
ಚಿಕ್ಕೋಡಿ ತಾಲ್ಲೂಕಿನ ಕೇರೂರ ಗ್ರಾಮದ ಜಾತ್ರೆಯಲ್ಲಿ ಪ್ರಸಾದ ಸೇವಿಸಿ ಅಸ್ವಸ್ಥಗೊಂಡವರಿಗೆ ಗುರುವಾರ ತಾಲ್ಲೂಕು ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಯಿತು
– ಪ್ರಜಾವಾಣಿ ಚಿತ್ರ
ಚಿಕ್ಕೋಡಿ (ಬೆಳಗಾವಿ ಜಿಲ್ಲೆ): ತಾಲ್ಲೂಕಿನ ಕೇರೂರ ಗ್ರಾಮದ ಹಳಕೇರಿ ತೋಟದ ಪ್ರದೇಶದಲ್ಲಿರುವ ಬಾಳುಮಾಮಾ ದೇವಸ್ಥಾನದ ಜಾತ್ರಾ ಮಹೋತ್ಸವದಲ್ಲಿ ಪ್ರಸಾದ ಸೇವಿಸಿದ 50ಕ್ಕೂ ಹೆಚ್ಚು ಜನ ಅಸ್ವಸ್ಥರಾಗಿದ್ದಾರೆ. ಇವರಲ್ಲಿ 15 ಮಕ್ಕಳೂ ಇದ್ದಾರೆ. ಎಲ್ಲರಿಗೂ ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
ಬುಧವಾರ (ಮೇ 29) ರಾತ್ರಿ ಹುಗ್ಗಿ, ಅನ್ನ–ಸಾರು ಪ್ರಸಾದ ವಿತರಣೆ ಮಾಡಲಾಗಿತ್ತು. ಹಲವರಿಗೆ ತಡರಾತ್ರಿಯಿಂದಲೇ ಆರೋಗ್ಯ ಸಮಸ್ಯೆ ಕಾಣಿಸಿಕೊಂಡಿತು. ಗುರುವಾರ ಬೆಳಿಗ್ಗೆ ವಾಂತಿ–ಭೇದಿ ಹೆಚ್ಚಾಗಿ ಜನರು ಅಸ್ವಸ್ಥಗೊಂಡಿದ್ದಾರೆ. ನಿತ್ರಾಣಗೊಂಡ 31 ಜನರನ್ನು ಚಿಕ್ಕೋಡಿ ತಾಲ್ಲೂಕು ಆಸ್ಪತ್ರೆಗೆ, 15 ಜನರನ್ನು ಯಕ್ಸಂಬಾ ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರಕ್ಕೆ, ಉಳಿದವರನ್ನು ಸ್ಥಳೀಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
‘ಬಾಳುಮಾಮಾ ದೇವಸ್ಥಾನದಲ್ಲಿ 300ಕ್ಕೂ ಹೆಚ್ಚು ಜನರು ಪ್ರಸಾದ ಸೇವನೆ ಮಾಡಿದ್ದಾರೆ. ಮಧ್ಯಾಹ್ನ ಪ್ರಸಾದ ಸೇವಿಸಿದವರಿಗೆ ಯಾವುದೇ ತೊಂದರೆಯಾಗಿಲ್ಲ. ತೋಟದ ಸುತ್ತಲಿನ ಜನರು ರಾತ್ರಿ ಪ್ರಸಾದ ಸೇವಿಸಿದ್ದು ಅವರಲ್ಲಿ ಅನಾರೋಗ್ಯ ಕಂಡುಬಂದಿದೆ. ಹಲವರಲ್ಲಿ ಈಗಾಗಲೇ ಚೇತರಿಕೆ ಕಂಡುಬಂದಿದ್ದು ಹೆಚ್ಚಿನ ಅನಾಹುತ ಆಗಿಲ್ಲ’ ಎಂದು ಚಿಕ್ಕೋಡಿ ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸುಕುಮಾರ ಬಾಗಾಯಿ ‘ಪ್ರಜಾವಾಣಿ’ಗೆ ತಿಳಿಸಿದರು.
ಬೆಳಗಾವಿ ಜಿಲ್ಲಾ ಆರೋಗ್ಯ ಸರ್ವೇಕ್ಷಣಾಧಿಕಾರಿ ಸಂಜಯ ದೊಡಮನಿ, ಜಿಲ್ಲಾ ಆಹಾರ ಗುಣಮಟ್ಟ ಸುರಕ್ಷತಾಧಿಕಾರಿ ಜಗದೀಶ ಜಿಂಗೆ, ಜಿಲ್ಲಾ ಉಪಕಾರ್ಯದರ್ಶಿ ಅಡವಿಮಠ, ಚಿಕ್ಕೋಡಿ ಹೆಚ್ಚುವರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಎಸ್.ಎಸ್. ಗಡದ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಜಗದೀಶ ಕಮ್ಮಾರ ಸೇರಿದಂತೆ ವೈದ್ಯಾಧಿಕಾರಿಗಳ ತಂಡ ಸ್ಥಳಕ್ಕೆ ಭೇಟಿ ನೀಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.