ADVERTISEMENT

ಆಯುಕ್ತರ ವಿರುದ್ಧ ರಾಜ್ಯಪಾಲರಿಗೆ ದೂರು: ಶಾಸಕ ಅಭಯ ಪಾಟೀಲ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2025, 11:44 IST
Last Updated 11 ಫೆಬ್ರುವರಿ 2025, 11:44 IST
<div class="paragraphs"><p>ಶಾಸಕ ಅಭಯ ಪಾಟೀಲ</p></div>

ಶಾಸಕ ಅಭಯ ಪಾಟೀಲ

   

ಬೆಳಗಾವಿ: ‘ರಾಜಕೀಯ ಒತ್ತಡದ ಹಿನ್ನೆಲೆಯಲ್ಲಿ ಪ್ರಾದೇಶಿಕ ಆಯುಕ್ತ ಎಸ್‌.ಬಿ.ಶೆಟ್ಟೆಣ್ಣವರ ಅವರು, ಪಾಲಿಕೆ ಸದಸ್ಯರಾದ ಜಯಂತ್‌ ಜಾಧವ, ಮಂಗೇಶ ಪವಾರ ಅವರ ಸದಸ್ಯತ್ವ ಅನರ್ಹಗೊಳಿಸಿದ್ದಾರೆ. ಅವರ ವಿರುದ್ಧ ರಾಜ್ಯಪಾಲರಿಗೆ ದೂರು ಕೊಡುತ್ತೇವೆ’ ಎಂದು ಶಾಸಕ ಅಭಯ ಪಾಟೀಲ ಹೇಳಿದರು.

ಇಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಇಬ್ಬರು ಸದಸ್ಯರ ಸದಸ್ಯತ್ವ ಅನರ್ಹಗೊಳಿಸಿದ ಆದೇಶ ಪ್ರತಿ ತೆಗೆದುಕೊಂಡು ಕೇಂದ್ರ ಸರ್ಕಾರದ ವ್ಯಾಪ್ತಿಯಲ್ಲಿರುವ ಐಎಎಸ್ ಅಧಿಕಾರಿಗೆ ಸಂಬಂಧಿಸಿದ ಕಚೇರಿಗೆ ದೂರು ನೀಡುತ್ತೇವೆ. ಇದೊಂದೇ ಪ್ರಕರಣವಲ್ಲ; ಶೆಟ್ಟೆಣ್ಣವರ ತಮ್ಮ ಅಧಿಕಾರವಧಿಯಲ್ಲಿ ಕೈಗೊಂಡ ಕಾನೂನುಬಾಹಿರ ಕೆಲಸಗಳ ಕುರಿತಾಗಿ ತನಿಖೆಗೆ ಆಗ್ರಹಿಸುತ್ತೇವೆ’ ಎಂದು ತಿಳಿಸಿದರು.

ADVERTISEMENT

‘ಜಯಂತ್‌ ಜಾಧವ ಮತ್ತು ಮಂಗೇಶ ಪವಾರ ಪಾಲಿಕೆ ಸದಸ್ಯರಾಗುವ ಮುನ್ನ, ತಿನಿಸು ಕಟ್ಟೆ ನಿರ್ಮಾಣವಾಗಿ ಮಳಿಗೆಗಳ ಹಂಚಿಕೆಯಾಗಿದೆ. ಮಳಿಗೆ ಬಾಡಿಗೆಗೆ ಪಡೆದ ಎರಡು ವರ್ಷಗಳ ನಂತರ ಪಾಲಿಕೆ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಹೀಗಿರುವಾಗ ಅವರ ಪತ್ನಿಯರ ಹೆಸರಿನಲ್ಲಿ ಮಳಿಗೆ ಬಾಡಿಗೆಗೆ ಪಡೆದಿದ್ದಾರೆ ಎಂದು ಸದಸ್ಯತ್ವ ಅನರ್ಹಗೊಳಿಸುವುದು ಕರ್ನಾಟಕ ಮುನ್ಸಿಪಲ್‌ ಕಾಯ್ದೆಗೆ ಅನ್ವಯಿಸುವುದಿಲ್ಲ’ ಎಂದರು.

‘ಯಾರಾದರೂ ಸದಸ್ಯರಾಗಿ ಆಯ್ಕೆಯಾದ ನಂತರ, ಮಹಾನಗರ ಪಾಲಿಕೆ ಆಸ್ತಿಯನ್ನು ಬಾಡಿಗೆಗೆ ಪಡೆದಿದ್ದರೆ ಅಥವಾ ಈ ಪ್ರಕರಣದಲ್ಲಿ ಆಸ್ತಿಯು ಮಹಾನಗರ ಪಾಲಿಕೆ ವ್ಯಾಪ್ತಿಗೆ ಸೇರಿದ್ದರೆ, ಕರ್ನಾಟಕ ಮುನ್ಸಿಪಲ್‌ ಕಾಯ್ದೆ ಅನ್ವಯವಾಗುತ್ತಿತ್ತು. ಆದರೆ, ತಿನಿಸು ಕಟ್ಟೆಯನ್ನು ಮಹಾನಗರ ಪಾಲಿಕೆ ನಿರ್ಮಿಸಿಲ್ಲ. ಬದಲಿಗೆ ಲೋಕೋಪಯೋಗಿ ಇಲಾಖೆ ಅನುದಾನದಲ್ಲಿ ಕಟ್ಟಲಾಗಿದೆ. ಹೀಗಿರುವಾಗ ಶೆಟ್ಟೆಣ್ಣವರ ಅವರೇ ಒಂದು ಹೊಸ ಕಾಯ್ದೆ ಮಾಡಿದ್ದಾರೆ. ಈ ನಿರ್ಣಯವನ್ನು ಯಾರು ಒಪ್ಪುತ್ತಾರೆ’ ಎಂದು ಪ್ರಶ್ನಿಸಿದರು.

‘ಪ್ರಾದೇಶಿಕ ಆಯುಕ್ತರು ರಾಜಕೀಯ ಪ್ರೇರಿತವಾಗಿ ಕೆಲಸ ಮಾಡಿದ್ದಾರೆ. ಇಬ್ಬರು ಸದಸ್ಯರ ಪರವಾಗಿ ಕಾನೂನಾತ್ಮಕ ಹೋರಾಟ ಮಾಡುವ ಬಗ್ಗೆ ಚರ್ಚಿಸುತ್ತೇವೆ’ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ಈ ಪ್ರಕರಣದಲ್ಲಿ ಯಾವ ರಾಜಕಾರಣಿ ರಾಜಕೀಯ ಮಾಡಿದ್ದಾರೆ’ ಎಂಬ ಪ್ರಶ್ನೆಗೆ ಉತ್ತರಿಸಲು ನಿರಾಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.