ಕಾಗವಾಡ: ಅಥಣಿ ತಾಲ್ಲೂಕಿನ ನಾಗನೂರು ಪಿಎ ಗ್ರಾಮದ ಸಂಜಯ ಕಾಂಬಳೆ ಎಂಬುವವರ ಇಬ್ಬರು ಮಕ್ಕಳು ಅಗ್ರಾಣಿ ಹಳ್ಳ ದಾಟುವ ವೇಳೆ ಮೃತಪಟ್ಟಿದ್ದು, ಶನಿವಾರ ಅವರ ಕುಟುಂಬವನ್ನು ಶಾಸಕ ರಾಜು ಕಾಗೆ ಭೇಟಿ ಮಾಡಿ ಸಾಂತ್ವನ ಹೇಳಿ ಪರಿಹಾರ ವಿತರಿಸಿದರು.
ಈ ದುರ್ಘಟನೆಯಲ್ಲಿ ನಾಗನೂರ ಪಿಎ ಗ್ರಾಮದ ಬಾಲಕರಾದ ಗಣೇಶ ಕಾಂಬಳೆ ಹಾಗೂ ದೀಪಕ ಕಾಂಬಳೆ ಇಬ್ಬರು ಮೃತಪಟ್ಟಿದ್ದರು. ಸಂಜಯಕಾಂಬಳೆಗೆ ಸೇರಿದ ಒಂದು ಎತ್ತು ಕೂಡ ಮೃತಪಟ್ಟಿತ್ತು. ಅವರ ಕುಟುಂಬಕ್ಕೆ ಸರ್ಕಾರದಿಂದ ₹ 10 ಲಕ್ಷ ಪರಿಹಾರದ ಆದೇಶ ಪ್ರತಿಯನ್ನು ಕುಟುಂಬಕ್ಕೆ ಶಾಸಕ ರಾಜು ಕಾಗೆ ಹಸ್ತಾಂತರಿಸಿದರು.
‘ಇಂದೇ ಮೃತ ಕುಟುಂಬಕ್ಕೆ ಪರಿಹಾರದ ಹಣ ಅವರ ಖಾತೆಗೆ ಜಮೆಯಾಗಲಿದೆ. ಈಗಾಗಲೇ ಈ ಹಳ್ಳಕ್ಕೆ ಸೇತುವೆ ಹಾಗೂ ರಸ್ತೆ ನಿರ್ಮಾಣ ಮಾಡಲು ನಾನು, ತಹಶೀಲ್ದಾರ್, ಪೊಲೀಸ್ ಇಲಾಖೆ ಅಧಿಕಾರಿಗಳು ಹಲವು ಬಾರಿ ಗ್ರಾಮಸ್ಥರ ಮನವೊಲಿಸಲು ಮುಂದಾದರೂ ರಸ್ತೆ ನಿರ್ಮಾಣಕ್ಕೆ ಸಹಕಾರ ನೀಡಿಲ್ಲ. ಈ ಘಟನೆಗೆ ಗ್ರಾಮಸ್ಥರೇ ನೇರ ಕಾರಣ. ಈಗಲಾದರೂ ಗ್ರಾಮಸ್ಥರು ಸೇತುವೆ ಮತ್ತು ರಸ್ತೆ ನಿರ್ಮಾಣಕ್ಕೆ ಸಹಕಾರ ನೀಡಬೇಕು’ ಎಂದರು.
ಈ ವೇಳೆ ತಹಶೀಲ್ದಾರ್ ಸಿದರಾಯ ಬೋಸಗಿ, ಪಂಚಾಯತ್ ರಾಜ್ ಎಇಇ ಈರಣ್ಣ ವಾಲಿ, ಮುಖಂಡರಾದ ವಿನಾಯಕ ಬಾಗಡಿ, ಖಂಡೇರಾವ ಘೋರ್ಪಡೆ ಸೇರಿದಂತೆ ಗ್ರಾಮದ ಮುಖಂಡರು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.