ಚಿಕ್ಕೋಡಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆಯು ಇಳಿಮುಖವಾಗಿದ್ದರಿಂದ ಉಪ ವಿಭಾಗ ವ್ಯಾಪ್ತಿಯಲ್ಲಿ ಕಳೆದ 10 ದಿನಗಳಿಂದ ಜಲಾವೃತಗೊಂಡಿದ್ದ ಬಹುತೇಕ ಸೇತುವೆಗಳು ಸಂಚಾರಕ್ಕೆ ಮುಕ್ತವಾಗಿವೆ.
ತಾಲ್ಲೂಕಿನ ಕೃಷ್ಣಾ ನದಿಯ ಕಲ್ಲೋಳ-ಯಡೂರ ಕಿರು ಸೇತುವೆ, ಮಲಿಕವಾಡದ ಬಳಿಯ ದೂಧಗಂಗಾ ನದಿಯ ಮಲಿಕವಾಡ-ದತ್ತವಾಡ, ನಿಪ್ಪಾಣಿ ತಾಲ್ಲೂಕಿನ ಕಾರದಗಾ-ಭೋಜ ಸೇರಿದಂತೆ ಕೃಷ್ಣಾ ಹಾಗೂ ಉಪನದಿಗಳ ಬಹುತೇಕ ಸೇತುವೆಗಳು ಗುರುವಾರ ಸಂಚಾರಕ್ಕೆ ಮುಕ್ತವಾಗಿವೆ.
ಮಹಾರಾಷ್ಟ್ರದ ಕೃಷ್ಣಾ ಜಲಾನಯನ ಪ್ರದೇಶ ವ್ಯಾಪ್ತಿಯ ಕೊಯ್ನಾ-4 ಸೆಂ.ಮೀ, ನವಜಾ-3 ಸೆಂ.ಮೀ, ಮಹಾಬಳೇಶ್ವರ-4.2 ಸೆಂ.ಮೀ.ಯಷ್ಟು ಮಳೆ ಹೆಚ್ಚಾಗಿದ್ದರಿಂದ ತಾಲ್ಲೂಕಿನ ಕಲ್ಲೋಳ-ಯಡೂರ ಬ್ಯಾರೇಜ್ ಬಳಿಯಲ್ಲಿ ಗುರುವಾರ ಸಂಜೆ ಕೃಷ್ಣಾ ನದಿ ನೀರಿನ ಹರಿವಿನ ಪ್ರಮಾಣದಲ್ಲಿ ಕೊಂಚ ಏರಿಕೆ ಕಂಡು ಬಂದಿದೆ.
ಕೊಲ್ಹಾಪುರ ಜಿಲ್ಲೆಯ ರಾಜಾಪೂರೆ ಬ್ಯಾರೇಜ್‍ನಿಂದ ಕೃಷ್ಣಾ ನದಿಯ ಹೊರ ಹರಿವು 57,333 ಕ್ಯೂಸೆಕ್, ತಾಲ್ಲೂಕಿನ ಸದಲಗಾ ಪಟ್ಟಣದ ಬಳಿಯ ದೂಧಗಂಗಾ ನದಿಯ ಹೊರ ಹರಿವು 11,616 ಕ್ಯೂಸೆಕ್ ಇದೆ. ಕಲ್ಲೋಳ-ಯಡೂರ ಬ್ಯಾರೇಜ್ ಬಳಿಯಲ್ಲಿ ಗುರುವಾರ ಬೆಳಿಗ್ಗೆ 66,189 ಕ್ಯೂಸೆಕ್ ಕೃಷ್ಣಾ ನದಿಯ ಹೊರ ಹರಿವು ಇತ್ತು. ಸಂಜೆ ವೇಳೆಗೆ ಕೃಷ್ಣಾ ನದಿಯ ಹೊರ ಹರಿವಿನಲ್ಲಿ 2,760 ಕ್ಯೂಸೆಕ್ ಹೆಚ್ಚಾಗಿದ್ದು, 68,949 ಕ್ಯೂಸೆಕ್ ಏರಿಕೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.