ADVERTISEMENT

ಕಾಂಗ್ರೆಸ್‌ ಸತ್ತು ಹೋಗಿದೆ: ಈಶ್ವರಪ್ಪ ಟೀಕೆ

​ಪ್ರಜಾವಾಣಿ ವಾರ್ತೆ
Published 31 ಆಗಸ್ಟ್ 2021, 14:48 IST
Last Updated 31 ಆಗಸ್ಟ್ 2021, 14:48 IST
ಕೆ.ಎಸ್. ಈಶ್ವರಪ್ಪ
ಕೆ.ಎಸ್. ಈಶ್ವರಪ್ಪ   

ಬೆಳಗಾವಿ: ‘ದೇಶ ಮತ್ತು ರಾಜ್ಯದಲ್ಲಿ ಕಾಂಗ್ರೆಸ್ ಸತ್ತು ಹೋಗಿದೆ. ಇಲ್ಲಿನ ಮಹಾನಗರಪಾಲಿಕೆಯಲ್ಲೂ ಅಧಿಕಾರಕ್ಕೆ ಬರುವುದಿಲ್ಲ. ಹೀಗಿರುವಾಗ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಅವರು ದಿ.ಸುರೇಶ ಅಂಗಡಿ ಶವಸಂಸ್ಕಾರದ ಬಗ್ಗೆ ಹೀನಾಯವಾಗಿ ಮಾತಾಡಿದ್ದರಿಂದ ನೋವಾಗಿದೆ’ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.

ಪಾಲಿಕೆ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರಕ್ಕೆ ಬಂದಿದ್ದ ಅವರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಂಗಳವಾರ ಮಾತನಾಡಿದರು.

‘ಈ ಚುನಾವಣೆಯಲ್ಲಿ ನಾವೇನು ಮಾಡುತ್ತೇವೆ ಎನ್ನುವುದನ್ನು ಅವರು ಹೇಳಬೇಕಿತ್ತು. ಅದನ್ನು ಬಿಟ್ಟು ಅಂಗಡಿ ಅಂತ್ಯಸಂಸ್ಕಾರದ ವಿಷಯದಲ್ಲಿ ಬಿಜೆಪಿ ಹೀನಾಯವಾಗಿ ನಡೆದುಕೊಂಡಿತು ಎಂದು ಹೇಳಿದ್ದು ಸರಿಯಲ್ಲ. ಆ ವಿಷಯದಲ್ಲೂ ರಾಜಕಾರಣ ಮಾಡುತ್ತಾರಲ್ಲಾ? ಅಂಗಡಿ ಕುಟುಂಬದವರ ಜೊತೆಗೆ ನಾಯಕರು ಮಾತನಾಡಿ ತೀರ್ಮಾನ ತೆಗೆದುಕೊಂಡಿದ್ದರು. ಕಾಂಗ್ರೆಸ್‍ಗೆ ಶವಸಂಸ್ಕಾರದ ಬಗ್ಗೆ ಆಸಕ್ತಿ ಬಹಳ ಜಾಸ್ತಿ. ಸತ್ತು ಹೋಗಿರುವ ಕಾಂಗ್ರೆಸ್ ಅಂತ್ಯಸಂಸ್ಕಾರದ ಬಗ್ಗೆ ಮಾತಾಡದೇ ಇನ್ಯಾರು ಮಾತನಾಡುತ್ತಾರೆ?’ ಎಂದು ಹರಿಹಾಯ್ದರು.

ADVERTISEMENT

‘ಶಿವಕುಮಾರ್ ಅವರಿಗೆ ಸ್ಮಾರ್ಟ್ ಸಿಟಿ ಯೋಜನೆಯ ಬಗ್ಗೆ ಕಲ್ಪನೆಯೇ ಇಲ್ಲ. ಇದು ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಂತೆ ಅಲ್ಲ. ಸಾಮಾನ್ಯ ಜನರಿಗೆ ಏನು ಬೇಕೆಂದು ಚರ್ಚಿಸಿ ಕಾಮಗಾರಿಗಳನ್ನು ತೆಗೆದುಕೊಳ್ಳಲಾಗುತ್ತದೆ. ಅವರು ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಮಾಮೂಲಿ. ತಿಹಾರ್ ಜೈಲಿನಲ್ಲಿ ಇದ್ದು ಬಂದವರಲ್ಲವೇ ಅವರಿಗೆ ಹೇಗೆ ಭ್ರಷ್ಟಾಚಾರ ಮಾಡಬೇಕು ಎನ್ನುವುದು ಗೊತ್ತಿದೆ’ ಎಂದು ಟೀಕಿಸಿದರು.

‘ಶವಸಂಸ್ಕಾರಕ್ಕೆ ಉಚಿತ ವ್ಯವಸ್ಥೆ ಮಾಡಲಾಗುವುದು’ ಎಂಬ ಬಿಜೆಪಿ ಪ್ರಣಾಳಿಕೆ ಬಗ್ಗೆ ಕಾಂಗ್ರೆಸ್ ವ್ಯಂಗ್ಯ ಮಾಡಿರುವುದಕ್ಕೆ ತಿರುಗೇಟು ನೀಡಿದ ಅವರು, ‘ಕಾಂಗ್ರೆಸ್ ಸರ್ಕಾರ ಇದ್ದಾಗ ದೇಶದಲ್ಲಿ ಯಾರೂ ಸತ್ತಿಲ್ಲವೇ, ಸಂಸ್ಕಾರ ಮಾಡಿಲ್ಲವೇ? ಕಾಂಗ್ರೆಸ್ ಆಡಳಿತವಿದ್ದರೆ ಜನರು ಚಿರಂಜೀವಿಗಳಾ? ಕಾಂಗ್ರೆಸ್‍ನವರ ಇಂತಹ ಹೇಳಿಕೆಗಳಿಂದಲೇ ಅವರನ್ನು ಜನರು ಸೋಲಿಸಿದ್ದಾರೆ’ ಎಂದರು.

‘ಇಲ್ಲಿ ಪ್ರಚಾರಕ್ಕೆ ಸಿದ್ದರಾಮಯ್ಯ ಬರಲಿಲ್ಲವೇಕೆ. ಸೋಲುತ್ತೇವೆ ಎಂದು ಗೊತ್ತಿರುವುದರಿಂದ ಕಾಂಗ್ರೆಸ್‌ನ ನಾಯಕರು ಬೆಳಗಾವಿಗೆ ಬಂದಿಲ್ಲ. ಬೆಳಗಾವಿ, ಕಲಬುರ್ಗಿ ಹಾಗೂ ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಗಳಿಸುತ್ತದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

‘ಬೆಳಗಾವಿ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಬಿಜೆಪಿ ಸ್ವತಂತ್ರವಾಗಿ ಸ್ಪರ್ಧೆ ಮಾಡಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾಡಿದ ಕೆಲಸಗಳ ಮೇಲೆ ಜನರು ಬೆಂಬಲ ನೀಡುತ್ತಿದ್ದಾರೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.