ADVERTISEMENT

ಪುಸ್ತಕ ದಿನಾಚರಣೆ: ಯುವಜನರಿಗೆ ಪುಸ್ತಕ ಅಭಿರುಚಿ ಬೆಳೆಸುತ್ತಿರುವ ಗಜಾನನ ಕಾಂಬಳೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2025, 4:25 IST
Last Updated 23 ಏಪ್ರಿಲ್ 2025, 4:25 IST
ಚಿಕ್ಕೋಡಿಯ ಸಂಸದರ ಕಚೇರಿ ಆವರಣದಲ್ಲಿ ಗಜಾನನ ಕಾಂಬಳೆ ಅವರು ಕೈಗೊಂಡ ‘ಬನ್ನಿ, ಪುಸ್ತಕ ಓದೋಣ’ ಅಭಿಯಾನದಲ್ಲಿ ಭಾಗಿಯಾದ ಪುಸ್ತಕ ಪ್ರೇಮಿಗಳು
ಚಿಕ್ಕೋಡಿಯ ಸಂಸದರ ಕಚೇರಿ ಆವರಣದಲ್ಲಿ ಗಜಾನನ ಕಾಂಬಳೆ ಅವರು ಕೈಗೊಂಡ ‘ಬನ್ನಿ, ಪುಸ್ತಕ ಓದೋಣ’ ಅಭಿಯಾನದಲ್ಲಿ ಭಾಗಿಯಾದ ಪುಸ್ತಕ ಪ್ರೇಮಿಗಳು   

ಚಿಕ್ಕೋಡಿ: ಪುಸ್ತಕ ಓದುವ ಹವ್ಯಾಸ ಬೆಳೆಸುವ ಸಲುವಾಗಿ ಪಟ್ಟಣದ ನಿವಾಸಿ ಗಜಾನನ ಕಾಂಬಳೆ ಅವರು ವಿಶೇಷ ಪ್ರಯೋಗ ಮಾಡಿ ಯಶಸ್ವಿಯಾಗಿದ್ದಾರೆ. ಕಳೆದೊಂದು ವರ್ಷದಿಂದ ಪ್ರತಿ ಭಾನುವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ‘ಬನ್ನಿ. ಪುಸ್ತಕ ಓದೋಣ’ ಅಭಿಯಾನದ ಮೂಲಕ ಮನೆ ಮಾತಾಗಿದ್ದಾರೆ.

ಪಟ್ಟಣದಲ್ಲಿ ಕಂಪ್ಯೂಟರ್‌ ತರಬೇತಿ ಕೇಂದ್ರದಲ್ಲಿ ಕೆಲಸ ಮಾಡುತ್ತಿರುವ ಗಜಾನನ ಅವರಿಗೆ ಪುಸ್ತಕ ಓದುವುದೇ ಹವ್ಯಾಸ. ₹35 ಸಾವಿರ ಮೌಲ್ಯದ ಪುಸ್ತಕಗಳನ್ನು ಖರೀದಿಸಿದ ಅವರು, ಜನರಿಗೂ ಓದಿಸುತ್ತಿದ್ದಾರೆ. ದೇವಸ್ಥಾನದ ಆವರಣ, ಸರ್ಕಾರಿ ಕಚೇರಿಯ ಕಟ್ಟೆ ಮೇಲೆ, ರಸ್ತೆ ಬದಿಯಲ್ಲಿ, ಗಿಡದ ನೆರಳಿನಲ್ಲಿ ವಾರಕ್ಕೊಮ್ಮೆ ನೂರಾರು ಪುಸ್ತಕಗಳನ್ನು ಹರಡಿಕೊಂಡು ಓದಲು–ಚರ್ಚಿಸಲು ಕುಳಿತುಕೊಳ್ಳುತ್ತಾರೆ.

ಕನ್ನಡ, ಇಂಗ್ಲಿಷ್, ಹಿಂದಿ ಭಾಷೆಯಲ್ಲಿಯ ಕಥೆ, ಕಾದಂಬರಿ, ಕವನ ಸಂಕಲನ, ವೈಚಾರಿಕ ಬರಹಗಳ ಸಂಗ್ರಹ ಇವರಲ್ಲಿದೆ. ಎಸ್.ಎಲ್. ಬೈರಪ್ಪ, ಕುವೆಂಪು, ವಿವೇಕಾನಂದ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ರವಿ ಬೆಳಗೆರೆ ಮುಂತಾದ ಹಿರಿಯ ಸಾಹಿತಿಗಳ ಪುಸ್ತಕ ಭಂಡಾರವೇ ಇದೆ. ಬೀದಿ ಬದಿಯಲ್ಲಿ ಕುಳಿತು ಅವರು ಪ್ರತಿ ದಿನವೂ ಓದುವುದಕ್ಕೆ ಉಚಿತವಾಗಿ ಕೊಡುತ್ತಾರೆ. ಅವರ ಈ ಉತ್ಸಾಹ ಕಂಡು ಹಲವರು ಪುಸ್ತಕಗಳ ದೇಣಿಗೆ ಕೂಡ ಕೊಟ್ಟಿದ್ದಾರೆ.

ADVERTISEMENT

ಆರಂಭದಲ್ಲಿ ಅಭಿಯಾನವನ್ನು ಅಸಡ್ಡೆಯಿಂದ ಕಾಣುತ್ತಿದ್ದವರು ಇದೀಗ ಇವರ ಬಳಿಯೇ ಪುಸ್ತಕ ಪಡೆದುಕೊಂಡು ಓದುತ್ತಿದ್ದಾರೆ. ಚಿಕ್ಕೋಡಿಯ ಸಾಹಿತಿಗಳಾದ ಸುಬ್ರಾವ ಎಂಟೆತ್ತಿನವರ, ಎಸ್.ವೈ. ಹಂಜಿ, ದಯಾನಂದ ನೂಲಿ ಮುಂತಾದವರು ತಮ್ಮ ಬಳಿಯಲ್ಲಿದ್ದ ಬೆಲೆ ಬಾಳುವ ನೂರಾರು ಪುಸ್ತಕಗಳನ್ನು ದೇಣಿಗೆ ನೀಡಿದ್ದಾರೆ.

ಅಭಿಯಾನದ ಯಶಸ್ಸಿಗೆ ಸಾರ್ವಜನಿಕರೂ ಕೈ ಜೋಡಿಸಿದ್ದು ತಮ್ಮ ಬಳಿಯ ಪುಸ್ತಕ ದೇಣಿಗೆ ನೀಡಲು ಮುಂದಾಗಿದ್ದಾರೆ.

ಪುಸ್ತಕ ಓದುವುದರಿಂದ ಜ್ಞಾನದಾಹ ತೀರುತ್ತದೆ. ಕಲ್ಪನಾಶಕ್ತಿ ಹೆಚ್ಚುತ್ತದೆ. ಗಡಿ ಭಾಗದ ಯುವಜನರಿಗೆ ಈ ಅಭಿರುಚಿ ಮೂಡಿಸಿದ ಗಜಾನನ ಕೆಲಸ ಅಭಿನಂದನೀಯ
ದಯಾನಂದ ನೂಲಿ ವೈದ್ಯ ಸಾಹಿತಿ ಚಿಕ್ಕೋಡಿ
ಮೊಬೈಲ್ ಗೀಳಿನಿಂದ ಹೊರ ಬರಲು ಪುಸ್ತಕ ಹಿಡಿಯಬೇಕು. ಅಭಿಯಾನವನ್ನು ಗ್ರಾಮೀಣ ಪ್ರದೇಶಕ್ಕೂ ವಿಸ್ತರಿಸುವುದು ಅಗತ್ಯ. ಇದಕ್ಕೆ ಸರ್ಕಾರ ನೆರವಾಗಬೇಕು
ತಸ್ಲೀಮ್ ಮುಲ್ಲಾ ಓದುಗ ಮಹಿಳೆ
ಮುಂಬೈ ಬೆಂಗಳೂರಿನಂತಹ ನಗರಗಳಲ್ಲಿ ಇಂಥ ಪ್ರಯೋಗ ಯಶಸ್ವಿಯಾಗಿದೆ. ಚಿಕ್ಕೋಡಿಯಂತಹ ಸಣ್ಣ ಪಟ್ಟಣದಲ್ಲಿ ಪ್ರಾರಂಭಿಸಿ ಯಶಸ್ವಿಗೊಳಿಸಿದ್ದೇನೆ
ಗಜಾನನ ಕಾಂಬಳೆ ಅಭಿಯಾನದ ರೂವಾರಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.