
ಚಿಕ್ಕೋಡಿ: ಇಲ್ಲಿನ ಪುರಸಭೆ ಕಚೇರಿ ಕೂಗಳತೆ ದೂರದಲ್ಲಿ ಪುರಸಭೆಯಿಂದ ನಿರ್ಮಿಸಿರುವ ಫ್ಯಾಬ್ರಿಕ್ ವಾಣಿಜ್ಯ ಮಳಿಗೆ ಉದ್ಘಾಟನೆಯಾಗಿ ಒಂದು ವರ್ಷ ಕಳೆದರೂ ಬಳಕೆಗೆ ಮುಕ್ತವಾಗಿಲ್ಲ.
ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ–2 ಪ್ರಕಾಶ ಹುಕ್ಕೇರಿ ಹಾಗೂ ಶಾಸಕ ಗಣೇಶ ಹುಕ್ಕೇರಿ ಪ್ರಯತ್ನದಿಂದ ₹98 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ವಾಣಿಜ್ಯ ಮಳಿಗೆಯನ್ನು 2024ರ ನವೆಂಬರ್‌ನಲ್ಲಿ ಉದ್ಘಾಟಿಸಲಾಗಿದೆ.
ಕಾಮಗಾರಿಗೆ 2023-24ನೇ ಸಾಲಿನಲ್ಲಿ ಎಸ್‌ಎಫ್‌ಸಿ ಮುಕ್ತ ನಿಧಿ ಯೋಜನೆಯಡಿ ₹63 ಲಕ್ಷ, 15ನೇ ಹಣಕಾಸು ಯೋಜನೆಯಡಿ ₹35 ಲಕ್ಷ ವ್ಯಯಿಸಲಾಗಿದೆ. ರಾಜಕಾಲುವೆ ಮೇಲೆ 27 ಅಂಗಡಿ ತಲೆ ಎತ್ತಿವೆ.
ಕೆಲ ದಿನಗಳ ಹಿಂದಷ್ಟೇ ₹7 ಕೋಟಿಗೂ ಅಧಿಕ ವೆಚ್ಚದಲ್ಲಿ ಗುರುವಾರ ಪೇಟೆಯಲ್ಲಿ ಕೈಗೊಂಡ ರಸ್ತೆ ವಿಸ್ತರಣೆ ಹಾಗೂ ಭೂಗತ ವಿದ್ಯುತ್ ಕೇಬಲ್ ಅಳವಡಿಕೆ ಕಾಮಗಾರಿ ಪೂರ್ಣಗೊಂಡಿದೆ. ಈಗ ಅಲ್ಲಿಯೇ ವ್ಯಾಪಾರಿಗಳು ಮತ್ತೆ ವ್ಯಾಪಾರ ವಹಿವಾಟು ಆರಂಭಿಸಿದ್ದಾರೆ.
ಆದರೆ, ಅದಕ್ಕೆ ಹೊಂದಿಕೊಂಡ ವಾಣಿಜ್ಯ ಮಳಿಗೆಯನ್ನು ಬಳಕೆಗೆ ಮುಕ್ತಗೊಳಿಸದಿರುವುದು, ಅಂಗಡಿಗಳನ್ನು ವ್ಯಾಪಾರಿಗಳಿಗೆ ಬಾಡಿಗೆಗೆ ನೀಡದಿರುವುದು ಪುರಸಭೆ ಅಧಿಕಾರಿಗಳ ನಿರ್ಲಕ್ಷ್ಯ ಎತ್ತಿ ತೋರಿಸುತ್ತಿದೆ.
ಈ ಮಳಿಗೆಯಲ್ಲಿ ಒಂದು ಬದಿ 13, ಇನ್ನೊಂದು ಬದಿ 14 ಅಂಗಡಿಗಳಿವೆ. ಆದರೆ, ಮಳಿಗೆಗಳ ಬಳಿ ವಾಹನಗಳ ನಿಲುಗಡೆಗೆ ವ್ಯವಸ್ಥೆಯೇ ಇಲ್ಲದಿರುವುದು ಸಮಸ್ಯೆಯನ್ನು ಇನ್ನಷ್ಟು ಕಗ್ಗಂಟಾಗಿಸಿದೆ!
ಈ ಮಳಿಗೆಯನ್ನು ರಾಜಕಾಲುವೆ ಮೇಲೆ ನಿರ್ಮಿಸಲಾಗಿದೆ. ಒಂದು ಬದಿ ಕಿತ್ತೂರು ರಾಣಿ ಚನ್ನಮ್ಮನ ಪ್ರತಿಮೆ, ಇನ್ನೊಂದು ಬದಿ ತೆರೆದ ಚರಂಡಿ ಇದೆ. ತೆರೆದ ಚರಂಡಿ ಇರುವ ಕಡೆ ತಡೆಗೋಡೆಯನ್ನೂ ನಿರ್ಮಿಸಿಲ್ಲ. ಹಾಗಾಗಿ ವಾಣಿಜ್ಯ ಮಳಿಗೆಯತ್ತ ಬರುವ ಗ್ರಾಹಕರು ಆತಂಕದಿಂದ ಸಂಚರಿಸುವ ಪರಿಸ್ಥಿತಿ ಇದೆ.
ಕಡಿದಾದ ಕಂದಕದಲ್ಲಿ ಚರಂಡಿ ನೀರು ಹರಿಯುತ್ತಿದ್ದು, ಸುತ್ತಲಿನ ಪರಿಸರದಲ್ಲಿ ದುರ್ನಾತ ಹರಡಿದೆ. ಹಾಗಾಗಿ ಮಳಿಗೆಗಳತ್ತ ಸಾಗುವವರು ಮೂಗಿಗೆ ಕರವಸ್ತ್ರ ಕಟ್ಟಿಕೊಂಡು ಸಾಗಬೇಕಿದೆ. ಹಾಗಾಗಿ ಸುತ್ತಲಿನ ವಾತಾವರಣ ಶುಚಿಗೊಳಿಸಿ, ತಡೆಗೋಡೆ ನಿರ್ಮಿಸಬೇಕು ಎಂಬ ಆಗ್ರಹವೂ ಕೇಳಿಬರುತ್ತಿದೆ.
‘ವಾಣಿಜ್ಯ ಮಳಿಗೆಗೆ ಆಗಮಿಸುವ ಗ್ರಾಹಕರು ಹಾಗೂ ವ್ಯಾಪಾರಿಗಳ ವಾಹನಗಳ ನಿಲುಗಡೆಗೆ ವ್ಯವಸ್ಥೆ ಕಲ್ಪಿಸಬೇಕು. ಆಗ ಮಳಿಗೆ ಪೂರ್ಣಪ್ರಮಾಣದಲ್ಲಿ ಬಳಕೆಯಾಗಲಿದೆ. ಮಳಿಗೆ ಇರುವ ಸ್ಥಳದಲ್ಲೇ ಇಕ್ಕಟ್ಟಾದ ಸೇತುವೆ ಇದ್ದು, ಅದನ್ನು ವಿಸ್ತರಣೆ ಮಾಡಬೇಕು’ ಎಂಬುದು ಸಾರ್ವಜನಿಕರ ಆಗ್ರಹ.
ಯಾರು ಏನಂತಾರೆ...?
ರಾಜಕಾಲುವೆ ಮೇಲೆ ₹98 ಲಕ್ಷ ವೆಚ್ಚದಲ್ಲಿ ವಾಣಿಜ್ಯ ಮಳಿಗೆ ನಿರ್ಮಿಸಿ ಅನುಕೂಲ ಕಲ್ಪಿಸಲಾಗಿದೆ. ಇದೇರೀತಿ ಹಲವು ಕಡೆ ಮಳಿಗೆಗಳನ್ನು ನಿರ್ಮಿಸಲು ಯೋಜಿಸಲಾಗಿದೆ
ಪ್ರಕಾಶ ಹುಕ್ಕೇರಿ ರಾಜ್ಯ ಸರ್ಕಾರದ ದೆಹಲಿ ವಿಶೇಷ ಪ್ರತಿನಿಧಿ–2
ವಾಣಿಜ್ಯ ಮಳಿಗೆ ಹಂಚಿಕೆಗಾಗಿ ಮೀಸಲಾತಿ ಪ್ರಕಟಿಸಲಾಗಿದ್ದು ಬಾಡಿಗೆಗೆ ನೀಡಲು ಒಂದು ವಾರದಲ್ಲಿ ಪ್ರಕ್ರಿಯೆ ಕೈಗೊಳ್ಳಲಾಗುವುದು
ಜಗದೀಶ ಈಟಿ ಮುಖ್ಯಾಧಿಕಾರಿ ಪುರಸಭೆ
ಮಳಿಗೆಗೆ ಆಗಮಿಸುವ ಗ್ರಾಹಕರಿಗೆ ಅನುಕೂಲವಾಗುವಂತೆ ವಾಹನಗಳ ನಿಲುಗಡೆ ವ್ಯವಸ್ಥೆ ಮಾಡಬೇಕು. ಮಳಿಗೆಯ ಇನ್ನೊಂದು ಬದಿ ತಡೆಗೋಡೆ ನಿರ್ಮಿಸಬೇಕು
ಶಾಂತಾರಾಮ ಜೋಗಳೆ
ಸಾಮಾಜಿಕ ಕಾರ್ಯಕರ್ತ ವಾಣಿಜ್ಯ ಮಳಿಗೆ ಸಮರ್ಪಕವಾಗಿ ಬಳಸುವ ನಿಟ್ಟಿನಲ್ಲಿ ಕ್ರಮ ವಹಿಸಬೇಕು. ಇದರಿಂದ ಸಾರ್ವಜನಿಕರಿಗೆ ಅನುಕೂಲವಾಗಲಿದೆ
ಕೃಷ್ಣ ಕೆಂಚನ್ನವರ ಗ್ರಾಹಕ
ವಾಣಿಜ್ಯ ಮಳಿಗೆಯ ಅಂಗಡಿಗಳ ಹರಾಜು ಪ್ರಕ್ರಿಯೆ ಆರಂಭವಾಗದಿರುವುದು ಅಧಿಕಾರಿಗಳ ನಿರ್ಲಕ್ಷ್ಯ ಎತ್ತಿ ತೋರಿಸುತ್ತದೆ
ರಾಚಪ್ಪ ಶಿವಾಪುರೆ ಸ್ಥಳೀಯ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.