
ಚಿಕ್ಕೋಡಿ: ತಾಲ್ಲೂಕು ಹಂತದಲ್ಲಿ ನಡೆಯುತ್ತಿರುವ ವಿವಿಧ ಇಲಾಖೆ ಕಾಮಗಾರಿಗಳ ಪ್ರಗತಿ ಪರಿಶೀಲನೆಗಾಗಿ ಮೂರು ತಿಂಗಳಿಗೊಮ್ಮೆ ಕೆಡಿಪಿ ಸಭೆ ನಡೆಸಬೇಕು ಎಂಬ ನಿಯಮವಿದೆ. ಆದರೆ, ಚಿಕ್ಕೋಡಿ–ಸದಲಗಾ ಕ್ಷೇತ್ರದ ಕಾಮಗಾರಿಗಳ ಪ್ರಗತಿ ಪರಿಶೀಲನೆಗಾಗಿ ಕಳೆದ ಮೂರು ವರ್ಷಗಳಿಂದ ಸಭೆಯೇ ನಡೆದಿಲ್ಲ!
ಚಿಕ್ಕೋಡಿ ತಾಲ್ಲೂಕಿನಲ್ಲಿ 36 ಗ್ರಾಮ ಪಂಚಾಯಿತಿ ಇವೆ. ಈ ಪೈಕಿ ಚಿಕ್ಕೋಡಿ-ಸದಲಗಾ ವಿಧಾನಸಭಾ ಕ್ಷೇತ್ರಕ್ಕೆ 25, ರಾಯಬಾಗ ವಿಧಾನಸಭಾ ಕ್ಷೇತ್ರಕ್ಕೆ 11 ಗ್ರಾಮ ಪಂಚಾಯಿತಿ ಒಳಪಡುತ್ತವೆ.
ಚಿಕ್ಕೋಡಿ–ಸದಲಗಾ ಕ್ಷೇತ್ರದಲ್ಲೇ ಹೆಚ್ಚು ಗ್ರಾಮ ಪಂಚಾಯಿತಿ ಇರುವ ಕಾರಣ, ಆ ಕ್ಷೇತ್ರದ ಶಾಸಕ ಗಣೇಶ ಹುಕ್ಕೇರಿ ಕೆಡಿಪಿ ಸಭೆ ನಡೆಸುವ ಸಮಿತಿ ಅಧ್ಯಕ್ಷರಾಗಿದ್ದಾರೆ. ಆಯಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಸದಸ್ಯ ಕಾರ್ಯದರ್ಶಿಯಾಗಿದ್ದಾರೆ.
ರಾಯಬಾಗ ಕ್ಷೇತ್ರದ ಶಾಸಕ ದುರ್ಯೋಧನ ಐಹೊಳೆ 2024ರ ನ. 27ರಂದು, ತಮ್ಮ ವ್ಯಾಪ್ತಿಯ 11 ಗ್ರಾಮ ಪಂಚಾಯಿತಿಗಳಲ್ಲಿ ಆಗಿರುವ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ನಡೆಸಿದ್ದಾರೆ. ನಂತರ ಒಂದು ವರ್ಷದಿಂದ ಅವರೂ ಕೆಡಿಪಿ ಸಭೆಯತ್ತ ಗಮನಹರಿಸಿಲ್ಲ.
ಶಾಸಕ ಗಣೇಶ ಹುಕ್ಕೇರಿ ಚಿಕ್ಕೋಡಿ–ಸದಲಗಾ ಕ್ಷೇತ್ರದ ಕಾಮಗಾರಿಗಳ ಪ್ರಗತಿ ಪರಿಶೀಲನೆಗಾಗಿ 2023ರ ನಂತರ ಸಭೆಯನ್ನೇ ಕರೆದಿಲ್ಲ. ‘ಇದರಿಂದ ಗ್ರಾಮಗಳಲ್ಲಿ ಅಭಿವೃದ್ಧಿ ಕೆಸಲ ಕುಂಠಿತಗೊಳ್ಳುತ್ತಿವೆ’ ಎಂಬುದು ಸಾರ್ವಜನಿಕರ ಆರೋಪ.
ಶಾಸಕರಷ್ಟೇ ಅಲ್ಲದೆ; ಆಯಾ ಕ್ಷೇತ್ರದ ಸಂಸದರು, ವಿಧಾನ ಪರಿಷತ್ ಸದಸ್ಯರು ಕೂಡ ತಾಲ್ಲೂಕು ಪಂಚಾಯಿತಿ ವ್ಯಾಪ್ತಿಯ ವಿವಿಧ ಇಲಾಖೆಗಳ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆ ಕರೆಯಬಹುದು. ಆದರೆ, ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಸೇರಿ ಯಾವೊಬ್ಬ ಜನಪ್ರತಿನಿಧಿಗಳೂ ಸಭೆ ಕರೆಯದಿರುವುದು ಚರ್ಚೆಗೆ ಗ್ರಾಸವಾಗಿದೆ.
ಚಿಕ್ಕೋಡಿ–ಸದಲಗಾ ಕ್ಷೇತ್ರದ ಜನರ ಸಮಸ್ಯೆಗಳ ನಿವಾರಣೆಗಾಗಿ ಶೀಘ್ರ ಕೆಡಿಪಿ ಸಭೆ ಕರೆಯಬೇಕುಚಂದ್ರಕಾಂತ ಹುಕ್ಕೇರಿ, ಸಾಮಾಜಿಕ ಕಾರ್ಯಕರ್ತ ಚಿಕ್ಕೋಡಿ
ಶಾಸಕರು ಸೂಚಿಸಿದರೆ ಚಿಕ್ಕೋಡಿ–ಸದಲಗಾ ಕ್ಷೇತ್ರದ ಕೆಡಿಪಿ ಸಭೆ ಕರೆಯಲು ಕ್ರಮ ವಹಿಸುತ್ತೇನೆ– ರವಿಕುಮಾರ ಹುಕ್ಕೇರಿ, ಕಾರ್ಯನಿರ್ವಾಹಕ ಅಧಿಕಾರಿ ತಾಲ್ಲೂಕು ಪಂಚಾಯಿತಿ ಚಿಕ್ಕೋಡಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.