ಬೆಳಗಾವಿ: ಇಲ್ಲಿನ ಜಿಲ್ಲಾಸ್ಪತ್ರೆಯ ವಿಶೇಷ ನವಜಾತ ಶಿಶುಗಳ ತೀವ್ರ ನಿಗಾ ಘಟಕಕ್ಕೆ ಕರ್ನಾಟಕ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷ ಶಶಿಧರ ಕೋಸಂಬೆ ಭಾನುವಾರ ಭೇಟಿ ನೀಡಿ, ಪರಿಶೀಲನೆ ನಡೆಸಿದರು.
‘ಹವಾನಿಯಂತ್ರಿತ ವ್ಯವಸ್ಥೆಯಲ್ಲಿ ಈ ಘಟಕ ಕಾರ್ಯನಿರ್ವಹಿಸಬೇಕು ಎಂಬ ನಿಯಮವಿದೆ. ಆದರೆ, ಎಲ್ಲ ಕೊಠಡಿಗಳಲ್ಲೂ ಹವಾನಿಯಂತ್ರಿತ ವ್ಯವಸ್ಥೆ ಏಕೆ ಮಾಡಿಲ್ಲ. ಶಿಶುಗಳಿಗೆ ಉಸಿರಾಟದ ತೊಂದರೆಯಾದರೆ ಯಾರು ಹೊಣೆ’ ಎಂದು ವೈದ್ಯರು ಮತ್ತು ಸಿಬ್ಬಂದಿಯನ್ನು ತರಾಟೆಗೆ ತೆಗೆದುಕೊಂಡರು.
‘ಪ್ರತಿ ಕೊಠಡಿಯಲ್ಲಿ ತಕ್ಷಣವೇ ಹವಾನಿಯಂತ್ರಿತ ವ್ಯವಸ್ಥೆ ಮಾಡಿ, ಸೋಮವಾರ ವರದಿ ನೀಡಬೇಕು’ ಎಂದು ನಿರ್ದೇಶನ ಕೊಟ್ಟರು.
‘ಕಾಂಗರೂ ಮದರ್ ಕೇರ್ ವ್ಯವಸ್ಥೆ ಸರಿಯಾಗಿಲ್ಲ’ ಎಂದು ಆಕ್ಷೇಪ ವ್ಯಕ್ತಪಡಿಸಿದ ಕೋಸಂಬೆ, ‘ಸರ್ಕಾರದ ಮಾರ್ಗಸೂಚಿ ಅನ್ವಯ, ಒಂದು ವಾರದೊಳಗೆ ವ್ಯವಸ್ಥೆ ಮಾಡಿ ವರದಿ ಸಲ್ಲಿಸಬೇಕು’ ಎಂದು ಸೂಚಿಸಿದರು.
‘ರಾಷ್ಟ್ರೀಯ ಬಾಲ ಸ್ವಾಸ್ಥ್ಯ ಕಾರ್ಯಕ್ರಮದಡಿ(ಆರ್‌ಬಿಎಸ್‌ಕೆ) ಅಪೌಷ್ಟಿಕ ಮಕ್ಕಳ ಪುನಶ್ಚೇತನ ಘಟಕಕ್ಕೆ, ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳನ್ನು ದಾಖಲಿಸಬೇಕು. ಆದರೆ, ಇಲ್ಲಿ ಆ ಕಾರ್ಯಕ್ರಮದಡಿ ಮಕ್ಕಳನ್ನು ದಾಖಲಿಸದಿರಲು ಕಾರಣವೇನು?’ ಎಂದು ಪ್ರಶ್ನಿಸಿದರು.
‘ಜಿಲ್ಲೆಯಲ್ಲಿ ಅಪೌಷ್ಟಿಕತೆಯಿಂದ ಬಳಲುತ್ತಿರುವ ಮಕ್ಕಳಿಗೆ ಅಗತ್ಯ ಸೌಕರ್ಯ ಕಲ್ಪಿಸಿ, ಸಮಾಜದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕು. ಒಂದುವೇಳೆ ಇದರಲ್ಲಿ ನಿರ್ಲಕ್ಷ್ಯ ವಹಿಸಿದರೆ, ಸಂಬಂಧಿತ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕಾಗುತ್ತದೆ’ ಎಂದು ಎಚ್ಚರಿಕೆ ಕೊಟ್ಟರು.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಪರ್ವೀನ್, ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷ ಜಗದೀಶ ಸರಿಕರ, ಸದಸ್ಯರಾದ ಸದಾಶಿವ ಕಾಂಬಳೆ, ದುರುಗಪ್ಪ ಮಾಚನೂರು, ಮಕ್ಕಳ ರಕ್ಷಣಾಧಿಕಾರಿ ಸಚಿನ ಹಿರೇಮಠ, ಮಕ್ಕಳ ಸಹಾಯವಾಣಿ 1098 ಸಂಯೋಜಕ ಮಲ್ಲೇಶ ಕುಂದರಗಿ ಇತರರಿದ್ದರು.
___
ಹಿಂಡಲಗಾ ಕಾರಾಗೃಹಕ್ಕೂ ಭೇಟಿ
ಬೆಳಗಾವಿ ತಾಲ್ಲೂಕಿನ ಹಿಂಡಲಗಾದ ಕೇಂದ್ರ ಕಾರಾಗೃಹಕ್ಕೆ ಶಶಿಧರ ಕೋಸಂಬೆ ಭಾನುವಾರ ಭೇಟಿ ನೀಡಿ, ಅಲ್ಲಿನ ಪರಿಸರ, ಅಡುಗೆ ಸಿದ್ಧಪಡಿಸುವ ಕೊಠಡಿ ಮತ್ತು ಗ್ರಂಥಾಲಯ ವೀಕ್ಷಿಸಿದರು. ಕೈದಿಗಳ ಜತೆಗೆ ಮಾತುಕತೆ ನಡೆಸಿದರು.
‘ಇಲ್ಲಿ 826 ಕೈದಿಗಳು ಇದ್ದಾರೆ. ಅವರೊಂದಿಗೆ ಮಕ್ಕಳ ಕಲ್ಯಾಣ ಸಮಿತಿಯವರು, ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ಮತ್ತು ಜೈಲಿನ ಅಧೀಕ್ಷಕರು ಸೋಮವಾರ ಸಮಾಲೋಚನೆ ನಡೆಸಿ, ಕೈದಿಗಳ ಕುಟುಂಬದ ಹಿನ್ನೆಲೆ ತಿಳಿಯಬೇಕು’ ಎಂದು ತಿಳಿಸಿದರು.
‘ಕೈದಿಗಳ 18 ವರ್ಷದೊಳಗಿನ ಮಕ್ಕಳ ಆರೋಗ್ಯ, ಶಿಕ್ಷಣ ಮತ್ತು ರಕ್ಷಣೆಗಾಗಿ ಸರ್ಕಾರದಿಂದ ಅಗತ್ಯ ಸೌಕರ್ಯ ಕಲ್ಪಿಸಲು ಕ್ರಮ ವಹಿಸಬೇಕು. ಅಗತ್ಯವಿರುವ ಮಕ್ಕಳಿಗೆ ಸರ್ಕಾರದ ವಸತಿ ಶಾಲೆಗಳು, ಬಾಲಮಂದಿರಗಳಲ್ಲಿ ಪ್ರವೇಶ ಕಲ್ಪಿಸಬೇಕು’ ಎಂದು ನಿರ್ದೇಶನ ಕೊಟ್ಟರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.