ಚಿಕ್ಕೋಡಿ: ‘ಈಗಾಗಲೇ 55 ಶಾಖೆಗಳನ್ನು ಹೊಂದಿರುವ ಅಂಕಲಿಯ ಡಾ.ಪ್ರಭಾಕರ ಕೋರೆ ಕೋ ಅಪ್ ಕ್ರೆಡಿಟ್ ಸೊಸೈಟಿಯು, ಮುಂಬರುವ ದಿನಗಳಲ್ಲಿ ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಇನ್ನಷ್ಟು ಹೊಸ ಶಾಖೆಗಳನ್ನು ತೆರೆಯಲಿದೆ. ಪ್ರಸಕ್ತ ವರ್ಷ ಸೊಸೈಟಿಗೆ ₹25.30 ಕೋಟಿ ನಿವ್ವಳ ಲಾಭ ಬಂದಿದೆ’ ಎಂದು ಯುವ ಮುಖಂಡ ಅಮಿತ ಕೋರೆ ಹೇಳಿದರು.
ತಾಲ್ಲೂಕಿನ ಅಂಕಲಿ ಗ್ರಾಮದ ಶಿವಾಲಯ ಸಭಾಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪ್ರಭಾಕರ ಕೋರೆ ಕೋ ಅಪ್ ಕ್ರೆಡಿಟ್ ಸೊಸೈಟಿ (ಬಹುರಾಜ್ಯ)ಯ 2024-25ನೇ ಸಾಲಿನ 37ನೇ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ಮಾತನಾಡಿ,‘ಸಂಸ್ಥೆಯು ಕಡಿಮೆ ಬಡ್ಡಿದರದಲ್ಲಿ ಸಾಲ ವಿತರಣೆ, ಠೇವಣಿಗೆ ಹೆಚ್ಚಿನ ಬಡ್ಡಿದರ ನಿಗದಿ ಮಾಡುವ ಮೂಲಕ ರಾಷ್ಟ್ರೀಕೃತ ಬ್ಯಾಂಕುಗಳ ಜೊತೆಗೆ ಸ್ಪರ್ಧೆ ಮಾಡಿ ಬೆಳೆಯುತ್ತಿದೆ. ಸಂಸ್ಥೆಯ ಸದಸ್ಯರಿಗೆ ಶೇ 15ರಷ್ಟು ಲಾಭಾಂಶವನ್ನು ವಿತರಣೆ ಮಾಡಲಾಗುವುದು’ ಎಂದು ಹೇಳಿದರು.
ಸೊಸೈಟಿಯ ವ್ಯವಸ್ಥಾಪಕ ನಿರ್ದೇಶಕ ದೇವೇಂದ್ರ ಕರೋಶಿ, ‘97,727 ಸದಸ್ಯರನ್ನು ಹೊಂದಿರುವ ಸೊಸೈಟಿಯು ₹ 4.46 ಕೋಟಿ ಶೇರು ಬಂಡವಾಳ, ₹ 140.83 ಕೋಟಿ ಕಾಯ್ದಿಟ್ಟ ಹಾಗೂ ಇತರೆ ಒಟ್ಟು ನಿಧಿಗಳಿದ್ದು, ಸಾಲ ಮತ್ತು ಮುಂಗಡಗಳು ₹ 1063.56 ಕೋಟಿ ಇದ್ದು, ₹ 579.56 ಕೋಟಿ ಹೂಡಿಕೆಗಳಿದ್ದು, ₹ 1656.57 ಕೋಟಿ ದುಡಿಯುವ ಬಂಡವಾಳ ಇದೆ. ₹ 1511.28 ಕೋಟಿ ಠೇವಣಿ ಹೊಂದಿದೆ’ ಎಂದರು.
ಸಂಸ್ಥೆಯ ಅಧ್ಯಕ್ಷ ಮಹಾಂತೇಶ ಪಾಟೀಲ ಅಧ್ಯಕ್ಷತೆ ವಹಿಸಿದ್ದರು.
ಸಂಸ್ಥೆಯ ನಿರ್ದೇಶಕಿ ಪ್ರೀತಿ ದೊಡ್ಡವಾಡ, ಕೆಎಲ್‍ಇ ಸಂಸ್ಥೆಯ ಉಪಾಧ್ಯಕ್ಷ ಬಸವರಾಜ ತಟುವಟಗಿ, ಇನಾಮದಾರ ಸಕ್ಕರೆ ಕಾರ್ಖಾನೆಯ ನಿರ್ದೇಶಕ ವಿಜಯ ಮೆಟಗುಡ್ಡ, ಸಂಸ್ಥೆಯ ಉಪಾಧ್ಯಕ್ಷ ಸಿದ್ದಗೌಡ ಮಗದುಮ್ಮ, ಮಲ್ಲಿಕಾರ್ಜುನ ಕೋರೆ, ಅಣ್ಣಾಸಾಹೇಬ ಸಂಕೇಶ್ವರಿ, ಶೋಭಾ ಜಕಾತೆ, ಶೈಲಜಾ ಪಾಟೀಳ, ಪಾರ್ವತಿ ಧರನಾಯಕ, ಜಯಶ್ರೀ ಮೇದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.