ADVERTISEMENT

ಕಾಂಗ್ರೆಸ್‌ನವರು ಮೂರ್ಖರು: ಅರುಣ್ ಸಿಂಗ್ ವಾಗ್ದಾಳಿ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 14:02 IST
Last Updated 9 ಏಪ್ರಿಲ್ 2021, 14:02 IST
ಅರುಣ್ ಸಿಂಗ್
ಅರುಣ್ ಸಿಂಗ್   

ಬೆಳಗಾವಿ: ‘ದೇಶದ ಕೆಲವರು ರೈತರ ಹೆಸರಿನಲ್ಲಿ, ಕಾಂಗ್ರೆಸ್ ಪ್ರಾಯೋಜಕತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಹೋರಾಟ ನಡೆಸುತ್ತಿದ್ದಾರೆ. ಅಸಲಿ ರೈತರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಇದ್ದಾರೆ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಹೇಳಿದರು.

ಇಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕಾಂಗ್ರೆಸ್‌ನವರು ಮೂರ್ಖರಿದ್ದಾರೆ. ಯಾವುದೇ ಅಂಕಿ– ಅಂಶಗಳಿಲ್ಲದೆ ಸುಳ್ಳು ಹೇಳುತ್ತಿದ್ದಾರೆ’ ಎಂದು ಕಿಡಿಕಾರಿದರು.

‘ಏ. 17ರಂದು ನಡೆಯುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಬಿಜೆಪಿ ಹಿಂದಿಗಿಂತಲೂ ಹೆಚ್ಚಿನ ಅಂತರದಿಂದ ಗೆಲ್ಲಲಿದೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ADVERTISEMENT

‘ಉಪ ಚುನಾವಣೆ ಬಳಿಕ ರಾಜ್ಯದಲ್ಲಿ ನಾಯಕತ್ವ ಬದಲಾವಣೆ’ ಎಂಬ ಬಸನಗೌಡ ಪಾಟೀಲ ಯತ್ನಾಳ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ‘ಹೌದು ಬದಲಾವಣೆ ಆಗುತ್ತದೆ. ಬಿಜೆಪಿ ಮತ್ತಷ್ಟು ಬಲಿಷ್ಠವಾಗುವುದೇ ಆ ಬದಲಾವಣೆ. ಮೂರೂ ಕ್ಷೇತ್ರಗಳಲ್ಲಿ ಬಿಜೆಪಿ ಗೆದ್ದು ಮತ್ತಷ್ಟು ಶಕ್ತಿ ಗಳಿಸಲಿದೆ. ಸರ್ಕಾರ ಮತ್ತಷ್ಟು ಗಟ್ಟಿಯಾಗಿ ಉತ್ಸಾಹದಿಂದ ಕಾರ್ಯಕರ್ತರು ಕೆಲಸ ಮಾಡುತ್ತಾರೆ’ ಎಂದು ಹೇಳಿದರು.

‘ಬಿ.ಎಸ್. ಯಡಿಯೂರಪ್ಪ ಅವರು ಉತ್ತಮ ಯೋಜನೆಗಳ ಮೂಲಕ ಒಳ್ಳೆಯ ರೀತಿಯಲ್ಲಿ ಸರ್ಕಾರ ನಡೆಸುತ್ತಿದ್ದಾರೆ’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

‘ಕಾಂಗ್ರೆಸ್ ನಾಯಕತ್ವ ವಿಫಲವಾಗಿದೆ. ರಾಹುಲ್ ಗಾಂಧಿ ಮೇಲೆ ಆ ಪಕ್ಷದ ನಾಯಕರಿಗೂ ಭರವಸೆ ಇಲ್ಲ. ವಿನಾಶದತ್ತ ಸಾಗುತ್ತಿದೆ’ ಎಂದು ಟೀಕಿಸಿದರು.

‘ದೇಶದಲ್ಲಿ ಆಡಳಿತ ವಿರೋಧಿ ಅಲೆ ಇಲ್ಲ. ಆಡಳಿತ ಪರವಾದ ಅಲೆ ಇದೆ’ ಎಂದು ಸಮರ್ಥಿಸಿಕೊಂಡರು.

ಸಚಿವ ಕೆ.ಎಸ್. ಈಶ್ವರಪ್ಪ ಅಸಮಾಧಾನ ಬಗ್ಗೆ ಪ್ರತಿಕ್ರಿಯಿಸಿದ ಅವರು, ‘ಬಿಜೆಪಿ ದೊಡ್ಡ ಪರಿವಾರ. ಸಣ್ಣ ಪುಟ್ಟ ಸಮಸ್ಯೆ ಬಂದಾಗ ಮಾತುಕತೆ ನಡೆಸಿ ಪರಿಹರಿಸುತ್ತೇವೆ. ಯಡಿಯೂರಪ್ಪ-ಈಶ್ವರಪ್ಪ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಾರೆ. ನಾವಿಬ್ಬರೂ ಒಂದೇ ಎಂದು ಸ್ವತಃ ಈಶ್ವರಪ್ಪ ಅವರೇ ಹೇಳಿದ್ದಾರೆ’ ಎಂದು ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.