಮ್ಮಲ್ಲಿ ಹಕ್ಕಿ ಜ್ವರ ಕಾಣಿಸಿಕೊಂಡಿಲ್ಲ’ ಎಂದು ಪಶುಸಂಗೋಪನಾ ಇಲಾಖೆಯವರು ಪ್ರಚಾರ ಮಾಡಿದ್ದರು. ಕೋಳಿ ಮಾಂಸ ಮಾರುವವರು ಕೂಡ ಇದಕ್ಕೆ ವ್ಯಾಪಕ ಪ್ರಚಾರ ನೀಡಿದ್ದರು. ಬಳಿಕ ಗ್ರಾಹಕರಿಂದ ಚಿಕನ್‌ ಹಾಗೂ ಮೊಟ್ಟೆಗೆ ಬೇಡಿಕೆ ಬರುತ್ತಿದೆ. ಇದರಿಂದ ಸಾಕಣೆದಾರರು ಲಾಭ ಮಾಡಿಕೊಳ್ಳಲು ಆರಂಭಿಸಿದ್ದಾರೆ. ತಿಂಗಳ ಆರಂಭದಲ್ಲಿ ಸರಾಸರಿ ₹ 70ರಿಂದ ₹100 ಇದ್ದ ಬೆಲೆ ಕ್ರಮೇಣ ಹೆಚ್ಚಾಗುತ್ತಲೇ ಇದೆ. ಬುಧವಾರ ₹ 230 ಇತ್ತು. ಶುಕ್ರವಾರ ₹ 250ರ ಗಡಿ ದಾಟಿದೆ. ಹೋಟೆಲ್‌ಗಳ ಆರಂಭಕ್ಕೆ ಇನ್ನೂ ಅನುಮತಿ ಸಿಕ್ಕಿಲ್ಲ. ಆದರೂ ಬೆಲೆ ಗಗನಮುಖಿ ಆಗಿರುವುದು ಕಂಡುಬಂದಿದೆ.

ರಂಜಾನ್‌ ಮಾಸವೂ ಇದಾಗಿರುವುದರಿಂದ ಚಿಕನ್‌ಗೆ ಹೆಚ್ಚಿನ ಬೇಡಿಕೆ ಇದೆ. ಇದನ್ನು ಮಾರಾಟಗಾರರು ತಮ್ಮ ಲಾಭಕ್ಕೆ ಸದ್ಬಳಕೆ ಮಾಡಿಕೊಳ್ಳುತ್ತಿದ್ದಾರೆ.

ಖರ್ಚು ಹೆಚ್ಚಾಗಿದ್ದರಿಂದ:
‘ಪೂರೈಕೆಯಲ್ಲಿ ಕೊರತೆ ಉಂಟಾಗಿದೆ. ಮಾರ್ಚ್‌ ಆರಂಭದಿಂದ ಬೇಡಿಕೆ ಕುಸಿದಿತ್ತು. ಹಕ್ಕಿಜ್ವರ ಹಾಗೂ ಕೊರೊನಾ ಹರಡುವ ವದಂತಿಗಳಿಂದಾಗಿ ಜನರು ಕೋಳಮಾಂಸದಿಂದ ದೂರ ಉಳಿದರು. ಹಲವು ಕಡೆಗಳಲ್ಲಿ ಕೋಳಿಫಾರಂಗಳವರು ಮರಿಗಳನ್ನು ನಾಶಪಡಿಸಿದ್ದರು. ಇದರಿಂದ ಲಭ್ಯತೆ ಕಡಿಮೆಯಾಗಿದೆ. ಬೇರೆ ಕಡೆಗಳಿಂದ ತರಿಸುತ್ತಿರುವುದರಿಂದ ಖರ್ಚು ಜಾಸ್ತಿಯಾಗುತ್ತಿದೆ. ಫೀಡ್ಸ್‌ ಬೆಲೆಯೂ ದುಪ್ಪಟ್ಟಾಗಿದೆ. ಇದೆಲ್ಲ ಕಾರಣದಿಂದ ಬೆಲೆ ಏರಿಕೆ ಅನಿವಾರ್ಯವಾಗಿದೆ. ಎಲ್ಲವೂ ಸರಿ ಹೋದರೆ ಮುಂದಿನ ದಿನಗಳಲ್ಲಿ ಬೆಲೆ ಇಳಿಕೆಯಾಗಬಹುದು’ ಎಂದು ಮಾರಾಟಗಾರರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮನಬಂದಂತೆ ಬೆಲೆ ಏರಿಸುವಂತಿಲ್ಲ...
‘ಕೋಳಿಗಳ ಕೊರತೆ ಇದೆ, ಫೀಡ್ಸ್‌ ಬೆಲೆ ಜಾಸ್ತಿಯಾಗಿದೆ ಮತ್ತು ಉತ್ಪಾದನಾ ವೆಚ್ಚ ಹೆಚ್ಚಾಗಿದೆ ಎನ್ನುವುದೇನೋ ನಿಜ. ಆದರೆ, ಕೋಳಿ ಮಾಂಸ ಮೊದಲಾದ ಆಹಾರ ಪದಾರ್ಥಗಳ ಬೆಲೆಯನ್ನು ಅಸಹಜವಾಗಿ ಏರಿಕೆ ಮಾಡುವಂತಿಲ್ಲ. ಬೆಲೆ ಹೆಚ್ಚಿಸಿರುವುದು ನಮ್ಮ ಗಮನಕ್ಕೂ ಬಂದಿದೆ.

ಹೀಗಾಗಿ, ಅಲ್ಲಲ್ಲಿ ಚೆಕ್‌ ಮಾಡಿ ಬಿಸಿ ಮುಟ್ಟಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಅಲ್ಲದೇ, ಇತರ ಜಿಲ್ಲೆಗಳಲ್ಲಿರುವ ಪರಿಸ್ಥಿತಿ ಬಗ್ಗೆಯೂ ವರದಿ ಪಡೆದು ಕ್ರಮ ಕೈಗೊಳ್ಳಲಾಗುವುದು’ ಎಂದು ಪಶುಸಂಗೋಪನಾ ಇಲಾಖೆ ಉಪನಿರ್ದೇಶಕ ಡಾ.ಎ.ಕೆ. ಚಂದ್ರಶೇಖರ್‌ ‘ಪ್ರಜಾವಾಣಿ’ಗೆ ಪ್ರತಿಕ್ರಿಯೆ ನೀಡಿದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.