ADVERTISEMENT

ಚನ್ನಮ್ಮನ ಕಿತ್ತೂರು: ಕಾಲೇಜಿನಲ್ಲಿ ಮೇಳೈಸಿದ ‘ಗ್ರಾಮ ಸಂಭ್ರಮ’

​ಪ್ರಜಾವಾಣಿ ವಾರ್ತೆ
Published 18 ಜನವರಿ 2024, 15:58 IST
Last Updated 18 ಜನವರಿ 2024, 15:58 IST
<div class="paragraphs"><p>ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ‘ಗ್ರಾಮ ಸಂಭ್ರಮ’ದಲ್ಲಿ ವಿದ್ಯಾರ್ಥಿಗಳು ಸಂಭ್ರಮಿಸಿದರು</p></div>

ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ‘ಗ್ರಾಮ ಸಂಭ್ರಮ’ದಲ್ಲಿ ವಿದ್ಯಾರ್ಥಿಗಳು ಸಂಭ್ರಮಿಸಿದರು

   

ಚನ್ನಮ್ಮನ ಕಿತ್ತೂರು: ಪಂಚೆ, ಕುರ್ತಾ ತೊಟ್ಟು ಹೆಗಲ ಮೇಲೊಂದು ಶಲ್ಯ ಹಾಕಿಕೊಂಡು ಯುವಕರು ಬಂದರೆ, ಸೀರೆ, ರವಿಕೆ, ಮೂಗನತ್ತು, ಜಡೆಗೆ ಮಲ್ಲಿಗೆ ಮುಡಿದು ಯುವತಿಯರು ಆಗಮಿಸಿದ್ದರು. ‘ಶರಣ್ರೀ ಯಪ್ಪಾ.. ಬನ್ನಿ’ ಎಂದು ಆತ್ಮೀಯವಾಗಿ ಬರಮಾಡಿಕೊಂಡರು.

ಇದು ಕಿತ್ತೂರು ನಾಡ ವಿದ್ಯಾವರ್ಧಕ ಸಂಘದ ಕಲಾ ಮತ್ತು ವಾಣಿಜ್ಯ ಕಾಲೇಜಿನಲ್ಲಿ ಗುರುವಾರ ಆಯೋಜಿಸಿದ್ದ ‘ಗ್ರಾಮ ಸಂಭ್ರಮ’ದಲ್ಲಿ ವಿದ್ಯಾರ್ಥಿಗಳು ಸಂಭ್ರಮಿಸಿದ ಪರಿ.

ADVERTISEMENT

ಎತ್ತಿನ ಬಂಡಿ ಕಟ್ಟಿಕೊಂಡು ವಿದ್ಯಾರ್ಥಿಗಳು ಕಾಲೇಜಿನವರೆಗೆ ಬಂದು ನಲಿದರು. ಸಜ್ಜಿರೊಟ್ಟಿ, ಎಣ್ಣೆಗಾಯಿ ಬದನೆ, ಹಿಟ್ಟಿನ ಚಕಳಿ, ಗುರೆಳ್ಳು, ಪುಟಾಣಿ ಚಟ್ನಿ, ಕೆನೆ ಮೊಸರು, ಮಾದ್ಲಿ ಸೇರಿ ವಿವಿಧ ಬಗೆಯ ಖಾದ್ಯ ಸಿದ್ಧಪಡಿಸಿಕೊಂಡು ಬಂದಿದ್ದ ವಿದ್ಯಾರ್ಥಿನಿಯರು ಅತಿಥಿಗಳಿಗೆ ಉಣಬಡಿಸಿ, ತಾವೂ ಉಂಡು ಖುಷಿಪಟ್ಟರು.

‘ಗ್ರಾಮ ಸಂಭ್ರಮ’ದಲ್ಲಿ ಪಾಲ್ಗೊಂಡಿದ್ದ ಜನಪದ ತಜ್ಞ, ಕಲಾವಿದ ರಾಮು ಮೂಲಗಿ, ‘ಜಾನಪದ ಹಾಡುಗಳಲ್ಲಿ ಜಾನಪದ, ಜನಪ್ರಿಯ ಜಾನಪದ ಹಾಗೂ ಖೋಟಾ ಜಾನಪದ ಎಂಬ ಮೂರು ವಿಧಗಳಿವೆ. ಜನರ ಬಾಯಿಯಿಂದ ಬಾಯಿಗೆ ಬಂದವುಗಳು ಜಾನಪದ, ಪ್ರಸಿದ್ಧ ಸಾಹಿತಿಗಳು ಬರೆದವು ಜನಪ್ರಿಯ ಜಾನಪದ ಮತ್ತು ಈಗ ಬರುತ್ತಿರುವುದು ಖೋಟಾ ಜನಪದ ಹಾಡುಗಳಾಗಿವೆ. ಮೂಲ ಜಾನಪದಗಳಾದ ಗೀಗಿ, ಲಾವಣಿ, ಬೀಸುವ, ಹಂತಿ ಪದಗಳನ್ನು ವಿದ್ಯಾರ್ಥಿಗಳು ಕಲಿಯಬೇಕು. ಖೋಟಾ ಜಾನಪದ ಹಾಡುಗಳಿಗೆ ಮಾರು ಹೋಗಬಾರದು’ ಎಂದು ಮನವಿ ಮಾಡಿದರು. ತಮ್ಮ ಮಾತುಗಳ ಮಧ್ಯೆ ಜಾನಪದ, ತತ್ವಪದಗಳನ್ನು ಹಾಡಿ ರಂಜಿಸಿದರು.

ಕೆಪಿಸಿಸಿ ಸದಸ್ಯೆ ರೋಹಿಣಿ ಪಾಟೀಲ ಮಾತನಾಡಿ, ‘ಈಗ ಕಾಲ ಬದಲಾಗಿದೆ. ಮಹಿಳೆಯೂ ಮುಖ್ಯವಾಹಿನಿಗೆ ಬರುತ್ತಿದ್ದಾಳೆ. ಮೊದಲಿದ್ದ ಕಟ್ಟು–ಪಾಡುಗಳು ಮಾಯವಾಗುತ್ತಿವೆ’ ಎಂದರು.

ಶಿಕ್ಷಣ ಸಂಸ್ಥೆ ಕಾರ್ಯಾಧ್ಯಕ್ಷ ಜಗದೀಶ ವಸ್ತ್ರದ ಮಾತನಾಡಿದರು. ಗೌರವ ಕಾರ್ಯದರ್ಶಿ ಜಗದೀಶ ಬಿಕ್ಕಣ್ಣವರ, ನಿರ್ದೇಶಕರಾದ ಎಸ್.ಎಸ್. ವಳಸಂಗ, ಎನ್.ಎಸ್. ಹಿರೇಮಠ, ಜಗದೀಶ ಘಟ್ನಟ್ಟಿ, ಡಿ.ಎಲ್. ಪಾಟೀಲ. ವಿ.ಆರ್. ಪಾಟೀಲ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.