ಬೆಳಗಾವಿ: ತಾಲ್ಲೂಕಿನ ಕಾಕತಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮವೊಂದರಲ್ಲಿ ಬುಧವಾರ ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ಮಾಡಲು ಯತ್ನಿಸಿದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ 30 ವರ್ಷದ ಆರೋಪಿ ಅದೇ ಊರಿನ 22 ವರ್ಷದ ಯುವತಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಯುವತಿ ಹಿಂದೂ, ಯುವಕ ಮುಸ್ಲಿಂ ಸಮುದಾಯಕ್ಕೆ ಸೇರಿದ್ದರಿಂದ ಗ್ರಾಮದಲ್ಲಿ ತ್ವೇಷಮಯ ವಾತಾವರಣ ನಿರ್ಮಾಣವಾಗಿದೆ.
‘ಯುವತಿ ಪಾಲಕರು ಹೊಲಕ್ಕೆ ತೆರಳಿದ್ದರು. ಮನೆಯಲ್ಲಿ ಯಾರೂ ಇಲ್ಲದ್ದನ್ನು ನೋಡಿಕೊಂಡು ಆರೋಪಿ ಮನೆಯೊಳಗೆ ನುಗ್ಗಿದ. ಯುವತಿಯ ಅತ್ಯಾಚಾರಕ್ಕೆ ಯತ್ನಿಸಿದಾಗ, ಆಕೆ ಯುವತಿ ಜೋರಾಗಿ ಕೂಗಿದಳು. ಮನೆಯೊಳಗೆ ಯುವತಿಯ ಚಿಕ್ಕಪ್ಪ ಓಡಿಬಂದರು. ಆರೋಪಿಯನ್ನು ಹಿಡಿದು ಹಿಗ್ಗಾ–ಮುಗ್ಗಾ ಥಳಿಸಿದರು. ಪ್ರಜ್ಞೆ ತಪ್ಪಿ ಬಿದ್ದಂತೆ ನಾಟಕ ಮಾಡಿದ ಆರೋಪಿ ಅಲ್ಲಿಂದ ಪರಾರಿಯಾಗಿದ್ದ’ ಎಂದು ಮೂಲಗಳು ತಿಳಿಸಿವೆ.
‘ನಂತರ ಯುವತಿಯೊಂದಿಗೆ ಕಾಕತಿ ಠಾಣೆಗೆ ಬಂದ ಚಿಕ್ಕಪ್ಪ ದೂರು ದಾಖಲಿಸಿದರು. ಶೀಘ್ರ ವಿಶೇಷ ತಂಡ ರಚಿಸಿದ ಪೊಲೀಸರು ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಿದರು. ಯುವತಿಯನ್ನು ವೈದ್ಯಕೀಯ ತಪಾಸಣೆಗೆ ಕಳುಹಿಸಲಾಗಿದೆ’ ಎಂದು ಪೊಲೀಸರು ತಿಳಿಸಿದ್ದಾರೆ.
ಡಿಸಿಪಿ ಸ್ನೇಹಾ ಸ್ಥಳಕ್ಕೆ ಭೇಟಿ ನೀಡಿದ್ದು, ಯುವತಿಯಿಂದ ಮಾಹಿತಿ ಪಡೆದರು. ಘಟನೆ ನಡೆದ ಗ್ರಾಮದಲ್ಲಿ ಹಿಂದೂ ಯುವಕರು ಗುಂಪಾಗಿ ಸೇರಿದ್ದರಿಂದ ವಾತಾವರಣ ಬಿಗುವಿನಿಂದ ಕೂಡಿದೆ. ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ.
ಅತ್ಯಾಚಾರ ಯತ್ನ: ಗ್ರಾಮದಲ್ಲಿ ಬಂದೋಬಸ್ತ್
ಬೆಳಗಾವಿ: ಅನ್ಯಕೋಮಿನ ವ್ತಕ್ತಿಯಿಂದ ಬುದ್ಧಿಮಾಂದ್ಯ ಯುವತಿ ಮೇಲೆ ಅತ್ಯಾಚಾರ ಯತ್ನ ನಡೆದ, ಕಾಕಾತಿ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಗ್ರಾಮದಲ್ಲಿ ಗುಂಪಾಗಿ ಸೇರಿದ್ದ ಹಿಂದೂ ಯುವಕರನ್ನು ಪೊಲೀಸರು ಚದುರಿಸಿದರು.
ಗ್ರಾಮ ಹಿರಿಯರು, ಹಲವು ಮಹಿಳೆಯರು ಕೂಡ ಗ್ರಾಮ ಪಂಚಾಯಿತಿ ಎದುರು ಸೇರಿ ಘಟನೆಯನ್ನು ತೀವ್ರವಾಗಿ ಖಂಡಿಸಿದರು. ಆರೋಪಿಗೆ ಉಗ್ರ ಶಿಕ್ಷೆ ಕೊಡಿಸಬೇಕು ಎಂದು ಪಟ್ಟು ಹಿಡಿದರು.
ಜನ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರಿಂದ ಸ್ಥಳಕ್ಕೆ ಧಾವಿಸಿದ ಡಿಸಿಪಿಗಳಾದ ರೋಹನ್ ಜಗದೀಶ್ ಹಾಗೂ ಪಿ.ವಿ.ಸ್ನೇಹಾ, ಮಹಿಳೆಯರನ್ನು ಸಮಾಧಾನ ಮಾಡಲು ಯತ್ನಿಸಿದರು. ಆರೋಪಿಯನ್ನು ಈಗಾಗಲೇ ಬಂಧಿಸಲಾಗಿದೆ. ಸಂತ್ರಸ್ತೆಗೆ ನ್ಯಾಯ ಕೊಡಿಸಲಾಗುವುದು. ಜನರ ಕಾನೂನು ಕ್ರಮಕ್ಕೆ ಸಹಕರಿಸಬೇಕು ಎಂದು ಕೋರಿದರು.
ಒಂದು ಡಿ.ಆರ್ ವಾಹನ ಹಾಗೂ ಹಲವು ಪೊಲೀಸರು ಸ್ಥಳದಲ್ಲಿ ಬೀಡು ಬಿಟ್ಟಿದ್ದಾರೆ. ಆರೋಪಿ ಮನೆಯ ಎದುರೂ ಕಾವಲು ನಿಲ್ಲಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.