ADVERTISEMENT

ಆರು ತಿಂಗಳಲ್ಲಿ 29 ಬಾಣಂತಿ, 322 ಶಿಶುಗಳ ಸಾವು

ಬಾಣಂತಿಯರು, ಶಿಶುಗಳ ಸಾವಿನ ಬಗ್ಗೆ ಗಮನ ಸೆಳೆದಿದ್ದ ‘ಪ್ರಜಾವಾಣಿ’

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2024, 19:37 IST
Last Updated 8 ಡಿಸೆಂಬರ್ 2024, 19:37 IST
ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಶಿಶುಗಳ ಸಾವಿನ ಕುರಿತು ‘ಪ್ರಜಾವಾಣಿ’ ಬೆಳಕು ಚೆಲ್ಲಿದ ವರದಿ
ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ಶಿಶುಗಳ ಸಾವಿನ ಕುರಿತು ‘ಪ್ರಜಾವಾಣಿ’ ಬೆಳಕು ಚೆಲ್ಲಿದ ವರದಿ   

ಬೆಳಗಾವಿ: ಜಿಲ್ಲೆಯಲ್ಲಿ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳೂ ಸೇರಿ ಕಳೆದ ಆರು ತಿಂಗಳ ಅವಧಿ (ಏಪ್ರಿಲ್‌–ಅಕ್ಟೋಬರ್‌)ಯಲ್ಲಿ 29 ಬಾಣಂತಿಯರು ಹಾಗೂ 322 ನವಜಾತ ಶಿಶುಗಳ ಸಾವು ವರದಿಯಾಗಿದೆ. ಇದರಲ್ಲಿ 111ಕ್ಕೂ ಹೆಚ್ಚು ಶಿಶುಗಳು ಜಿಲ್ಲಾಸ್ಪತ್ರೆಯಲ್ಲೇ ಸಾವನ್ನಪ್ಪಿವೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಪ್ರಭಾರಿ ಜಿಲ್ಲಾ ಆರೋಗ್ಯಾಧಿಕಾರಿ ಡಾ.ಶಂಕರಪ್ಪ ಗಡೇದ, ‘ಅಪೌಷ್ಟಿಕತೆ, ನ್ಯುಮೋನಿಯಾ, ಕಡಿಮೆ ತೂಕ, ಅವಧಿಪೂರ್ವ ಹೆರಿಗೆ ಸೇರಿದಂತೆ ವಿವಿಧ ಕಾರಣಗಳಿಂದ ಈ ಸಾವುಗಳು ಸಂಭವಿಸಿವೆ. ನಿರ್ಲಕ್ಷ್ಯ ಅಥವಾ ಯಾವುದೇ ಔಷಧಿಯ ಅಡ್ಡಪರಿಣಾಮದಿಂದ ಅಲ್ಲ. ಜನ ಆತಂಕ ಪಡಬಾರದು’ ಎಂದರು.

‘ಜಿಲ್ಲೆಯಲ್ಲಿ ಆರು ತಿಂಗಳ ಅವಧಿಯಲ್ಲಿ 322 ನವಜಾತ ಶಿಶುಗಳು ಮೃತಪಟ್ಟಿದ್ದು ನಿಜ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಮರಣ ಪ್ರಮಾಣ ಕಡಿಮೆಯಾಗಿದೆ’ ಎಂದು ಜಿಲ್ಲಾ ಅಧೀಕ್ಷಕ ಡಾ.ವಿಠ್ಠಲ ಶಿಂಧೆ ಪ್ರತಿಕ್ರಿಯಿಸಿದ್ದಾರೆ.

ADVERTISEMENT

‘ಖಾಸಗಿ ಆಸ್ಪತ್ರೆಗಳಲ್ಲಿ ಹೆರಿಗೆಗೆ ದಾಖಲಾದವರ ಶಿಶುಗಳೇ ಹೆಚ್ಚಿನ ಪ್ರಮಾಣದಲ್ಲಿ ಮೃತಪಟ್ಟಿವೆ. ಖಾಸಗಿ ಆಸ್ಪತ್ರೆಯವರು ಕೈ ಚೆಲ್ಲಿದ ನಂತರ ಬಾಣಂತಿಯರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸುತ್ತಾರೆ. ಕೆಲವು ತುರ್ತು ಸಂದರ್ಭಗಳಲ್ಲಿ ಎಷ್ಟೇ ಪ್ರಯತ್ನಪಟ್ಟರೂ ಶಿಶು ಬದುಕುವ ಸಾಧ್ಯತೆ ಕಡಿಮೆ ಇರುತ್ತದೆ’ ಎಂದೂ ಅವರು ಹೇಳಿದ್ದಾರೆ.

‘ಜಿಲ್ಲಾಸ್ಪತ್ರೆಗೆ ಗರ್ಭಿಣಿ ಬಂದ ತಕ್ಷಣ ವಿವಿಧ ತಪಾಸಣೆಗಳನ್ನು ಮಾಡಲಾಗುತ್ತದೆ. ನ್ಯೂನತೆ ಇರುವ ಶಿಶು ಬಗ್ಗೆ ಸೋನೋಗ್ರಾಫಿಯಲ್ಲಿ ಗೊತ್ತಾದಾಗ ‘ಟರ್ಸೆರಿ ಕೇರ್ ಸೆಂಟರ್‌’ನಲ್ಲಿ ಹೆರಿಗೆ ಮಾಡಿಸಿದರೆ ಶಿಶು ಮರಣ ಪ್ರಮಾಣ ಕಡಿಮೆ ಮಾಡಬಹುದು. ಇಂಥ ವಿಷಯಗಳು ಕಂಡುಬಂದಾಗ ಮುಂಚಿತವಾಗಿಯೇ ಪಾಲಕರ ಗಮನಕ್ಕೆ ತರಲಾಗುತ್ತದೆ. ಇದನ್ನೇ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಸಮುದಾಯ ಆರೋಗ್ಯ ಕೇಂದ್ರಗಳಲ್ಲೂ ಪಾಲಿಸಲಾಗುತ್ತಿದೆ’ ಎಂದೂ ಅವರು ತಿಳಿಸಿದ್ದಾರೆ.

ಜಿಲ್ಲಾಸ್ಪತ್ರೆಯಲ್ಲಿ ಗರ್ಭಿಣಿ, ಬಾಣಂತಿ ಹಾಗೂ ನವಜಾತ ಶಿಶುಗಳ ಸಾವಿನ ಬಗ್ಗೆ ‘ಪ್ರಜಾವಾಣಿ’ಯಲ್ಲಿ ಅಕ್ಟೋಬರ್‌ 28ರಂದು ವಿಶೇಷ ವರದಿ ಪ್ರಕಟಿಸಲಾಗಿತ್ತು. ಬಳ್ಳಾರಿಯಲ್ಲಿ ಬಾಣಂತಿಯರ ಸರಣಿ ಸಾವಿನ ವಿಷಯದ ಬಳಿಕ, ಬೆಳಗಾವಿಯಲ್ಲಿ ಸಂಭವಿಸಿದ ಸಾವುಗಳ ಕುರಿತು ಸಾಮಾಜಿಕ ಜಾಲತಾಣಗಳಲ್ಲಿಯೂ ಸುದ್ದಿಗಳು ಹರಿದಾಡುತ್ತಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.