ADVERTISEMENT

ಕೊರೊನಾ ನಿರ್ವಹಣೆ: ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ

ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಟೀಕೆ

​ಪ್ರಜಾವಾಣಿ ವಾರ್ತೆ
Published 23 ಏಪ್ರಿಲ್ 2021, 13:50 IST
Last Updated 23 ಏಪ್ರಿಲ್ 2021, 13:50 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಬೆಳಗಾವಿ: ‘ಕೊರೊನಾ ನಿರ್ವಹಣೆ ವಿಷಯದಲ್ಲಿ ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ; ಸೂಕ್ತ ಯೋಜನೆಯೂ ಇಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಟೀಕಿಸಿದರು.

ಇಲ್ಲಿ ಶುಕ್ರವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ‘ಕೊರೊನಾ 2ನೇ ಅಲೆ ಹರಡುವ ಬಗ್ಗೆ ತಜ್ಞರು ಹಿಂದೆಯೇ ತಿಳಿಸಿದ್ದರು. ಹೀಗಾಗಿ, ಸರ್ಕಾರ ಆಸ್ಪತ್ರೆಗಳ ತಯಾರಿ, ಹಾಸಿಗೆಗಳು, ವೈದ್ಯಕೀಯ ಆಕ್ಸಿಜನ್ ಸಿಲಿಂಡರ್ ಹಾಗೂ ಔಷಧಿಗಳ ಸಂಗ್ರಹಣೆ ಸೇರಿ ಅಗತ್ಯ ವ್ಯವಸ್ಥೆ ಮತ್ತು ಸಿದ್ಧತೆಗಳನ್ನು ಮಾಡಿಕೊಳ್ಳಬೇಕಿತ್ತು. ಸರ್ಕಾರದ ನಿರ್ಲಕ್ಷ್ಯದಿಂದ ಈಗ ಜನರಿಗೆ ಸಮಸ್ಯೆ ಆಗುತ್ತಿದೆ’ ಎಂದು ದೂರಿದರು.

‘ಬೆಂಗಳೂರು ಸೇರಿ ಬೇರೆ ಜಿಲ್ಲೆಗಳಿಗೆ ಹೋಲಿಸಿದರೆ ಬೆಳಗಾವಿ ಜಿಲ್ಲೆಯಲ್ಲಿ ಕೊರೊನಾ ನಿಯಂತ್ರಣದಲ್ಲಿದೆ. ಇಲ್ಲಿ ಅಧಿಕಾರಿಗಳು ಹಾಗೂ ಜನರು ಸಾಕಷ್ಟು ಎಚ್ಚರ ವಹಿಸುತ್ತಿದ್ದಾರೆ. ಆದರೂ ಕೂಡ ಇನ್ನು ಹೆಚ್ಚು ಸುರಕ್ಷತೆ ವಹಿಸಬೇಕಿದೆ. ಮಹಾರಾಷ್ಟ್ರದಿಂದ ರಾಜ್ಯಕ್ಕೆ ಬರುವ ಜನರನ್ನು ಗಡಿಭಾಗದ ಚೆಕ್ ಪೋಸ್ಟ್ ಗಳಲ್ಲಿ ಕಡ್ಡಾಯವಾಗಿ ಪರೀಕ್ಷೆ ಮಾಡಿ, ಅವರ ಮಾಹಿತಿ ಪಡೆದು ಒಳಬಿಡಬೇಕು. ಇನ್ನಷ್ಟು ಕಠಿಣ ನಿಯಮಗಳನ್ನು ಜಾರಿಗೊಳಿಸಬೇಕು" ಎಂದು ಸಲಹೆ ನೀಡಿದರು.

ADVERTISEMENT

ಶ್ರೀರಾಮುಲುಗೆ ಬುದ್ಧಿ ಹೇಳಲಿ:‘ಜನಸಂದಣಿ ತಪ್ಪಿಸುವ ನಿಟ್ಟಿನಲ್ಲಿ ಎಪಿಎಂಸಿಯ ತರಕಾರಿ ಮಾರುಕಟ್ಟೆ ಸ್ಥಳಾಂತರ ಕುರಿತು ಖುದ್ದಾಗಿ ಪರಿಶೀಲಿಸಿ, ಕ್ರಮ ಕೈಗೊಳ್ಳಲು ಸೂಚಿಸುವೆ. ನಗರದ ಎರಡು, ಮೂರು ಕಡೆ ಎಪಿಎಂಸಿಯ ಜಾಗಗಳಿವೆ. ಅಲ್ಲಿಗೆ ಸ್ಥಳಾಂತರಿಸಿ, ಜನರಿಗೆ ಅನುಕೂಲ ಕಲ್ಪಿಸಲಾಗುವುದು’ ಎಂದು ಶಾಸಕರೂ ಆಗಿರುವ ಸತೀಶ ತಿಳಿಸಿದರು.

‘ಉಪ ಚುನಾವಣೆ ಪ್ರಚಾರದ ಸಂದರ್ಭದಲ್ಲೂ ನಿರ್ಬಂಧ ಹೇರುವಂತೆ ಸಲಹೆ ನೀಡಿದ್ದೆವು. ಆದರೆ, ತಮ್ಮ ರಾಜಕೀಯಕ್ಕಾಗಿ ಸರ್ಕಾರ ಚುನಾವಣೆ ಮೇಲೆ ನಿರ್ಬಂಧ ಹೇರಲಿಲ್ಲ. ಕೊರೊನಾ ಹಿನ್ನೆಲೆಯಲ್ಲಿ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದ್ದರೂ ಬಳ್ಳಾರಿ ನಗರಪಾಲಿಕೆ ಚುನಾವಣೆಯಲ್ಲಿ ಸಚಿವ ಬಿ. ಶ್ರೀರಾಮುಲು ಅವರು ಬೃಹತ್ ಪ್ರಚಾರ ನಡೆಸುತ್ತಿರುವುದು ಸರಿಯಲ್ಲ. ಈ ಬಗ್ಗೆ ಸಚಿವರು ಎಚ್ಚರ ವಹಿಸಬೇಕು. ಮುಖ್ಯಮಂತ್ರಿಯೂ ಇವರಿಗೆ ಬುದ್ಧಿಮಾತು ಹೇಳಬೇಕು’ ಎಂದರು.

‘ಸರ್ಕಾರವು ದಿಢೀರನೆ ಭಾಗಶಃ ಲಾಕ್‌ಡೌನ್‌ ಮಾಡಿದ್ದು ಸರಿಯಲ್ಲ. ಮೊದಲೇ ತಿಳಿಸಿದ್ದರೆ ವ್ಯಾಪಾರಿಗಳೇ ಸಹಕಾರ ನೀಡುತ್ತಿದ್ದರು. ದಿಢೀರನೆ ಬಂದ್ ಮಾಡಿಸಿರುವುದು ಪಕ್ಷದ ನಿರ್ಧಾರವಾಗಿದೆ. ತಜ್ಞರ ಸಲಹೆ ಪಡೆಯದೆ ಪಕ್ಷದಿಂದ ತೀರ್ಮಾನ ಕೈಗೊಂಡರೆ ಇದೇ ರೀತಿ ಆಗುತ್ತದೆ. ಸರ್ಕಾರ ವ್ಯವಸ್ಥಿತವಾಗಿ ತೀರ್ಮಾನ ಕೈಗೊಳ್ಳುತ್ತಿಲ್ಲ. ಇದನ್ನು ಪಕ್ಷಾತೀತವಾಗಿ ಎಲ್ಲರೂ ವಿರೋಧಿಸಲೇಬೇಕು’ ಎಂದು ಕರೆ ನೀಡಿದರು.

ಕಾಂಗ್ರೆಸ್ ಗ್ರಾಮೀಣ ಜಿಲ್ಲಾ ಘಟಕದ ಅಧ್ಯಕ್ಷ ವಿನಯ ನಾವಲಗಟ್ಟಿ, ಎಐಸಿಸಿ ಗೋವಾ ವೀಕ್ಷಕ ಸುನೀಲ ಹನುಮಣ್ಣವರ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.