ADVERTISEMENT

ಬೆಳಗಾವಿ | ಮಸೀದಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ: 2 ವರ್ಷಗಳ ಬಳಿಕ ಆರೋಪಿ ವಶಕ್ಕೆ

ರಾಜೀ ಸಂಧಾನ ಮಾಡಿ ಪ್ರಕರಣ ಮುಚ್ಚಿ ಹಾಕಿದ್ದ ಹಿರಿಯರು. ಎರಡು ವರ್ಷಗಳ ಬಳಿಕ ಪತ್ತೆ

​ಪ್ರಜಾವಾಣಿ ವಾರ್ತೆ
Published 6 ಆಗಸ್ಟ್ 2025, 12:27 IST
Last Updated 6 ಆಗಸ್ಟ್ 2025, 12:27 IST
   

ಬೆಳಗಾವಿ: ಜಿಲ್ಲೆಯ ತಾಲ್ಲೂಕು ಕೇಂದ್ರವೊಂದರ ಮಸೀದಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಘಟನೆ ಎರಡು ವರ್ಷಗಳ ಬಳಿಕ ಗೊತ್ತಾಗಿದೆ. ಆರೋಪಿಯನ್ನು ವಶಕ್ಕೆ ಪಡೆದ ಪೊಲೀಸರು, ತನಿಖೆ ಆರಂಭಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯ ಮಹಾಲಿಂಗಪುರದ ನಿವಾಸಿ ತುಫೇಲ್‌ಅಹ್ಮದ್‌ ದಾದಾಪೀರ್‌ ನಗರ್ಚಿ (22) ಆರೋಪಿ. ತಗಡಿನ ಶೆಡ್‌ ನಿರ್ಮಾಣದ ಕೆಲಸ ಮಾಡುವ ಈತ ಆಗಾಗ ಮಸೀದಿಗಳಿಗೆ ಹೋಗಿ ಧರ್ಮ ಬೋಧನೆ ಕೂಡ ಮಾಡುತ್ತಿದ್ದ.

2023ರ ಅಕ್ಟೋಬರ್‌ 5ರಂದು ಘಟನೆ ನಡೆದಿದೆ. ಮಸೀದಿ ಪಕ್ಕದಲ್ಲಿರುವ ಮನೆಯ ಮುಂದೆ ಆಟವಾಡುತ್ತಿದ್ದ ಬಾಲಕಿಯನ್ನು ಪುಸಲಾಯಿಸಿ, ಅತ್ಯಾಚಾರ ಎಸಗಿದ್ದ. ಇದು ಮಸೀದಿಯೊಳಗಿನ ಸಿಸಿಟಿವಿ ದೃಶ್ಯಾವಳಿಯಲ್ಲಿ ಸೆರೆಯಾಗಿದೆ.

ADVERTISEMENT

‍ಪತ್ತೆಯಾಗಿದ್ದು ಹೇಗೆ?

‘ಪುನೀತ್‌ ಕೆರೆಹಳ್ಳಿ ಎನ್ನುವವರು ತಮ್ಮ ‘ಎಕ್ಸ್’ ಖಾತೆಯಲ್ಲಿ ಮಂಗಳವಾರ (ಆ.5) ಈ ವಿಷಯ ಹಂಚಿಕೊಂಡಿದ್ದರು. ಮಸೀದಿಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ ನಡೆದಿದೆ. ದೂರು ಕೊಡದಂತೆ ಮಸೀದಿಯವರು ಬಾಲಕಿಯ ತಂದೆಗೆ ಬೆದರಿಕೆ ಹಾಕಿದ್ದಾರೆ. ಅವರಿಗೆ ನ್ಯಾಯ ಕೊಡಿಸುವವರು ಶೇರ್‌ ಮಾಡಿರಿ’ ಎಂದು ಬರೆದಿದ್ದರು. ಇದರೊಂದಿಗೆ ಅತ್ಯಾಚಾರದ ವಿಡಿಯೊ ತುಣುಕು ಹಾಗೂ ಬಾಲಕಿಯ ತಂದೆ ಮಾತನಾಡಿದ ಆಡಿಯೊ ತುಣುಕು ಕೂಡ ಇತ್ತು. ಜಿಲ್ಲಾ ಸಾಮಾಜಿಕ ಜಾಲತಾಣಗಳ ಮಾನಿಟರಿಂಗ್‌ ಕೋಶದವರು ಇದನ್ನೇ ಸಾಕ್ಷಿಯಾಗಿ ಇಟ್ಟುಕೊಂಡು ಕಾರ್ಯಪ್ರವೃತ್ತರಾದಾಗ, ಅತ್ಯಾಚಾರದ ವಿಷಯ ಗೊತ್ತಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಭೀಮಾಶಂಕರ ಗುಳೇದ ತಿಳಿಸಿದರು.

‘ಆರೋಪಿ ಮಸಿದಿಯಲ್ಲಿ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಆದರೆ, ಕೆಲವು ವ್ಯಕ್ತಿಗಳು ತಮ್ಮತಮ್ಮಲ್ಲೇ ರಾಜೀ ಪಂಚಾಯಿತಿ ನಡೆಸಿ ಪ್ರಕರಣ ಮುಚ್ಚಿಹಾಕಿದ್ದರು. ಬಾಲಕಿಯ ಪಾಲಕರೂ ದೂರು ಕೊಟ್ಟಿರಲಿಲ್ಲ. ಈಚೆಗಷ್ಟೇ ಬಾಲಕಿಯ ತಂದೆ ಈ ವಿಷಯವನ್ನು ಇನ್ನೊಬ್ಬರೊಂದಿಗೆ ಮೊಬೈಲ್‌ನಲ್ಲಿ ಹೇಳಿಕೊಂಡಿದ್ದರು. ಅದರ ಆಡಿಯೊ ತುಣುಕು ಹಾಗೂ ಸಿಸಿಟಿವಿ ತುಣುಕು ಸಂಗ್ರಹಿಸಿದ ಪುನೀತ್‌ ಕೆರೆಹಳ್ಳಿ ಎನ್ನುವವರು ಮಂಗಳವಾರ ‘ಎಕ್ಸ್‌’ನಲ್ಲಿ ಅಪ್ಲೋಡ್‌ ಮಾಡಿದ್ದರು’ ಎಂದರು.

‘ಮುರಗೋಡ ಪೊಲೀಸ್‌ ಠಾಣೆಯ ಅಧಿಕಾರಿಗಳ ನೇತೃತ್ವದಲ್ಲಿ ಮೂರು ತಂಡ ರಚಿಸಿ, ಬುಧವಾರ ಆರೋಪಿಯನ್ನು ವಶಕ್ಕೆ ಪಡೆಲಾಯಿತು. ತಂದೆ–ತಾಯಿ ಜತೆಗೆ ಜಗಳ ಮಾಡಿಕೊಂಡು ಚಿಕ್ಕಮ್ಮನ ಮನೆಗೆ ಬಂದಿದ್ದ ಆರೋಪಿ ಈ ದೃಷ್ಕೃತ್ಯ ಎಸಗಿದ್ದಾನೆ’ ಎಂದರು.

‘ಇದರಲ್ಲಿ ಮಸೀದಿಯವರು ನೇರ ಆರೋಪಿಗಳಾಗಿಲ್ಲ. ಸಂಧಾನ ಮಾಡಿ ಪ್ರಕರಣ ಮುಚ್ಚಲು ಯತ್ನಿಸಿದವರನ್ನು ವಿಚಾರಣೆ ಮಾಡಲಾಗುತ್ತಿದೆ. 2024ರ ಜುಲೈ 1ಕ್ಕಿಂತ ಮುಂಚೆ ಆಗಿದ್ದರಿಂದ ಐಪಿಸಿ ಕಾಯ್ದೆ ಅನ್ವಯ ಪ್ರಕರಣ ದಾಖಲಿಸಲಾಗಿದೆ’ ಎಂದರು.

ದೂರು ನೀಡಲು ಮುಂದೆ ಬಾರದ ಪಾಲಕರು

‘ದೂರು ನೀಡುವಂತೆ ಪೊಲೀಸರು ಬಾಲಕಿಯ ಪಾಲಕರಿಗೆ ಮನವಿ ಮಾಡಿದರೂ ಅವರು ನಿರಾಕರಿಸಿದ್ದಾರೆ. ಹೀಗಾಗಿ, ಜಿಲ್ಲಾ ಮಕ್ಕಳ ರಕ್ಷಣಾ ಘಟಕವನ್ನು ಸಂಪರ್ಕಿಸಿ, ಅಂಗನವಾಡಿ ಕಾರ್ಯಕರ್ತೆಯ ಮೂಲಕ ದೂರು ದಾಖಲಿಸಿಕೊಳ್ಳಲಾಗಿದೆ’ ಎಂದೂ ಎಸ್ಪಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.