ADVERTISEMENT

ಚಿಕ್ಕೋಡಿಗೆ ಇನ್ನೂ ಸಿಕ್ಕಿಲ್ಲ ಕೋವಿಡ್ ಪ್ರಯೋಗಾಲಯ

ಮುಖ್ಯಮಂತ್ರಿ ಆದೇಶಿಸಿಯೇ ತಿಂಗಳು ಸಮೀಪಿಸುತ್ತಿದೆ!

ಎಂ.ಮಹೇಶ
Published 28 ಜೂನ್ 2021, 19:30 IST
Last Updated 28 ಜೂನ್ 2021, 19:30 IST
ಚಿಕ್ಕೋಡಿಯ ಸಾರ್ವಜನಿಕ ಆಸ್ಪತ್ರೆಯ ನೋಟ
ಚಿಕ್ಕೋಡಿಯ ಸಾರ್ವಜನಿಕ ಆಸ್ಪತ್ರೆಯ ನೋಟ   

ಬೆಳಗಾವಿ: ಕೊರೊನಾ 2ನೇ ಅಲೆ ಮುಗಿಯುತ್ತಾ ಬಂದಿದ್ದರೂ, ಜಿಲ್ಲೆಯ ಚಿಕ್ಕೋಡಿಯಲ್ಲಿ ಕೋವಿಡ್ ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸಬೇಕೆಂಬ ಆ ಭಾಗದ ಜನರ ಬೇಡಿಕೆ ಇನ್ನೂ ಈಡೇರಿಲ್ಲ.

15 ತಾಲ್ಲೂಕುಗಳನ್ನು ಹಾಗೂ ಅರ್ಧ ಕೋಟಿಗೂ ಹೆಚ್ಚಿನ ಜನಸಂಖ್ಯೆಹೊಂದಿರುವ ದೊಡ್ಡ ಜಿಲ್ಲೆ ಆಗಿರುವುದರಿಂದಾಗಿ, ಚಿಕ್ಕೋಡಿಯಲ್ಲಿ ಪ್ರಯೋಗಾಲಯ ಆರಂಭಿಸಿದರೆ ಬೇಗನೆ ವರದಿ ಲಭ್ಯವಾಗಿ ಸೋಂಕು ಮತ್ತಷ್ಟು ಹರಡುವುದನ್ನು ತಡೆಯಬಹುದು ಎಂದು ಆಶಿಸಲಾಗಿದೆ. ಅದಕ್ಕೆ ತಕ್ಕಂತೆ ಸರ್ಕಾರ ತ್ವರಿತವಾಗಿ ಕ್ರಮ ಕೈಗೊಳ್ಳದಿರುವುದು ಅಲ್ಲಿನ ಜನರ ಅಸಮಾಧಾನಕ್ಕೆ ಕಾರಣವಾಗಿದೆ.

ಪ್ರಸ್ತುತ ಎಲ್ಲ ಮಾದರಿಗಳನ್ನೂ ಬೆಳಗಾವಿ ವೈದ್ಯಕೀಯ ವಿಜ್ಞಾನಗಳ ಸಂಸ್ಥೆ (ಬಿಮ್ಸ್) ಹಾಗೂ ಎನ್.ಐ.ಟಿ.ಎಂ. ಪ್ರಯೋಗಾಲಯಲ್ಲಿ ಪರೀಕ್ಷಿಸಲಾಗುತ್ತಿದೆ. ಈಗ ನಿತ್ಯವೂ ಸರಾಸರಿ 5ಸಾವಿರ ಮಾದರಿಗಳನ್ನು ಸಂಗ್ರಹಿಸಲಾಗುತ್ತಿದೆ. ಮೂರು ಸಾವಿರ ಮಾದರಿಗಳನ್ನು ಇಲ್ಲಿ ಪರೀಕ್ಷೆಗೆ ಒಳಪಡಿಸಲಾಗುತ್ತಿದೆ. ಹೆಚ್ಚುವರಿಯಾದವನ್ನು ಧಾರವಾಡ ಜಿಲ್ಲೆಗೆ ಕಳುಹಿಸುವ ಅನಿವಾರ್ಯತೆ ಇದೆ.

ADVERTISEMENT

ಆತಂಕಕ್ಕೆ ಕಾರಣವಾಗಿದೆ:

ನಗರದ ಪ್ರಯೋಗಾಲಯಗಳ ಮೇಲೆ ಒತ್ತಡ ಹೆಚ್ಚಿರುವುದರಿಂದಾಗಿ, ವರದಿ ಬರುವುದಕ್ಕೆ 8ರಿಂದ 10 ದಿನಗಳು ಬೇಕಾಗುತ್ತಿವೆ. ಪರಿಣಾಮ, ಜನರು ವರದಿಗಾಗಿ ಆತಂಕದಲ್ಲೇ ಕಾಯುವಂತಹ ಸ್ಥಿತಿ ತಪ್ಪಿಲ್ಲ. ಗಂಟಲು ಅಥವಾ ಮೂಗಿನ ದ್ರವದ ಮಾದರಿ ಕೊಟ್ಟವರು ವರದಿ ಕೈಸೇರುವವರೆಗೆ ಮುಕ್ತವಾಗಿ ಓಡಾಡಿಕೊಂಡಿರುವುದು ಸಾಮಾನ್ಯವಾಗಿದೆ. ಇದು, ಸೋಂಕು ವ್ಯಾಪಿಸುವ ಆತಂಕಕ್ಕೂ ಕಾರಣವಾಗಿದೆ. ಪರೀಕ್ಷಾ ಸಾಮರ್ಥ್ಯ ಹೆಚ್ಚಿಸುವ ಕೆಲಸಕ್ಕೆ ಸರ್ಕಾರ ಆದ್ಯತೆ ನೀಡಿಲ್ಲ.

ಇಲ್ಲಿನ ಸುವರ್ಣ ವಿಧಾನಸೌಧದಲ್ಲಿ ಜೂನ್‌ 4ರಂದು ಕೋವಿಡ್ ನಿರ್ವಹಣೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು, ಚಿಕ್ಕೋಡಿಯಲ್ಲಿ ಕೋವಿಡ್ ಪ್ರಯೋಗಾಲಯಕ್ಕೆ ಕೇಂದ್ರ ಆರೋಗ್ಯ ಸಚಿವಾಲಯ ಅನುಮತಿ ನೀಡಿದೆ. 2 ದಿನಗಳಲ್ಲಿ ಆರಂಭಿಸಬೇಕು’ ಎಂದು ಆದೇಶ ನೀಡಿದ್ದರು.

ಸೂಚನೆಗೂ ಕಿಮ್ಮತ್ತಿಲ್ಲ:

ಜೂನ್‌ 9ರಂದು ಸಭೆ ನಡೆಸಿದ್ದ ಉಪ ಮುಖ್ಯಮಂತ್ರಿಯೂ ಆಗಿರುವ ಜಿಲ್ಲಾ ಉಸ್ತುವಾರಿ ಸಚಿವ ಗೋವಿಂದ ಕಾರಜೋಳ, ‘ಸಿವಿಲ್ ಕಾಮಗಾರಿಗೆ ಕಾಲಹರಣ ಮಾಡದೆ ಲಭ್ಯ ಕಟ್ಟಡ ಬಳಸಿಕೊಂಡು ಕೂಡಲೇ ಪ್ರಯೋಗಾಲಯ ಪ್ರಾರಂಭಿಸಬೇಕು. ಎರಡು ದಿನಗಳಲ್ಲಿ ಸಿದ್ಧಪಡಿಸಬೇಕು’ ಎಂದು ಸೂಚನೆ ನೀಡಿದ್ದರು. ಇದಾಗಿ ಹಲವು ದಿನಗಳೇ ಕಳೆದಿದ್ದರೂ ಪ್ರಯೋಗಾಲಯ ಮೈದಳೆದಿಲ್ಲ.

‘ಕೋವಿಡ್ ಪ್ರಕರಣಗಳು ಬಹಳಷ್ಟಿರುವ ಹಾಗೂ ಡೆಲ್ಟಾ ಪ್ಲಸ್ ವೈರಸ್‌ ಹಾವಳಿಯೂ ಕಾಣಿಸಿಕೊಂಡಿರುವ ನೆರೆಯ ಮಹಾರಾಷ್ಟ್ರದೊಂದಿಗೆ ಚಿಕ್ಕೋಡಿ ಉಪ ವಿಭಾಗದ ಚಿಕ್ಕೋಡಿ, ನಿಪ್ಪಾಣಿ, ಅಥಣಿ, ರಾಯಬಾಗ, ಕಾಗವಾಡ ತಾಲ್ಲೂಕುಗಳು ಗಡಿ ಹಂಚಿಕೊಂಡಿವೆ. ಹೀಗಾಗಿ, ಕೋವಿಡ್ ಹರಡುವುದನ್ನು ತಡೆಯುವ ನಿಟ್ಟಿನಲ್ಲಿ ತ್ವರಿತವಾಗಿ ವರದಿ ಸಿಗುವುದು ಮುಖ್ಯವಾಗುತ್ತದೆ. ಈ ನಿಟ್ಟಿನಲ್ಲಿ ಪ್ರಯೋಗಾಲಯ ಸ್ಥಾಪನೆಯಾದರೆ ಅನುಕೂಲವಾಗುತ್ತದೆ. 3ನೇ ಅಲೆಯ ನಿರ್ವಹಣೆಗೂ ಸಹಕಾರಿಯಾಗಲಿದೆ’ ಎಂದು ಇಲಾಖೆಯ ಅಧಿಕಾರಿಯೊಬ್ಬರು ತಿಳಿಸಿದರು.

ಈ ಬಗ್ಗೆ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಡಿಎಚ್‌ಒ ಡಾ.ಎಸ್.ವಿ. ಮುನ್ಯಾಳ, ‘ಚಿಕ್ಕೋಡಿಯಲ್ಲಿ ಲ್ಯಾಬ್ ಆರಂಭಕ್ಕೆ ಪ್ರಕ್ರಿಯೆ ನಡೆಯುತ್ತಿದೆ. ಅಲ್ಲಿನ ಸಾರ್ವಜನಿಕ ಆಸ್ಪತ್ರೆಯ ಮೊದಲ ಮಹಡಿಯಲ್ಲಿ ಕೊಠಡಿ ಗುರುತಿಸಲಾಗಿದೆ. ಉಪಕರಣಗಳ ಖರೀದಿಗೆ ಟೆಂಡರ್ ಕರೆಯಲಾಗಿದೆ. ಸಿಬ್ಬಂದಿ ನೇಮಕಕ್ಕೆ ಕ್ರಮ ವಹಿಸಲಾಗಿದೆ. ಹತ್ತು ದಿನಗಳಲ್ಲಿ ಪ್ರಾರಂಭವಾಗಬಹುದು’ ಎಂದು ತಿಳಿಸಿದರು.

ಮುಖ್ಯಾಂಶಗಳು

ವಿಳಂಬವಾಗುತ್ತಿರುವ ಪರೀಕ್ಷಾ ವರದಿ

ಲಭ್ಯ ಪ್ರಯೋಗಾಲಯಗಳಿಗೆ ಒತ್ತಡ

ಉಸ್ತುವಾರಿ ಸಚಿವರೂ ನಿರ್ದೇಶನ ನೀಡಿದ್ದರು.

ಡಿಎಚ್‌ಒ ಏನಂತಾರೆ?

ಬಿಮ್ಸ್‌ಗೆ ಹೆಚ್ಚುವರಿಯಾಗಿ 10 ಸಿಬ್ಬಂದಿ ನೇಮಿಸಿಕೊಂಡಿದ್ದು ಅವರನ್ನು ಚಿಕ್ಕೋಡಿಯಲ್ಲಿ ಆರಂಭವಾಗುವ ಪ್ರಯೋಗಾಲಯಕ್ಕೆ ನಿಯೋಜಿಸಲಾಗುವುದು.
ಡಾ.ಎಸ್.ವಿ. ಮುನ್ಯಾಳ, ಡಿಎಚ್‌ಒ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.