
ಹುಕ್ಕೇರಿ: ಅವೈಜ್ಞಾನಿಕ ಕಾಮಗಾರಿ ತಡೆಗಟ್ಟಲು ಗುತ್ತಿಗೆದಾರರ ಸಭೆ ಜರುಗಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ ಹೇಳಿದರು.
ಅವರು ಮಂಗಳವಾರ ತಾಲ್ಲೂಕು ಪಂಚಾಯಿತಿ ಸಭಾ ಭವನದಲ್ಲಿ ಜರುಗಿದ ಕೆಡಿಪಿ ಸಭೆಯಲ್ಲಿ ಜನರು ಕುಂದು ಕೊರತೆ ಆಲಿಸಿದ ಬಳಿಕ ಮಾತನಾಡಿದರು.
‘ತಾಲ್ಲೂಕಿನಲ್ಲಿ ಕೈಗೊಂಡ ಜೆಜೆಎಂ ಕಾಮಗಾರಿ ಮಾಡುವಾಗ ರಸ್ತೆ ಅಗೆದು ಹದಗೆಡಿಸಿದ್ದಾರೆ. ಮಕ್ಕಳು, ಮಹಿಳೆಯರು ತಿರುಗಾಡಲು ಆಗುತ್ತಿಲ್ಲ. ರಸ್ತೆ ಪಕ್ಕದಲ್ಲೇ ತಗ್ಗು ಗುಂಡಿ ತೆಗೆದು ಹಾಗೆಯೇ ಬಿಟ್ಟಿದ್ದಾರೆ. ಕೆಲ ಗ್ರಾಮಗಳಲ್ಲಿ ರಸ್ತೆಯನ್ನೇ ಅಗೆದು ಹಾಗೆಯೇ ಬಿಟ್ಟಿದ್ದರಿಂದ ಒಂದು ಮಗು ಸಾವನ್ನಪ್ಪಿದೆ. ಗುತ್ತಿಗೆದಾರರ ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಗ್ರಾಮಗಳಲ್ಲಿ ರಸ್ತೆ ಹಾಳಾಗುತ್ತಿವೆ. ಜೊತೆಗೆ ಅಪಘಾತಗಳೂ ಸಂಭವಿಸುತ್ತಿವೆ’ ಎಂದು ವಿವಿಧ ಗ್ರಾಮಗಳಿಂದ ಆಗಮಿಸಿದ್ದ ಸಾರ್ವಜನಿಕರು ಒಕ್ಕೊರಲಿನಿಂದ ಆರೋಪಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಸತೀಶ ಜಾರಕಿಹೋಳಿ, ‘ಮುಂಬರುವ ದಿನಗಳಲ್ಲಿ ಎಲ್ಲ ಗುತ್ತಿಗೆದಾರರ ಸಭೆ ಕರೆದು ಈ ಕುರಿತು ಕೂಲಂಕಷವಾಗಿ ಚರ್ಚಿಸಲಾಗುವದು’ ಎಂದರು. ನಿಯಮ ಮೀರಿ ಈಗಾಗಲೇ ರಸ್ತೆ ಅಗೆದು ಕಾಮಗಾರಿ ಮಾಡುತ್ತಿರುವವರ ವಿರುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.
‘ರೈತರು ಎಮ್ಮೆ ಮತ್ತು ಹಸು ಸಾಕಬೇಕು. ಸಾವಯವ ಗೋಬ್ಬರ ಬಳಸಿ ನೈಸರ್ಗಿಕ ಕೃಷಿ ಅಳವಡಿಸಿಕೊಳ್ಳಬೇಕು’ ಎಂದು ಸಲಹೆ ನೀಡಿದರು.
ತಹಶೀಲ್ದಾರ್ ಬಲರಾಮ ಕಟ್ಟಿಮನಿ, ತಾಲ್ಲೂಕು ಪಂಚಾಯಿತಿ ಇಒ ಟಿ.ಆರ್. ಮಲ್ಲಾಡದ, ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಅಧ್ಯಕ್ಷ ಶಾನೂಲ್ ತಹಸೀಲ್ದಾರ್, ನಾಮ ನಿರ್ದೇಶನ ಸದಸ್ಯ ಬಸವರಾಜ ಕೋಳಿ, ಲಕ್ಷ್ಮಣ ಹೂಲಿ, ಪ್ರಕಾಶ ಗಾವಡಿ, ಸರ್ಪರಾಜ ಪೀರಜಾದೆ, ಮುಖಂಡರಾದ ಕಿರಣಸಿಂಗ್ ರಜಪೂತ, ರವೀಂದ್ರ ಜಿಂಡ್ರಾಳಿ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ದಸ್ತಗೀರ ಬಸ್ಸಾಪುರಿ, ಶಿವಾನಂದ ಮಗದುಮ್ಮ, ಅಪ್ಪಾಸಾಹೇಬ ಸಾರಾಪುರೆ, ಇಲಿಯಾಸ ಇನಾಂದಾರ್, ಗವನಾಳ ಕುಂದಿ, ತಮ್ಮಣಗೌಡ ಪಾಟೀಲ, ಚಂದು ಗಂಗನ್ನವರ, ಹಿರಿಯ ವಕೀಲ ಭೀಮಸೇನ ಬಾಗಿ, ಪುರಸಭೆ ಮಾಜಿ ಅಧ್ಯಕ್ಷ ಇಮ್ರಾನ ಮೊಮೀನ್, ವಿವಿಧ ಇಲಾಖೆ ಅಧಿಕಾರಿಗಳು ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.