ADVERTISEMENT

ಬೆಳಗಾವಿ ಪಾಲಿಕೆ ಚುನಾವಣೆ: ಫಲಿತಾಂಶಕ್ಕೆ ಕ್ಷಣಗಣನೆ

‍‍ಪಾಲಿಕೆ ಗದ್ದುಗೆ ಯಾರಿಗೆ? ಸೋಮವಾರ ಸಿಗಲಿದೆ ಉತ್ತರ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2021, 12:19 IST
Last Updated 5 ಸೆಪ್ಟೆಂಬರ್ 2021, 12:19 IST
ಬೆಳಗಾವಿ ಮಹಾನಗರಪಾಲಿಕೆ
ಬೆಳಗಾವಿ ಮಹಾನಗರಪಾಲಿಕೆ   

ಬೆಳಗಾವಿ: ಇದೇ ಪ್ರಥಮ ಬಾರಿಗೆ ರಾಜಕೀಯ ಪಕ್ಷಗಳ ಸ್ಪರ್ಧೆಯಿಂದಾಗಿ ಗಮನಸೆಳೆದಿರುವ ಇಲ್ಲಿನ ಮಹಾನಗರಪಾಲಿಕೆ ಚುನಾವಣೆಯ ಫಲಿತಾಂಶ ಸೋಮವಾರ (ಸೆ.6) ಪ್ರಕಟಗೊಳ್ಳಲಿದೆ.

ನಗರದ ಕ್ಯಾಂಪ್‌ ಪ್ರದೇಶದಲ್ಲಿರುವ ಬಿ.ಕೆ. ಮಾಡೆಲ್‌ ಶಾಲೆಯಲ್ಲಿ ಬೆಳಿಗ್ಗೆ 8ರಿಂದ ಮತ ಎಣಿಕೆ ಆರಂಭವಾಗಲಿದೆ. ಇದಕ್ಕಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.

ಮತದಾನಕ್ಕೆ ವಿದ್ಯುನ್ಮಾನ ಮತಯಂತ್ರ(ಇವಿಎಂ)ಗಳನ್ನು ಬಳಸಿರುವುದರಿಂದಾಗಿ ಮಧ್ಯಾಹ್ನಕ್ಕೂ ಮುನ್ನವೇ ಸಂಪೂರ್ಣ ಫಲಿತಾಂಶ ಪ್ರಕಟಗೊಳ್ಳುವ ನಿರೀಕ್ಷೆ ಇದೆ.

ADVERTISEMENT

ಪಕ್ಷಕ್ಕೋ, ಪಕ್ಷೇತರರಿಗೋ?

ಇಲ್ಲಿ 58 ವಾರ್ಡ್‌ಗಳಿದ್ದು, 415 ಮತಗಟ್ಟೆಗಳಲ್ಲಿ ಶುಕ್ರವಾರ ನಡೆದ ಚುನಾವಣೆಯಲ್ಲಿ ಶೇ 50.42ರಷ್ಟು ಮತದಾನವಾಗಿತ್ತು. 385 ಅಭ್ಯರ್ಥಿಗಳು ಕಣದಲ್ಲಿದ್ದರು. ಮತದಾರರು ತಮ್ಮ ಪ್ರತಿನಿಧಿಯನ್ನಾಗಿ ಯಾರನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನುವುದನ್ನು ತಿಳಿದುಕೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಇದುವರೆಗೆ ಭಾಷೆ ಆಧಾರದ ಮೇಲೆ ನಡೆಯುತ್ತಿದ್ದ ಚುನಾವಣೆಯು ಈ ಬಾರಿ ರಾಜಕೀಯ ಪಕ್ಷಗಳ ಚಿಹ್ನೆಗಳ ಆಧಾರದ ಮೇಲೆ ನಡೆದಿದೆ. ಬಿಜೆಪಿ ಹಾಗೂ ಕಾಂಗ್ರೆಸ್‌ ಪಕ್ಷದವರು ಚುಣಾವಣೆಯಲ್ಲಿ ಪ್ರತಿಷ್ಠೆಯಾಗಿ ಸ್ವೀಕರಿಸಿದ್ದರು. ಅದರಲ್ಲೂ ಆಡಳಿತ ಪಕ್ಷವಾದ ಬಿಜೆಪಿಯ ಮುಖಂಡರ ದಂಡು ಪ್ರಚಾರ ಕಣಕ್ಕಿಳಿದಿತ್ತು. ಹೀಗಾಗಿ, ಫಲಿತಾಂಶವು ಜನರಲ್ಲಿ ಕುತೂಹಲ ಮೂಡಿಸಿದೆ.

ಅಧಿಕಾರದ ಗದ್ದುಗೆಯು ರಾಜಕೀಯ ಪಕ್ಷದವರಿಗೆ ಸಿಗುವುದೇ, ಪಕ್ಷೇತರರ ಕೈಮೇಲಾಗುವುದೇ ಎಂಬಿತ್ಯಾದಿ ಪ್ರಶ್ನೆಗಳಿಗೆ ಮತದಾರರು ನೀಡಿರುವ ಉತ್ತರವು ಸೋಮವಾರ ಬಹಿರಂಗಗೊಳ್ಳಲಿದೆ.

12 ಕೊಠಡಿಗಳಲ್ಲಿ ವ್ಯವಸ್ಥೆ

ಮತ ಏಣಿಕೆಗಾಗಿ 12 ಕೊಠಡಿಗಳಲ್ಲಿ ವ್ಯವಸ್ಥೆ ಮಾಡಲಾಗಿದೆ. ಒಂದು ಕೊಠಡಿಯಲ್ಲಿ ಎರಡು ಟೇಬಲ್‌ಗಳನ್ನು ಇಡಲಾಗಿದೆ. ಒಂದು ಅಂಚೆ ಮತಪತ್ರದ ಎಣಿಕೆ ನಡೆಯಲಿದೆ. ಎಲ್ಲವೂ ಸೇರಿ 24 ಟೇಬಲ್‍ಗಳ ವ್ಯವಸ್ಥೆ ಮಾಡಲಾಗಿದ್ದು, ಏಕಕಾಲದಲ್ಲಿ 24 ವಾರ್ಡ್‌ಗಳಲ್ಲಿನ ಮತ ಎಣಿಕೆ ನಡೆಯಲಿದೆ. ಚುನಾವಣಾಧಿಕಾರಿ/ ಸಹಾಯಕ ಚುನಾವಣಾಧಿಕಾರಿಯಾಗಿ 12 ಮಂದಿ ಕಾರ್ಯನಿರ್ವಹಿಸಲಿದ್ದಾರೆ. ಪ್ರತಿ ಕೊಠಡಿಗೆ ಎಣಿಕೆ ಮೇಲ್ವಿಚಾರಕರಾಗಿ ಮೂವರು ಹಾಗೂ ಎಣಿಕೆ ಸಹಾಯಕರಾಗಿ ಆರು ಮಂದಿಯನ್ನು ನಿಯೋಜಿಸಲಾಗಿದೆ. ಪ್ರತಿ ಅಭ್ಯರ್ಥಿಗೆ ಇಬ್ಬರು ಕೌಂಟಿಂಗ್ ಏಜೆಂಟರಿಗೆ ಅವಕಾಶ ಕೊಡಲಾಗಿದೆ.

ಪ್ರತಿ ಚುಣಾವಣಾಧಿಕಾರಿಗೆ ಸಂಬಂಧಿಸಿದ ಐದು ವಾರ್ಡ್‌ಗಳಂತೆ, ಅಭ್ಯರ್ಥಿಗಳು ಹಾಗೂ ಏಜೆಂಟರಿಗೆ ಆಸನದ ವ್ಯವಸ್ಥೆ ಮಾಡಲಾಗಿದೆ. ಯಾವ ವಾರ್ಡ್‌ನ ಮತ ಎಣಿಕೆ ಪ್ರಾರಂಭವಾಗುತ್ತದೆಯೋ ಆ ವಾರ್ಡ್‌ನ ಅಭ್ಯರ್ಥಿಗಳು, ಏಜೆಂಟರು ಮತ್ತು ಕೌಂಟಿಂಗ್ ಏಜೆಂಟರಿಗೆ ಮತ ಎಣಿಕೆ ಕೊಠಡಿಗೆ ಕಳುಹಿಸಿಕೊಡಲಾಗುವುದು. ವಿಜೇತರಿಗೆ ಸಂಬಂಧಿಸಿದ ಚುನಾವಣಾಧಿಕಾರಿ ಕೊಠಡಿಯಲ್ಲಿ ಪ್ರಮಾಣಪತ್ರವನ್ನು ವಿತರಿಸಲಾಗುವುದು ಎಂದು ಜಿಲ್ಲಾ ಚುನಾವಣಾಧಿಕಾರಿ ಕಚೇರಿ ಪ್ರಕಟಣೆ ತಿಳಿಸಿದೆ.

ಮತ ಎಣಿಕೆ ಹಿನ್ನೆಲೆಯಲ್ಲಿ ಬೆಳಗಾವಿ ತಾಲ್ಲೂಕಿನಲ್ಲಿ ಅಂದು ಬೆಳಿಗ್ಗೆ 6ರಿಂದ ಮಧ್ಯರಾತ್ರಿ 12ರವರೆಗೆ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ. ಐವರಿಗಿಂತ ಹೆಚ್ಚಿನವರು ಗುಂಪು ಸೇರುವುದು, ಮೆರವಣಿಗೆ, ಸಭೆ–ಸಮಾರಂಭ ನಿಷೇಧಿಸಲಾಗಿದೆ. ಆದೇಶ ಉಲ್ಲಂಘಿಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ತಿಳಿಸಿದ್ದಾರೆ.

ಮುಂಜಾಗ್ರತಾ ಕ್ರಮವಾಗಿ ಪೊಲೀಸ್ ಬಂದೋಬಸ್ತ್‌ ಮಾಡಲಾಗಿದೆ.

ಅಂಕಿ ಅಂಶ

58:ವಾರ್ಡ್‌

385: ಕಣದಲ್ಲಿರುವ ಒಟ್ಟು ಅಭ್ಯರ್ಥಿಗಳು

55: ಬಿಜೆಪಿ

45: ಕಾಂಗ್ರೆಸ್

27: ಆಮ್‌ ಆದ್ಮಿ ಪಕ್ಷ

11: ಜೆಡಿಎಸ್‌

7: ಎಐಎಂಐಎಂ ಪಕ್ಷ

1: ಉತ್ತಮ ಪ್ರಜಾಕೀಯ ಪಕ್ಷ

1: ಎಸ್‌ಡಿಪಿಐ ಪಕ್ಷ

238: ಪಕ್ಷೇತರರು

ಶೇ 50.42: ನಡೆದಿರುವ ಮತದಾನ

ಮುಖ್ಯಾಂಶಗಳು

ಬಿ.ಕೆ. ಮಾಡೆಲ್ ಶಾಲೆಯಲ್ಲಿ ಮತ ಎಣಿಕೆ

ಬೆಳಗಾವಿ ತಾಲ್ಲೂಕಿನಾದ್ಯಂತ ನಿಷೇಧಾಜ್ಞೆ

ಮೆರವಣಿಗೆಗೆ ಅವಕಾಶವಿಲ್ಲ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.