ADVERTISEMENT

ಸ್ವಾರ್ಥಕ್ಕಾಗಿ ಹಿಂದುಳಿದ ವರ್ಗ ಬಳಸಿಕೊಂಡ ಕಾಂಗ್ರೆಸ್: ಗೋವಿಂದ ಕಾರಜೋಳ ಟೀಕೆ‌

ಗೋವಿಂದ ಕಾರಜೋಳ ಟೀಕೆ

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2021, 12:30 IST
Last Updated 3 ಏಪ್ರಿಲ್ 2021, 12:30 IST
ಬೆಳಗಾವಿಯಲ್ಲಿ ಶನಿವಾರ ನಡೆದ ಬಿಜೆಪಿ ಮುಖಂಡರ ಸಭೆಯಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿದರು
ಬೆಳಗಾವಿಯಲ್ಲಿ ಶನಿವಾರ ನಡೆದ ಬಿಜೆಪಿ ಮುಖಂಡರ ಸಭೆಯಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಮಾತನಾಡಿದರು   

ಬೆಳಗಾವಿ: ‘ಪ್ರಪಂಚವೇ ಮೆಚ್ಚುವಂಥ ಸಂವಿಧಾನ ನೀಡಿದ ಡಾ.ಬಿ.ಆರ್‌. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಹೀನಾಯವಾಗಿ ಸೋಲಿಸಿ, ಅವರ ಸಮಾಧಿಗೆ ದೆಹಲಿಯಲ್ಲಿ ಸ್ಥಳಾವಕಾಶ ಮಾಡಿಕೊಡದ ಕಾಂಗ್ರೆಸ್ ನಿಲುವನ್ನು ಹಿಂದುಳಿದ ವರ್ಗಗಳ ಜನರು ಎಂದಿಗೂ ಮರೆಯಬಾರದು’ ಎಂದು ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದರು.

ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಶನಿವಾರ ನಡೆದ ಬಿಜೆಪಿ ಪರಿಶಿಷ್ಟ ಜಾತಿ ಹಾಗೂ ಪಂಗಡ ಮೋರ್ಚಾ ಪದಾಧಿಕಾರಿಗಳು ಮತ್ತು ಮುಖಂಡರ ಸಭೆಯಲ್ಲಿ ಅವರು ಮಾತನಾಡಿದರು.

‘ತುಳಿತಕ್ಕೆ ಒಳಗಾದ, ಅವಕಾಶ ವಂಚಿತ ಪರಿಶಿಷ್ಟ ಪಂಗಡ ಮತ್ತು ಪರಿಶಿಷ್ಟ ಜಾತಿಯ ಜನರು ಮೀಸಲಾತಿ ಪಡೆದು ಮುಖ್ಯವಾಹಿನಿಗೆ ಬರಬೇಕೆಂಬ ಸದುದ್ದೇಶದಿಂದ ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಮೀಸಲಾತಿ ಕಲ್ಪಿಸಿದರು. ಅದನ್ನು ಸರಿಯಾಗಿ ಜಾರಿ ಮಾಡಿದೆ 60 ವರ್ಷ ದೇಶವನ್ನಾಳಿದ ಕಾಂಗ್ರೆಸ್ ತನ್ನ ಸ್ವಾರ್ಥಕ್ಕಾಗಿ ಹಿಂದುಳಿದ ವರ್ಗದವರನ್ನು ಬಳಸಿಕೊಂಡಿತು. ಈ ಜನರ ಅಭಿವೃದ್ಧಿ ಮರೆಮಾಚಿತು. ಇದೆಲ್ಲವೂ ಅರಿವಾಗಿರುವುದರಿಂದ, ಆ ಪಕ್ಷಕ್ಕೆ ಹಿಂದುಳಿದ ವರ್ಗದವರ ಮತಗಳು ಸಿಗುತ್ತಿಲ್ಲ. ಹೀಗಾಗಿ, ಕಾಂಗ್ರೇಸ್ ಅನಾಥ ಪಕ್ಷವಾಗಿದೆ’ ಎಂದರು.

ADVERTISEMENT

ಪಕ್ಷದ ಗ್ರಾಮಾಂತರ ಜಿಲ್ಲಾ ಘಟಕದ ಅಧ್ಯಕ್ಷ ಸಂಜಯ ಪಾಟೀಲ, ‘ಸರ್ವ ಜನಾಂಗಕ್ಕೆ ಸಮಾನ ಅವಕಾಶಗಳನ್ನು ನೀಡಿ ಎಲ್ಲರನ್ನೂ ಒಗ್ಗಟ್ಟಾಗಿ ಕರೆದುಕೊಂಡು ಹೋಗುವ ಪಕ್ಷವಿದ್ದರೆ ಅದು ಬಿಜೆಪಿ’ ಎಂದು ತಿಳಿಸಿದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಮಾತನಾಡಿ, ‘ದೇಶದಲ್ಲಿ ಅತಿ ಹೆಚ್ಚಿನ ಸಂಸದರು ಮತ್ತು ಶಾಸಕರು ಬಿಜೆಪಿಯವರಾಗಿದ್ದಾರೆ. ರಾಜ್ಯ ಬಿಜೆಪಿ ಸರ್ಕಾರದಲ್ಲಿ ಹಿಂದುಳಿದ ವರ್ಗದವರಿಗೆ ಆದ್ಯತೆ ನೀಡಲಾಗಿದೆ. ಪಕ್ಷದಲ್ಲೂ ಪದಾಧಿಕಾರಿಗಳ ಜವಾಬ್ದಾರಿ ಕೊಡಲಾಗಿದೆ’ ಎಂದು ಹೇಳಿದರು.

ಬಿಜೆಪಿ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಮಹೇಶ ಟೆಂಗಿನಕಾಯಿ, ಎಸ್ಸಿ, ಎಸ್ಟಿ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷ ಜಿತೇಂದ್ರ ಮಾದರ, ಚಂದ್ರು ಅಳಗೊಡಿ ಮಾತನಾಡಿದರು. ಮುಖಂಡರಾದ ಶಶಿಕಾಂತ ನಾಯಕ, ಪೃಥ್ವಿಸಿಂಗ್, ಪ್ರಕಾಶ ಅಕ್ಕಲಕೋಟ, ಹನುಮಂತ ಕಾಗಲಕರ, ರಾಜು ಕಾಳೆನಟ್ಟಿ, ಮಹೇಶ ಮೋಹಿತೆ, ದಾದಾಗೌಡ ಬಿರಾದಾರ, ಮುರಘೇಂದ್ರಗೌಡ ಪಾಟೀಲ, ಜಿಲ್ಲಾ ಪಂಚಾಯ್ತಿ ಸದಸ್ಯ ಬಸವರಾಜ ಬಂಡಿವಡ್ಡರ, ಅಶೋಕ ಚಲವಾದಿ ಇದ್ದರು.

ಎಸ್ಸಿ ಮೋರ್ಚಾ ಮಹಾನಗರ ಘಟಕದ ಅಧ್ಯಕ್ಷ ಮಂಜುನಾಥ ಪಮ್ಮಾರ ಸ್ವಾಗತಿಸಿದರು. ಯಲ್ಲೇಶ ಕೋಲಕಾರ ನಿರೂಪಿಸಿದರು. ಕಮಲಾಕರ ಕೋಲಕಾರ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.