ADVERTISEMENT

ಚಿಕ್ಕೋಡಿ: ಶೂನ್ಯ ಬಂಡವಾಳದಿಂದ ಸ್ವಾವಲಂಬನೆ

ರಾಸಾಯನಿಕ ಗೊಬ್ಬರ, ತಿಪ್ಪೆ ಸಗಣಿಯೂ ಬೇಡ, ಕೃಷಿ ಭೂಮಿಯ ಮೇಲೆ ಕಾಳಜಿ ಮಾತ್ರ ಸಾಕು

​ಪ್ರಜಾವಾಣಿ ವಾರ್ತೆ
Published 8 ಆಗಸ್ಟ್ 2025, 2:42 IST
Last Updated 8 ಆಗಸ್ಟ್ 2025, 2:42 IST
ಚಿಕ್ಕೋಡಿ ತಾಲ್ಲೂಕಿನ ಶಿರಗಾಂವ ಗ್ರಾಮದ ರೈತ ರಾಜೇಂದ್ರ ಪಾಟೀಲ ತಮ್ಮ ಕಬ್ಬಿನ ಹೊಲದಲ್ಲಿ
ಚಿಕ್ಕೋಡಿ ತಾಲ್ಲೂಕಿನ ಶಿರಗಾಂವ ಗ್ರಾಮದ ರೈತ ರಾಜೇಂದ್ರ ಪಾಟೀಲ ತಮ್ಮ ಕಬ್ಬಿನ ಹೊಲದಲ್ಲಿ   

ಚಿಕ್ಕೋಡಿ: ತಾಲ್ಲೂಕಿನ ಶಿರಗಾಂವ ಗ್ರಾಮದ ರೈತ ರಾಜೇಂದ್ರ ಪಾಟೀಲ ಅವರು ಮೂರು ದಶಕಗಳಿಂದ ಶೂನ್ಯ ಬಂಡವಾಳ ಕೃಷಿ ಮಾಡಿ ನೆಮ್ಮದಿಯ ಬದುಕು ಸಾಗಿಸುತ್ತಿದ್ದಾರೆ. ರಾಸಾಯನಿಕ ಗೊಬ್ಬರಗಳಿಗೆ ರೈತರು ಪರದಾಡುತ್ತಿರುವ ಇಂದಿನ ದಿನಗಳಲ್ಲಿ ರಾಜೇಂದ್ರ ಅವರ ನಡೆ ಮಾದರಿಯಾಗಿದೆ. 

64 ವರ್ಷ ವಯಸ್ಸಿನ ರಾಜೇಂದ್ರ ಅವರು ಓದಿದ್ದು 10ನೇ ತರಗತಿಯವರೆಗೆ ಮಾತ್ರ. ಮೂರು ಎಕರೆ ಜಮೀನಿನಲ್ಲಿ ಶೂನ್ಯ ಬಂಡವಾಳ ಕೃಷಿ ಮಾಡುವ ಮೂಲಕ ಖರ್ಚು ಇಲ್ಲದೇಯೇ ಕೈ ತುಂಬ ಆದಾಯ ಪಡೆದುಕೊಳ್ಳುತ್ತಿದ್ದಾರೆ. ಕಬ್ಬು, ಈರುಳ್ಳಿ, ಶೇಂಗಾ, ಮೆಕ್ಕೆಜೋಳ, ಗೋಧಿ ಮುಂತಾದ ಬೆಳೆಗಳನ್ನು ಸಾವಯವ ಕೃಷಿ ಮೂಲಕ ಬೆಳೆಯುತ್ತಾರೆ.

1995ರಿಂದ ಇಲ್ಲಿಯವರೆಗೆ ಜಮೀನಿಗೆ ರಾಸಾಯನಿಕ ಅಥವಾ ತಿಪ್ಪೆ ಗೊಬ್ಬರ ಬಳಸಿಲ್ಲ. ಬೆಳೆಯ ಹೊಟ್ಟು, ಸೊಪ್ಪೆ, ತಪ್ಪಲು, ರವದಿ ಮುಂತಾದವುಗಳನ್ನು ನೇಗಿಲು, ಮಡಿಕೆ ಹೊಡೆಯುವ ಮೂಲಕ ಮಣ್ಣಲ್ಲಿ ಮುಚ್ಚಲಾಗುತ್ತದೆ. ಇದೇ ಕೆಲವೇ ದಿನಗಳಲ್ಲಿ ಗೊಬ್ಬರವಾಗಿ ಮಾರ್ಪಾಡಾಗುವ ಮೂಲಕ ಉತ್ತಮ ಇಳುವರಿಗೆ ಸಹಕಾರಿಯಾಗಿದೆ.

ADVERTISEMENT

ಗೊಬ್ಬರ– ಬೀಜಗಳನ್ನು ಮಾರುಕಟ್ಟೆಯಿಂದ ಖರೀದಿಸದೇ ಹೊಲದಲ್ಲಿಯೇ ತಯಾರಿ ಮಾಡುವ ಮೂಲಕ ಕೃಷಿಯ ವೆಚ್ಚವನ್ನು ಕಡಿಮೆ ಮಾಡಿಕೊಂಡಿದ್ದಾರೆ. ತಾವೇ ಬೀಜೋಪಚಾರ ಮಾಡಿಕೊಂಡು ಬಿತ್ತನೆ ಮಾಡುತ್ತಾರೆ. ಹೊಲದಲ್ಲಿ ಬೆಳೆದ ಕಳೆಯನ್ನು ಕೂಡ ಕಿತ್ತು ಬೆಳೆಗೆ ಹಾಕುವುದರಿಂದ ಅದೂ ಕಳೆತು ಗೊಬ್ಬರವಾಗುವ ಮೂಲಕ ಬೆಳೆಯು ಮತ್ತಷ್ಟು ಚೇತರಿಕೆಗೊಳ್ಳಲು ಕಾರಣವಾಗುತ್ತದೆ.

ಕೇಂದ್ರ ಸರ್ಕಾರ ರಸಗೊಬ್ಬರ ಕಂಪನಿಗಳಿಗೆ ಕೋಟ್ಯಂತರ ಮೊತ್ತದ ಸಬ್ಸಿಡಿ ನೀಡುವ ಬದಲಾಗಿ ಶೂನ್ಯ ಬಂಡವಾಳ, ಸಾವಯವ ಕೃಷಿ ಮಾಡುವ ರೈತರಿಗೆ ನೀಡಿ ಪ್ರೋತ್ಸಾಹಿಸುವುದು ಇಂದಿನ ಅಗತ್ಯವಾಗಿದೆ ಎಂಬುದು ಈ ರೈತನ ಸಲಹೆ.

ಕಳೆದ ವರ್ಷ ಈರುಳ್ಳಿ ಬೆಳೆದು ₹3 ಲಕ್ಷ ಆದಾಯ ಪಡೆದಿದ್ದು, ನಂತರದಲ್ಲಿ ಕಬ್ಬು ಬೆಳೆದು ₹3 ಲಕ್ಷ ಆದಾಯ ನೀಡಿದೆ. ಶೂನ್ಯ ಬಂಡವಾಳ ಕೃಷಿಯಾದ್ದರಿಂದ ಸಾಲಕ್ಕೆ ಕೈಚಾಚುವ ಪ್ರಮೇಯವೇ ಬಂದಿಲ್ಲ ಎಂಬುದು ಅವರ ಹೇಳಿಕೆ.

ಉತ್ತಮ ಇಳುವರಿಗಾಗಿ ಹಾಗೂ ಗೊಬ್ಬರಕ್ಕಾಗಿ ಸೆಣಬನ್ನು ಕಬ್ಬಿನ ನಡುವೆ ಬೆಳೆದ ರೈತ ರಾಜೇಂದ್ರ ಪಾಟೀಲ
ರಾಸಾಯನಿಕ ಗೊಬ್ಬರ ಬಳಸುವುದರಿಂದ ಅಪಾಯ ಹೆಚ್ಚು. ಸಾವಯವ ಕೃಷಿ ಮಾಡುವ ರೈತರಿಗೆ ಸರ್ಕಾರ ಪ್ರೋತ್ಸಾಹಧನ ನೀಡಿ ಇಂತಹ ಕೃಷಿಕರನ್ನು ಉತ್ತೇಜಿಸಬೇಕು
ಸತೀಶ ಖೋತ ಶಿರಗಾಂವ ನಿವಾಸಿ
ಶೂನ್ಯ ಬಂಡವಾಳ ಸಾವಯವ ಕೃಷಿಯಿಂದ ರೈತರಿಗೆ ಆರ್ಥಿಕ ಸಮಸ್ಯೆ ಆಗುವುದಿಲ್ಲ. ಸಾಲ ಬೇಕಾಗಿಲ್ಲ. ಜಮೀನು ಫಲವತ್ತತೆಯಿಂದ ಉಳಿಯುತ್ತದೆ
ರಾಜೇಂದ್ರ ಪಾಟೀಲ ಶೂನ್ಯ ಬಂಡವಾಳ ಕೃಷಿಕ ಶಿರಗಾಂವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.