ADVERTISEMENT

ಕ್ರಿಸ್‌ಮಸ್‌: ಎಲ್ಲೆಡೆ ಯೇಸುವಿನ ಗುಣಗಾನ

ಚರ್ಚ್‌ಗಳು, ಕ್ರೈಸ್ತರ ಮನೆಗಳಲ್ಲಿ ಮನೆಮಾಡಿದ ಸಂಭ್ರಮ, ಹಬ್ಬದ ವಾತಾವರಣ,

ಇಮಾಮ್‌ಹುಸೇನ್‌ ಗೂಡುನವರ
Published 24 ಡಿಸೆಂಬರ್ 2025, 2:29 IST
Last Updated 24 ಡಿಸೆಂಬರ್ 2025, 2:29 IST
ಬೆಳಗಾವಿಯ ಕ್ಯಾಂಪ್‌ ಪ್ರದೇಶದ ಫಾತಿಮಾ ಕೆಥಡ್ರಲ್‌ ಚರ್ಚ್‌ನಲ್ಲಿ ಯೇಸುವಿನ ಇತಿಹಾಸ ಸಾರುವ ಚಿತ್ರಗಳನ್ನು ಅಳವಡಿಸುತ್ತಿರುವುದು   ಪ್ರಜಾವಾಣಿ ಚಿತ್ರ
ಬೆಳಗಾವಿಯ ಕ್ಯಾಂಪ್‌ ಪ್ರದೇಶದ ಫಾತಿಮಾ ಕೆಥಡ್ರಲ್‌ ಚರ್ಚ್‌ನಲ್ಲಿ ಯೇಸುವಿನ ಇತಿಹಾಸ ಸಾರುವ ಚಿತ್ರಗಳನ್ನು ಅಳವಡಿಸುತ್ತಿರುವುದು   ಪ್ರಜಾವಾಣಿ ಚಿತ್ರ   

ಬೆಳಗಾವಿ: ಕ್ರೈಸ್ತರ ಮನೆ–ಮನಗಳಲ್ಲೀಗ ಸಂಭ್ರಮ ಮನೆಮಾಡಿದೆ. ಕ್ರಿಸ್‌ಮಸ್‌ ಪ್ರಯುಕ್ತ ಕ್ರೈಸ್ತರ ಮನೆಗಳು, ಕ್ರೈಸ್ತರ ಶಿಕ್ಷಣ ಸಂಸ್ಥೆಗಳು ಹಾಗೂ ಚರ್ಚ್‌ಗಳು ವಿದ್ಯುದ್ದೀಪಗಳ ಅಲಂಕಾರದಿಂದ ಝಗಮಗಿಸುತ್ತಿವೆ. ಮನೆಯಂಗಳ ಮತ್ತು ಚರ್ಚ್‌ಗಳ ಆವರಣದಲ್ಲಿ ತಲೆ ಎತ್ತಿರುವ ಕ್ರಿಸ್‌ಮಸ್‌ ಟ್ರೀಗಳು, ಗೋದಲಿ ಮಾದರಿಗಳು ಜನರನ್ನು ಸೆಳೆಯುತ್ತಿವೆ.

ಹಬ್ಬಗಳ ವಿಚಾರದಲ್ಲಿ ಸದಾ ಭಾವೈಕ್ಯಕ್ಕೆ ಸಾಕ್ಷಿಯಾಗುವ ಬೆಳಗಾವಿಯಲ್ಲಿ ಕ್ರಿಸ್‌ಮಸ್‌ ಹಬ್ಬವನ್ನು ಸಡಗರದಿಂದ ಆಚರಿಸಲಾಗುತ್ತದೆ. ಕ್ರೈಸ್ತರೊಂದಿಗೆ ಸರ್ವಧರ್ಮೀಯರು ಹಬ್ಬದ ಆಚರಣೆಯಲ್ಲಿ ಪಾಲ್ಗೊಳ್ಳುತ್ತಾರೆ.

ಈ ವರ್ಷವೂ ಆಚರಣೆಗೆ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಫಾತಿಮಾ ಕೆಥಡ್ರಲ್‌ ಚರ್ಚ್‌, ಮೆಥೋಡಿಸ್ಟ್‌ ಸೆಂಟ್ರಲ್‌ ಚರ್ಚ್‌, ಸೇಂಟ್ ಅಂಥೋನಿ ಚರ್ಚ್‌, ಮೌಂಟ್‌ಕಾರ್ಮಲ್ ಚರ್ಚ್‌, ಸೇಂಟ್ ಮೇರಿ ಚರ್ಚ್‌ ಸೇರಿದಂತೆ ನಗರದ 20ಕ್ಕೂ ಅಧಿಕ ಚರ್ಚ್‌ಗಳಲ್ಲಿ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಎಲ್ಲೆಡೆ ಯೇಸುವಿನ ಗುಣಗಾನ ನಡೆದಿದೆ. 

ADVERTISEMENT

ಚರ್ಚ್‌ಗಳ ಆವರಣದಲ್ಲಿ ಯೇಸುವಿನ ಚಿತ್ರಗಳು ಮತ್ತು ಯೇಸು ಜನಿಸಿದ ಘಟನೆ ಬಿಂಬಿಸುವ ಗೋದಲಿ ಮಾದರಿಗಳನ್ನು ನಿರ್ಮಿಸಲಾಗುತ್ತಿದೆ.

‌ಬುಧವಾರ(ಡಿ.24) ಮಧ್ಯರಾತ್ರಿಯಿಂದಲೇ ಎಲ್ಲ ಚರ್ಚ್‌ಗಳಲ್ಲಿ ಧಾರ್ಮಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಚಾಲನೆ ಸಿಗಲಿದೆ. ಗುರುವಾರ(ಡಿ.25) ಬೆಳಿಗ್ಗೆ ಕ್ರೈಸ್ತರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ ನಂತರ, ಹಬ್ಬದ ಶುಭಾಶಯ ವಿನಿಮಯ ಮಾಡಿಕೊಳ್ಳುವರು. 

ಧಾರ್ಮಿಕ ಕಾರ್ಯಕ್ರಮದ ನೇತೃತ್ವ ವಹಿಸುವ ಫಾದರ್‌ಗಳು, ಫಾಸ್ಟರ್‌ಗಳು ಮತ್ತು ಸಿಸ್ಟರ್‌ಗಳು ಧರ್ಮ ಸಂದೇಶ ನೀಡುವರು. ಇದೇವೇಳೆ ಕ್ಯಾರಲ್‌ ಗೀತೆಗಳ ಗಾಯನವೂ ನೆರವೇರಲಿದೆ.

ಬಿಷಪ್ ಡೆರೆಕ್‌ ಫರ್ನಾಂಡಿಸ್‌
ಕ್ರಿಸ್‌ಮಸ್‌ ಅಂಗವಾಗಿ ಡಿಸೆಂಬರ್‌ ಆರಂಭದಿಂದಲೇ ಚರ್ಚ್‌ಗಳು ಮನೆಗಳಲ್ಲಿ ವಿವಿಧ ಕಾರ್ಯಕ್ರಮ ಏರ್ಪಡಿಸಿ ಯೇಸುವನ್ನು ಸ್ಮರಿಸುತ್ತಿದ್ದೇವೆ
ಸುಮಂತ ಮಾರಿಹಾಳ ಸ್ಥಳೀಯ

ಖರೀದಿ ಭರಾಟೆ

ಕ್ರಿಸ್‌ಮಸ್‌ ಪ್ರಯುಕ್ತ ನಗರದ ಮಾರುಕಟ್ಟೆಯಲ್ಲಿ ಖರೀದಿ ಭರಾಟೆ ಜೋರಾಗಿದೆ. ಯಾವುದೇ ಬೇಕರಿಗೆ ಕಾಲಿಟ್ಟರೆ ಸಾಕು; ನಾನಾ ಫ್ಲೇವರ್‌ಗಳ ಕೇಕ್‌ಗಳು ಕಣ್ಣಿಗೆ ಬೀಳುತ್ತಿವೆ.  ಇದರೊಂದಿಗೆ ಅಂಗಡಿಗಳಲ್ಲಿ ವೈವಿಧ್ಯಮಯ ವಿನ್ಯಾಸಗಳ ಆಲಂಕಾರಿಕ ವಸ್ತುಗಳು ಕ್ರಿಸ್‌ಮಸ್‌ ಟ್ರೀಗಳು ಗ್ರೀಟಿಂಗ್‌ ಕಾರ್ಡ್‌ಗಳು ಸಂತ–ಕ್ಲಾಸ್‌ ಮಾದರಿ ಬಟ್ಟೆಗಳು ಮತ್ತು ಕ್ಯಾಪ್‌ಗಳನ್ನು ಮಕ್ಕಳು ಯುವಜನರು ಉತ್ಸಾಹದಿಂದ ಖರೀದಿಸುತ್ತಿರುವುದು ಕಂಡುಬರುತ್ತಿದೆ.

‘ಬಡವರಿಗೂ ಪ್ರೀತಿಯ ಆತಿಥ್ಯ ಕೊಡಿ’

‘ಕ್ರಿಸ್‌ಮಸ್‌ ಎಂಬುದು ಬಡವರ ಹಬ್ಬ. ಇದರಲ್ಲಿ ಸಿರಿವಂತರಷ್ಟೇ ಖುಷಿಯಿಂದ ಹಬ್ಬ ಆಚರಿಸಿದರೆ ಅರ್ಥಪೂರ್ಣವಾಗದು. ತಮ್ಮ ಹಿತೈಷಿಗಳು ಸ್ನೇಹಿತರೊಂದಿಗೆ ಬಡವರನ್ನೂ ಮನೆಗೆ ಊಟಕ್ಕೆ ಆಹ್ವಾನಿಸಿ ಪ್ರೀತಿಯಿಂದ ಆತಿಥ್ಯ ನೀಡಬೇಕು. ಆಗ ಯೇಸುವಿನ ಕೃಪೆಗೆ ಪಾತ್ರವಾಗುತ್ತೀರಿ’ ಎಂದು ಕ್ರೈಸ್ತ ಧರ್ಮಗುರು ಬಿಷಪ್‌ ಡೆರೆಕ್‌ ಫರ್ನಾಂಡಿಸ್‌ ಹೇಳಿದರು. ‘ಕ್ರಿಸ್‌ಮಸ್‌ ಪ್ರಯುಕ್ತ ಈ ಬಾರಿ ವರ್ಷವಿಡೀ(ಪ್ರತಿ ತಿಂಗಳು) ವಿವಿಧ ಕಾರ್ಯಕ್ರಮ ಆಯೋಜಿಸುತ್ತ ಬಂದಿದ್ದೇವೆ. ಇದೇ 28ರಂದು ಸಂಜೆ ವರ್ಷಾಚರಣೆ ಸಮಾರೋಪ ಕಾರ್ಯಕ್ರಮ ಏರ್ಪಡಿಸಿದ್ದೇವೆ. ಅದರಲ್ಲಿ ಸಾವಿರಾರು ಕ್ರೈಸ್ತರು ಪಾಲ್ಗೊಂಡು ಯೇಸುವನ್ನು ನೆನೆಯುತ್ತೇವೆ. ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಮೆರವಣಿಗೆಯನ್ನೂ ನಡೆಸಲಿದ್ದೇವೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.