ADVERTISEMENT

ಪ್ರವಾಹ | ಶಾಶ್ವತ ಪರಿಹಾರಕ್ಕೆ ಕ್ರಮ: ಸಿ.ಎಂ ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2024, 8:54 IST
Last Updated 5 ಆಗಸ್ಟ್ 2024, 8:54 IST
   

ಬೆಳಗಾವಿ: 'ಪ್ರವಾಹದಿಂದ ಪ್ರತಿವರ್ಷ ಮುಳುಗಡೆಯಾಗುವ ಗ್ರಾಮಗಳ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ಅವರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಕ್ರಮ ವಹಿಸಲಾಗುವುದು. ಇದಕ್ಕೆ ಜನರೂ ಸಹಕರಿಸಬೇಕು' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

ಇಲ್ಲಿನ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು.

'ಪ್ರವಾಹ ಸಂತ್ರಸ್ತರಿಗೆ ಆಗಿರುವ ತೊಂದರೆ ಪರಿಶೀಲನೆಗೆ ಇಲ್ಲಿಗೆ ಬಂದಿದ್ದೇನೆ. ಮೈಸೂರು, ‌ಕೊಡಗು, ಹಾಸನ ನಂತರ, ಬೆಳಗಾವಿಗೆ ಭೇಟಿ ನೀಡುತ್ತಿದ್ದೇನೆ. ಸಂತ್ರಸ್ತರಿಗೆ ಪರಿಹಾರ ಕೊಡುವ ಕೆಲಸ ಮಾಡುತ್ತೇವೆ' ಎಂದ ಅವರು, 'ಬೆಳಗಾವಿಯಲ್ಲಿ ಸತತ 42 ದಿನಗಳಿಂದ ಮಳೆ ಸುರಿಯುತ್ತಿದೆ.

ADVERTISEMENT

ಹಾಗಾಗಿ ಅಂಗನವಾಡಿ ಕೇಂದ್ರಗಳಿಗೆ ರಜೆ ನೀಡಲು ಸೂಚಿಸಿದ್ದೇನೆ.

ಮುಂದಿನ ವಾರ ಹೆಚ್ಚು ಮಳೆಯಾಗುವ ಮುನ್ಸೂಚನೆ ಇದೆ. ಅಗತ್ಯಬಿದ್ದರೆ ರಜೆ ಇನ್ನಷ್ಟು ವಿಸ್ತರಿಸಲಾಗುವುದು' ಎಂದರು.

'2019ರ ಪ್ರವಾಹದಲ್ಲಿ ಮನೆ ಕಳೆದುಕೊಂಡವರಿಗೆ ಬಿಜೆಪಿ ಸರ್ಕಾರ

₹5 ಲಕ್ಷ ಪರಿಹಾರ ನೀಡಿತ್ತು.

ಆದರೆ, ಅದು ದುರುಪಯೋಗವಾಯಿತು. ಎಲ್ಲ ಸಂತ್ರಸ್ತರಿಗೂ ಪರಿಹಾರ ಸಿಗಲಿಲ್ಲ.

ಅನೇಕರಿಗೆ ನಾಲ್ಕನೇ ಕಂತಿ‌ನ ಹಣವೇ ಕೈಗೆಟುಕಲಿಲ್ಲ.

ಹಾಗಾಗಿ ಎನ್ ಡಿಆರ್ ಎಫ್ ಮಾರ್ಗಸೂಚಿ ಪ್ರಕಾರ, ಮನೆ ಕಳೆದುಕೊಂಡವರಿಗೆ ನಾವು ₹1.20 ಲಕ್ಷ ಪರಿಹಾರ ಕೊಡುತ್ತೇವೆ. ಎಲ್ಲರಿಗೂ ಪರಿಹಾರ ತಲುಪಿಸುತ್ತೇವೆ' ಎಂದರು.

*

ಬಿಜೆಪಿ ವಿರುದ್ಧ ಕಾನೂನಾತ್ಮಕ ಹೋರಾಟ:

'ಮುಡಾ ಪ್ರಕರಣಕ್ಕೆ ಸಂಬಂಧಿಸಿ ಬಿಜೆಪಿಯವರು ಮಾಡುತ್ತಿರುವ ಆರೋಪದ ವಿರುದ್ಧ

ಕಾನೂನಾತ್ಮಕ ಹಾಗೂ ರಾಜಕೀಯ ಹೋರಾಟಕ್ಕೆ ಸಿದ್ಧರಿದ್ದೇವೆ‌' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

'ರಾಜ್ಯಪಾಲರು ಕೊಟ್ಟಿರುವ ಶೋಕಾಸ್ ನೋಟಿಸ್ ವಾಪಸ್ ಪಡೆಯಬೇಕು. ಅಬ್ರಹಾಂ ಕೊಟ್ಟಿರುವ ದೂರು ತಿರಸ್ಕರಿಸಬೇಕು ಎಂದು ಹೇಳಿದ್ದೇವೆ. ರಾಜ್ಯಪಾಲರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ನೋಡೋಣ' ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.