ADVERTISEMENT

ರಾಜ್ಯ ರೈತ ಸಂಘಕ್ಕೆ ಸಂವಿಧಾನ: ಬಡಗಲಪುರ ನಾಗೇಂದ್ರ

​ಪ್ರಜಾವಾಣಿ ವಾರ್ತೆ
Published 5 ಜುಲೈ 2021, 12:24 IST
Last Updated 5 ಜುಲೈ 2021, 12:24 IST
ಬಡಗಲಪುರ ನಾಗೇಂದ್ರ
ಬಡಗಲಪುರ ನಾಗೇಂದ್ರ   

ಬೆಳಗಾವಿ: ‘ರಾಜ್ಯ ರೈತ ಸಂಘಕ್ಕೆ ಸಂವಿಧಾನ ರೂಪಿಸಲಾಗುವುದು. ಅದರ ಪ್ರಕಾರವೇ ಪದಾಧಿಕಾಗಳ ಆಯ್ಕೆ ಮೊದಲಾದ ಪ್ರಕ್ರಿಯೆಗಳನ್ನು ನಡೆಸಲಾಗುವುದು’ ಎಂದು ಅಧ್ಯಕ್ಷ ಬಡಗಲಪುರ ನಾಗೇಂದ್ರ ತಿಳಿಸಿದರು.

ರೈತ ಸಂಘದಿಂದ ಇಲ್ಲಿನ ಕೆಪಿಟಿಸಿಎಲ್‌ ಭವನದಲ್ಲಿ ಸೋಮವಾರ ಆಯೋಜಿಸಿದ್ದ ‘ರೈತ ನಾಯಕ, ಕೇಂದ್ರದ ಮಾಜಿ ಸಚಿವ ಬಾಬಾಗೌಡ ಪಾಟೀಲ ನೆನಪು ಮತ್ತು ಶ್ರದ್ಧಾಂಜಲಿ’ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

‘ಮುಂದಿನ ಹೋರಾಟಗಳ ರೂಪರೇಷೆಗಳನ್ನು ಸಿದ್ಧಪಡಿಸುತ್ತಿದ್ದೇವೆ. ಸಾಮಾಜಿಕ ಮಾಧ್ಯಮವನ್ನೂ ಪರಿಣಾಮಕಾರಿ ಬಳಸಿಕೊಳ್ಳಲಾಗುವುದು. ಹಳ್ಳಿಗಳಲ್ಲಿ, ಮೂಲೆ ಮೂಲೆಗಳಲ್ಲಿ ನಡೆಯುವ ಹೋರಾಟಗಳು ಎಲ್ಲ ಕಡೆಗೂ ತಿಳಿಯಬೇಕು. ಇದಕ್ಕಾಗಿ ಸಾಮಾಜಿಕ ಮಾಧ್ಯಮ ಉಪಯೋಗಿಸಿಕೊಳ್ಳಲಾಗುವುದು’ ಎಂದರು.

ADVERTISEMENT

‘ಬಾಬಾಗೌಡ ಪಾಟೀಲರ ವಿಷಯದಲ್ಲಿ ಸರ್ಕಾರ ಅಗೌರವ ತೋರಿದೆ. ಅವರು ಮಾಜಿ ಶಾಸಕ, ಮಾಜಿ ಸಂಸದ ಆಗಿದ್ದರು. ಕೇಂದ್ರದಲ್ಲಿ ಸಚಿವರೂ ಆಗಿದ್ದರು. ಆದರೆ, ಅವರ ಅಂತ್ಯಕ್ರಿಯೆ ವೇಳೆ ಸರ್ಕಾರಿ ಗೌರವ ನೀಡದಿರುವುದು ಅತ್ಯಂತ ಖಂಡನೀಯ. ಸಂಘದಿಂದ ಸರ್ಕಾರಕ್ಕೆ ಖಂಡನಾ ಪತ್ರ ಬರೆಯಲಾಗುವುದು. ಬಾಬಾಗೌಡರ ಬಗ್ಗೆ ಅರ್ಥಪೂರ್ಣ ಅಭಿನಂದನಾ ಗ್ರಂಥ ಹೊರತರಲು ಸಮಿತಿ ರಚಿಸಲಾಗುವುದು. ಪ್ರತಿಮೆ ಸ್ಥಾಪನೆ ಮತ್ತು ವೃತ್ತಕ್ಕೆ ನಾಮಕರಣದ ಬಗ್ಗೆ ಜಿಲ್ಲಾ ಘಟಕದವರು ಹೋರಾಡಬೇಕು’ ಎಂದು ತಿಳಿಸಿದರು.

‘ನಾವು (ರೈತ ಸಂಘದವರು) ಮಾಡಿರುವ ತಪ್ಪುಗಳನ್ನು ತಿದ್ದಿಕೊಂಡು ಸಂಘಟನೆ ಬಲಗೊಳಿಸಬೇಕಾಗಿದೆ. ರೈತ ಚಳವಳಿಯ ಬೇರು ಗಟ್ಟಿಯಾಗಿದೆ. ಅದನ್ನು ಉಳಿಸಿಕೊಳ್ಳಬೇಕು. ಇದಕ್ಕಾಗಿ ನಾಯಕರೆಲ್ಲರೂ ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ’ ಎಂದರು.

‘ಹಸಿರು ಟವೆಲ್ ಈಗ ಗಾಂಧಿ ಟೋಪಿಯಂತಾಗಿದೆ. ಎಲ್ಲರೂ ಹಾಕುತ್ತಾರೆ. ಆ ಟವೆಲ್‌ ಹಾಕಿಕೊಂಡು ಕಚಡಾ ಕೆಲಸ ಮಾಡಬಾರದು.‌ ಮರಳು ದಂಧೆ ನಡೆಸುವವರು, ಸರ್ಕಾರಿ ಅಧಿಕಾರಿಗಳ ಕಚೇರಿಗಳಲ್ಲಿ ಕಮಿಷನ್‌ಗಾಗಿ ಹೋಗುವವರು ಕೂಡ ಹಾಕಿಕೊಳ್ಳುತ್ತಿದ್ದಾರೆ’ ಎಂದು ವಿಶ್ಲೇಷಿಸಿದರು.

‘ಸಂಘದ ಬಣಗಳು ಒಗ್ಗೂಡಬೇಕು ಎನ್ನುವುದು ಸರಿ. ಆದರೆ, ವ್ಯಕ್ತಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡರೆ ಏನೂ ಆಗುವುದಿಲ್ಲ. ವ್ಯಕ್ತಿತ್ವಗಳ ಜೊತೆ ಹೊಂದಾಣಿಕೆ ಮಾಡಿಕೊಳ್ಳಬೇಕು. ಇದಕ್ಕೆ ಪ್ರಾಮಾಣಿಕತೆ ಮತ್ತು ಬದ್ಧತೆ ಅತ್ಯಗತ್ಯವಾಗುತ್ತದೆ’ ಎಂದರು.

‘ಕೇಂದ್ರ ಸರ್ಕಾರವು ಜಾರಿಗೆ ತಂದಿರುವ, ಕೃಷಿಗೆ ಸಂಬಂಧಿಸಿದ ಮೂರು ಕಾಯ್ದೆಗಳನ್ನೂ ವಾಪಸ್ ಪಡೆಯುವವರೆಗೂ ಹೋರಾಟ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ರೈತರಿಗೆ ವಿಳಾಸವೇ ಇಲ್ಲದಂತಾಗುತ್ತದೆ. ಸುಳ್ಳುಗಳನ್ನು ಹೇಳಿ ಮೋಡಿ ಮಾಡುತ್ತಿರುವವರಿಗೆ ಪಾಠ ಕಲಿಸಬೇಕು’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.