ADVERTISEMENT

ಜೊಲ್ಲೆ ದಂಪತಿಗೆ ನಾಗರಿಕ ಸನ್ಮಾನ 20ರಂದು

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2025, 1:56 IST
Last Updated 19 ನವೆಂಬರ್ 2025, 1:56 IST
ಅಣ್ಣಾಸಾಹೇಬ ಜೊಲ್ಲೆ
ಅಣ್ಣಾಸಾಹೇಬ ಜೊಲ್ಲೆ   

ನಿಪ್ಪಾಣಿ: ‘ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ (ಬಿಡಿಸಿಸಿ) ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಣ್ಣಾಸಾಹೇಬ ಜೊಲ್ಲೆ ಹಾಗೂ ಶಾಸಕಿ ಶಶಿಕಲಾ ಜೊಲ್ಲೆಯವರ ಜನ್ಮದಿನದ ಅಂಗವಾಗಿ ಗುರುವಾರ ನ. 20ರಂದು ಬೆಳಿಗ್ಗೆ 11ಕ್ಕೆ ಅವರಿಗೆ ನಾಗರಿಕ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಬಿಡಿಸಿಸಿ ಉಪಾಧ್ಯಕ್ಷ ಹಾಗೂ ಶಾಸಕ ರಾಜು ಕಾಗೆ ಸೇರಿದಂತೆ ಜಿಲ್ಲಾ ಬ್ಯಾಂಕಿನ ಎಲ್ಲ ಹೊಸ ನಿರ್ದೇಶಕರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಗುವುದು’ ಎಂದು ಸ್ಥಳೀಯ ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾರ್ಖಾನೆಯ ಅಧ್ಯಕ್ಷ ಮಲಗೊಂಡಾ ಪಾಟೀಲ ಹೇಳಿದರು.

ಕಾರ್ಖಾನೆಯಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾರ್ಖಾನೆಯ ನಿರ್ದೇಶಕ ಮಂಡಳಿಯು ಈ ಕಾರ್ಯಕ್ರಮವನ್ನು ಆಯೋಜಿಸಿದ್ದು, ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ ಜಾರಕಿಹೊಳಿ, ಶಾಸಕ ಬಾಲಚಂದ್ರ ಜಾರಕಿಹೊಳಿ, ಕೊಲ್ಹಾಪುರ ರಾಜ್ಯಸಭಾ ಸದಸ್ಯ ಧನಂಜಯ ಮಹಾಡಿಕ, ಬುಡಾ ಅಧ್ಯಕ್ಷ ಲಕ್ಷ್ಮಣರಾವ್‌ ಚಿಂಗಳೆ ಮತ್ತು ಇತರ ಪ್ರಮುಖ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನಿಪ್ಪಾಣಿ ತಾಲ್ಲೂಕಿನಿಂದ ಮೊದಲ ಬಾರಿಗೆ ಜಿಲ್ಲಾ ಬ್ಯಾಂಕಿನ ಅಧ್ಯಕ್ಷರಾಗುವ ಗೌರವ ಅಣ್ಣಾಸಾಹೇಬ ಜೊಲ್ಲೆ ಅವರಿಗೆ ದೊರೆತಿದೆ. ಹೀಗಾಗಿ ಅದ್ದೂರಿಯಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ’ ಎಂದರು.

ಉಪಾಧ್ಯ್ಕಷ ಪವನ ಪಾಟೀಲ ಮಾತನಾಡಿ, ‘ಕಾರ್ಖಾನೆ ನಿರ್ದೇಶಕರು ಕಾರ್ಯಕ್ರಮವನ್ನು ಆಯೋಜಿಸುತ್ತಿದ್ದರೂ, ಹಾಲಸಿದ್ಧನಾಥ ಸಹಕಾರ ಸಕ್ಕರೆ ಕಾಖಾನೆಯೊಂದಿಗೆ ಹಿರಣ್ಯಕೇಶಿ ಸಕ್ಕರೆ ಕಾರ್ಖಾನೆ (ಸಂಕೇಶ್ವರ), ಬೀರೇಶ್ವರ ಸಹಕಾರ ಸಂಘ (ಎಕ್ಸಂಬಾ), ಸಂಗಮ ಸಕ್ಕರೆ ಕಾರ್ಖಾನೆ (ಹಿಡಕಲ್ ಡ್ಯಾಂ)ಗಳ ಪದಾಧಿಕಾರಿಗಳು, ನಿರ್ದೇಶಕರು ಮತ್ತು ‘ಜೊಲ್ಲೆ ಪ್ರೇಮಿ ಕಾರ್ಯಕರ್ತರೂ ಸಹ ಸ್ವಾಗತ ಸಮಾರಂಭದಲ್ಲಿರಲಿದ್ದಾರೆ’ ಎಂದರು.

ADVERTISEMENT

ನಗರಸಭೆ ಮಾಜಿ ಉಪಾಧ್ಯಕ್ಷ ಸುನೀಲ ಪಾಟೀಲ, ನಿರ್ದೇಶಕ ಪ್ರಕಾಶ ಶಿಂಧೆ, ಸಮಿತ ಸಾಸನೆ, ಜಯವಂತ ಭಾಟಲೆ, ಅವಿನಾಶ ಪಾಟೀಲ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿದರು. ತಾಲ್ಲೂಕಿನ ಸರ್ವ ಗ್ರಾಮೀಣ ಕೃಷಿ ಸಹಕಾರ (ಪಿಕೆಪಿಎಸ್) ಸಂಘದ ಪದಾಧಿಕಾರಿಗಳು ಮತ್ತು ನಿರ್ದೇಶಕರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಮುಖ್ಯ ಕಾರ್ಯಕ್ರಮದ ನಂತರ ಶಾಸಕಿ ಶಶಿಕಲಾ ಜೊಲ್ಲೆ ಹಾಗೂ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಅಣ್ಣಾಸಾಹೇಬ ಜೊಲ್ಲೆ ವಂದನೆಗಳನ್ನು ಸ್ವೀಕರಿಸುವರು ಎಂದು ತಿಳಿಸಿದರು.

ನಿರ್ದೇಶಕರಾದ ಮಹಾಲಿಂಗ ಕೋಠಿವಾಲೆ, ರಾಜು ಗುಂಡೇಶಾ, ರಮೇಶ ಪಾಟೀಲ, ಶ್ರೀಕಾಂತ ಬನ್ನೆ, ವಿನಾಯಕ ಪಾಟೀಲ, ರಾವಸಾಹೇಬ ಫರಾಳೆ, ಸುಹಾಸ ಗೂಗೆ, ಆನಂದಾ ಯಾದವ, ಕಿರಣ ನಿಕಾಡೆ, ವ್ಯವಸ್ಥಾಪಕ ನಿರ್ದೇಶಕ ಅಪ್ಪಾಸಾಹೇಬ ಶಿರಗಾವೆ, ಕಛೇರಿ ಅಧೀಕ್ಷಕ ಗಜಾನನ ರಾಮನಕಟ್ಟಿ ಇದ್ದರು.

ಶಶಿಕಲಾ ಜೊಲ್ಲೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.